Shami: ಬಂಗಾಳ ಕದನದಲ್ಲಿ ಕ್ರಿಕೆಟಿಗರ ಆಟ; ಅತ್ತ ಟಿಎಂಸಿಯಿಂದ ಪಠಾಣ, ಇತ್ತ ಬಿಜೆಪಿಯಿಂದ ಶಮಿ ಕಣಕ್ಕಿಳಿಸಲು ಯತ್ನ
BJP Trying to Rope in Cricket Mohammed Shami: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಶೀರ್ಹಾಟ್ ಕ್ಷೇತ್ರದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಸುದ್ದಿ ಇದೆ. ಯೂಸುಫ್ ಪಠಾಣ್ ಅವರಿಗೆ ಬೆಹ್ರಾಮ್ಪುರ್ ಕ್ಷೇತ್ರದ ಟಿಕೆಟ್ ಅನ್ನು ಟಿಎಂಸಿ ನೀಡಿದ ಬಳಿಕ ಶಮಿ ಬಿಜೆಪಿ ಸೇರ್ಪಡೆ ಸಾಧ್ಯತೆ ಬಗ್ಗೆ ಸುದ್ದಿ ದಟ್ಟವಾಗುತ್ತಿದೆ. ಮೊಹಮ್ಮದ್ ಶಮಿ ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಬಿಜೆಪಿ ಸೇರ್ಪಡೆ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಕೋಲ್ಕತಾ, ಮಾರ್ಚ್ 10: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಿನಿ ತಾರೆಯರ ಕಲರವ ಹೆಚ್ಚಾಗಿತ್ತು, ಈಗ ಕ್ರಿಕೆಟಿಗರ ಆಟ ಶುರುವಾಗುವಂತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಬಂಗಾಳದ ಬೆಹ್ರಾಂಪುರ್ (Behrampur constituency) ಕ್ಷೇತ್ರದ ಟಿಕೆಟ್ ಅನ್ನು ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ನೀಡಿದೆ. ಇತ್ತ ಬಿಜೆಪಿ ಕೂಡ ಮೊಹಮ್ಮದ್ ಶಮಿಯನ್ನು ಪಶ್ಚಿಮ ಬಂಗಾಳದಲ್ಲಿ ಚುಣಾವಣೆಗೆ ನಿಲ್ಲಿಸಲು ಯೋಜಿಸಿದೆ ಎನ್ನುವಂತಹ ವದಂತಿಯು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರ ಪ್ರಕಾರ ಮೊಹಮ್ಮದ್ ಶಮಿ (Mohammed Shami) ಅವರನ್ನು ಬಂಗಾಳದ ಬಶೀರ್ಹಾಟ್ (Basirhat) ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಹೊರಟಿದೆ ಎನ್ನಲಾಗುತ್ತಿದೆ.
ಬಿಜೆಪಿಯ ನಾಯಕರು ಮೊಹಮ್ಮದ್ ಶಮಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಬೆಳವಣಿಗೆ ಈ ವದಂತಿಗೆ ಕಾರಣವಾಗಿದೆ. ಶಮಿ ಅವರನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಆಲೋಚನೆ ಬಿಜೆಪಿಯಲ್ಲಿದ್ದು, ಅಂಥದ್ದೊಂದು ಪ್ರಸ್ತಾವವನ್ನು ಶಮಿ ಮುಂದಿಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ವದಂತಿ ಪ್ರಕಾರವೇ, ಮೊಹಮ್ಮದ್ ಶಮಿ ಬಿಜೆಪಿಯನ್ನು ಸೇರುವ ಬಗ್ಗೆಯಾಗಲೀ, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯಾಗಲೀ ಇನ್ನೂ ನಿರ್ಧಾರ ತಿಳಿಸಿಲ್ಲ.
ಇದನ್ನೂ ಓದಿ: ರಾಜಕೀಯ ಅಖಾಡಕ್ಕೆ ಯೂಸುಫ್ ಪಠಾಣ್: ಕಾಂಗ್ರೆಸ್ ವಿರುದ್ಧ ಸ್ಪರ್ಧೆ
ಸದ್ಯ ಗಾಯದ ಕಾರಣದಿಂದ ಕ್ರಿಕೆಟ್ನಿಂದ ಅಲ್ಪ ವಿರಾಮ ಪಡೆದಿರುವ ಮೊಹಮ್ಮದ್ ಶಮಿ ಇತ್ತೀಚೆಗೆ ಓಡಿಐ ವಿಶ್ವಕಪ್ ಆಡಿದ್ದೇ ಕೊನೆ. ಈ ವರ್ಲ್ಡ್ ಕಪ್ನಲ್ಲಿ ಶಮಿ ಅವರ ಬೌಲಿಂಗ್ ಹೈಲೈಟ್ ಎನಿಸಿತ್ತು. ಭಾರತ ಫೈನಲ್ ತಲುಪಲು ಪ್ರಮುಖ ಕಾರಣಕರ್ತರಲ್ಲಿ ಶಮಿ ಕೂಡ ಒಬ್ಬರು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ಗೆ ಹೋಗಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದರು. ಈ ವೇಳೆ ಮೊಹಮ್ಮದ್ ಶಮಿ ಅವರನ್ನು ಮೋದಿ ತಬ್ಬಿಕೊಂಡ ದೃಶ್ಯ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಮೊಹಮ್ಮದ್ ಶಮಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಶಮಿ ಅವರ ಹುಟ್ಟೂರಾದ ಉತ್ತರಪ್ರದೇಶದ ಅಮ್ರೋಹಾದಲ್ಲಿ ಕ್ರಿಕೆಟ್ ಸ್ಟೇಡಿಯಂ ಕಟ್ಟುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದರು. ಇವೆಲ್ಲಾ ಬೆಳವಣಿಗೆಗಳಿದ್ದ ಹಿನ್ನೆಲೆಯಲ್ಲಿ ಮೊಹಮ್ಮದ್ ಶಮಿ ಬಿಜೆಪಿ ಸೇರ್ಪಡೆ ಆಗಬಹುದು ಎಂಬ ವದಂತಿಯನ್ನು ಗಟ್ಟಿಗೊಳಿಸಿದೆ.
ಶಮಿಯನ್ನು ಕಣಕ್ಕಿಳಿಸಬಹುದೆನ್ನಲಾಗುತ್ತಿರುವ ಬಶೀರ್ಹಾಟ್ ಕ್ಷೇತ್ರದಲ್ಲಿ ಟಿಎಂಸಿ ಪಕ್ಷ ಹಾಜಿ ನೂರುಲ್ ಇಸ್ಲಾಮ್ ಅವರನ್ನು ಸ್ಪರ್ಧೆಗೆ ನಿಲ್ಲಿಸಿದೆ. ಶಮಿ ನಿಜವಾಗಿಯೂ ಬಿಜೆಪಿಯಿಂದ ಸ್ಪರ್ಧಿಸಿದರೆ, ಈ ಟಿಎಂಸಿ ಭದ್ರಕೋಟೆಯಲ್ಲಿ ಅವರು ಎಷ್ಟರಮಟ್ಟಿಗೆ ಸಾಧನೆ ಮಾಡಬಲ್ಲರು ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: 42 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಿಸಿದ ಟಿಎಂಸಿ, ಕಣದಲ್ಲಿ ಮಹುವಾ ಮೊಯಿತ್ರಾ
ಟಿಎಂಸಿ ಪಕ್ಷ ಯೂಸುಫ್ ಪಠಾಣ್ ಅವರನ್ನು ಬೆಹರಾಮ್ಪುರ್ನಿಂದ ಕಣಕ್ಕಿಳಿಸಿದೆ. ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರಿಗೆ ಬರ್ದಮಾನ್ ದುರ್ಗಾಪುರ್ ಕ್ಷೇತ್ರದ ಟಿಕೆಟ್ ಸಿಕ್ಕಿದೆ.
ಶತ್ರುಘ್ನ ಸಿನ್ಹಾ, ಹಾಜಿ ನೂರುಲ್ ಇಸ್ಲಾಮ್, ಅಭಿಷೇಕ್ ಬ್ಯಾನರ್ಜಿ, ಪ್ರಸುನ್ ಬ್ಯಾನರ್ಜಿ, ಪ್ರತಿಮಾ ಮೊಂಡಲ್, ಸುದೀಪ್ ಬಂಡೋಪಾಧ್ಯಾಯ್, ಮಹುವಾ ಮೊಯಿತ್ರಾ, ಶಾಹನವಾಜ್ ಅಲಿ ರಿಜ್ವಾನ್ ಮೊದಲಾದ ಪ್ರಮುಖರಿಗೆ ಟಿಎಂಸಿ ಪಕ್ಷ ಟಿಕೆಟ್ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ