ಬಿಜೆಪಿ, ಆರ್‌ಎಸ್‌ಎಸ್ ಭಾರತದಲ್ಲಿ ದ್ವೇಷ, ಹಿಂಸಾಚಾರವನ್ನು ಹರಡುತ್ತಿದೆ; ಪೂಂಚ್‌ನಲ್ಲಿ ರಾಹುಲ್ ಗಾಂಧಿ ಟೀಕೆ

|

Updated on: Sep 23, 2024 | 5:11 PM

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಇಂದು ಜಮ್ಮು ಕಾಶ್ಮೀರದ ಪೂಂಚ್​ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ "ಮನ್ ಕಿ ಬಾತ್" ಬಗ್ಗೆ ಮಾತನಾಡುತ್ತಾರೆಯೇ ವಿನಃ "ಕಾಮ್ ಕಿ ಬಾತ್" ಅಲ್ಲ ಎಂದು ಟೀಕಿಸಿದ್ದಾರೆ.

ಬಿಜೆಪಿ, ಆರ್‌ಎಸ್‌ಎಸ್ ಭಾರತದಲ್ಲಿ ದ್ವೇಷ, ಹಿಂಸಾಚಾರವನ್ನು ಹರಡುತ್ತಿದೆ; ಪೂಂಚ್‌ನಲ್ಲಿ ರಾಹುಲ್ ಗಾಂಧಿ ಟೀಕೆ
ರಾಹುಲ್ ಗಾಂಧಿ
Follow us on

ಪೂಂಚ್: ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೇಶಾದ್ಯಂತ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್​ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಆರ್​ಎಸ್​ಎಸ್​ ನಾಯಕರು ಎಲ್ಲೇ ಹೋದರೂ ಜಾತಿ, ಧರ್ಮ, ರಾಜ್ಯ ಮತ್ತು ಭಾಷೆಗಳ ನಡುವೆ ಒಡಕು ಮೂಡಿಸಿ, ಸಂಘರ್ಷ ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಬಿಜೆಪಿಯು ಪಹಾರಿ ಮತ್ತು ಗುಜ್ಜರ್ ಸಮುದಾಯದ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದೆ ಎಂದ ರಾಹುಲ್ ಗಾಂಧಿ ಬಿಜೆಪಿಯ ಈ ಯೋಜನೆ ವಿಫಲವಾಗಲಿದೆ ಎಂದು ಹೇಳಿದ್ದಾರೆ.

ದ್ವೇಷವನ್ನು ಪ್ರೀತಿಯಿಂದ ಮಾತ್ರ ಜಯಿಸಲು ಸಾಧ್ಯ. ಒಂದು ಕಡೆ ದ್ವೇಷವನ್ನು ಹರಡುವವರಿದ್ದಾರೆ ಮತ್ತು ಇನ್ನೊಂದು ಕಡೆ ಪ್ರೀತಿಯನ್ನು ಪ್ರಚಾರ ಮಾಡುವವರು ಇದ್ದಾರೆ. ಕಾಂಗ್ರೆಸ್ ಎಲ್ಲರನ್ನು ಒಟ್ಟುಗೂಡಿಸುವ ಮೂಲಕ ಮತ್ತು ಎಲ್ಲರಿಗೂ ಅವರ ಹಕ್ಕುಗಳನ್ನು ನೀಡುವ ಮೂಲಕ ಮುಂದೆ ಸಾಗುತ್ತಿದೆ. ಕಾಂಗ್ರೆಸ್​ಗೆ ಎಲ್ಲರೂ ಸಮಾನರು. ನಾವು ಯಾರನ್ನೂ ಹಿಂದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಜಮ್ಮು ಕಾಶ್ಮೀರವನ್ನು ಮತ್ತೆ ಭಯೋತ್ಪಾದನೆಗೆ ತಳ್ಳಲು ಬಯಸುತ್ತಿವೆ: ಅಮಿತ್ ಶಾ

ಆದರೆ, ಬಿಜೆಪಿಯವರು ಜನರ ನಡುವೆ ವಿಷಬೀಜ ಬಿತ್ತಿ, ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಜನರು ಏನು ಬಯಸುತ್ತಾರೆಯೋ ಆ ಕುರಿತು ಸಂಸತ್ತಿನಲ್ಲಿ ಅವರ ಸಮಸ್ಯೆಯನ್ನು ಪರಿಹರಿಸಲು ನಾನು ಸಿದ್ಧನಿದ್ದೇನೆ. ತಮಗೆ ಏನು ಬೇಕೆಂದು ಜಮ್ಮು ಮತ್ತು ಕಾಶ್ಮೀರದ ಜನರು ನನಗೆ ಸೂಚನೆ ನೀಡಿ ಎಂದು ರಾಹುಲ್ ಹೇಳಿದ್ದಾರೆ.


ಹೆಚ್ಚುತ್ತಿರುವ ನಿರುದ್ಯೋಗದ ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ವಿದ್ಯಾವಂತ ವ್ಯಕ್ತಿಗಳಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು. ವಿದ್ಯಾವಂತರಿಗೆ ಉದ್ಯೋಗ ಸಿಗದ ಕಾರಣ ದೇಶದಾದ್ಯಂತ ನಿರುದ್ಯೋಗ ಹೆಚ್ಚುತ್ತಿದೆ. ಇದು ನರೇಂದ್ರ ಮೋದಿಯವರ ಸರ್ಕಾರದ ಕೊಡುಗೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ಭಾರತವನ್ನು ಕಾಂಗ್ರೆಸ್ ಅವಮಾನಿಸಿದೆ; ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಸೆಪ್ಟೆಂಬರ್ 18ರಂದು, ಎರಡನೇ ಹಂತದ ಮತದಾನ ಸೆಪ್ಟೆಂಬರ್ 25ರಂದು ಮತ್ತು ಮೂರನೇ ಹಂತದ ಮತದಾನ ಅಕ್ಟೋಬರ್ 1ರಂದು ನಡೆಯಲಿದೆ. ಮತ ಎಣಿಕೆ ಅಕ್ಟೋಬರ್ 8ರಂದು ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ