ಮಧ್ಯಪ್ರದೇಶ: ಮಾನಸಿಕ ಅಸ್ವಸ್ಥ ವೃದ್ಧನಿಗೆ ಬಿಜೆಪಿ ಕಾರ್ಯಕರ್ತ ಥಳಿಸುತ್ತಿರುವ ವಿಡಿಯೊ ವೈರಲ್; ವೃದ್ಧ ಸಾವು, ಆರೋಪಿ ಬಂಧನ
ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರವಾಲ್, "ಘಟನೆ ದುರದೃಷ್ಟಕರ, ಆರೋಪಿ ಆರೋಪಿಯೇ ಹೊರತು ಪಕ್ಷ ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಅಂತಹ ಕೃತ್ಯದಲ್ಲಿ ಭಾಗಿಯಾಗಿರುವ ಯಾರನ್ನೂ ರಾಜ್ಯ ಸರ್ಕಾರವು ಬಿಡುವುದಿಲ್ಲ" ಎಂದು ಹೇಳಿದ್ದಾರೆ.
ಭೋಪಾಲ್: ಮಧ್ಯಪ್ರದೇಶದ (Madhya Pradesh) ಬಿಜೆಪಿ ಕಾರ್ಯಕರ್ತನೊಬ್ಬ ವೃದ್ಧನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ವೈರಲ್ (Viral Video) ಆದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ. ಮಾನಸಿಕ ಅಸ್ವಸ್ಥರಾಗಿದ್ದ ಆ ಹಿರಿಜೀವ ಶವವಾಗಿ ಪತ್ತೆಯಾಗಿದ್ದರು. ಹಲ್ಲೆ ನಡೆಸಿದ ವ್ಯಕ್ತಿ ದಿನೇಶ್ ಕುಶ್ವಾಹ ಬಿಜೆಪಿಯ (BJP) ಮಾಜಿ ಕಾರ್ಪೋರೇಟರ್ ಪತಿ ಮತ್ತು ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ನೀಮಚ್ ಜಿಲ್ಲೆಯಲ್ಲಿ ಕೊಲೆ ಮತ್ತು ನಿರ್ಲಕ್ಷ್ಯದಿಂದ ಸಾವು ಸೆಕ್ಷನ್‌ಗಳ ಅಡಿಯಲ್ಲಿ ಕುಶ್ವಾಹ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ವೃದ್ಧ ಭನ್ವರ್‌ಲಾಲ್ ಜೈನ್ ರತ್ಲಾಮ್ ಜಿಲ್ಲೆಯ ಸರ್ಸಿಯವರಾಗಿದ್ದು, ರಾಜಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಂತರ ಮೇ 15 ರಂದು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿದ್ದಾರೆ ಎಂಬ ದೂರಿನ ನಂತರ ಪೊಲೀಸರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ಶನಿವಾರ ಅವರ ಮೃತದೇಹ ನೀಮಚ್ ಜಿಲ್ಲೆಯ ರಸ್ತೆಯೊಂದರಲ್ಲಿ ಪತ್ತೆಯಾಗಿತ್ತು. ಅದನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ವೃದ್ಧನ ಬಳಿ ಬಂದು ನಿಮ್ಮ ಹೆಸರು ಮೊಹಮ್ಮದ್ ಹೌದೇ ಎಂದು ಕೇಳುತ್ತಾನೆ. ಉತ್ತರಿಸಲು ವೃದ್ಧ ಹೆಣಗಾಡುತ್ತಿರುವಾಗ ಪದೇ ಪದೇ ಆತನ ಮೇಲೆ ಹಲ್ಲೆ ಮಾಡುತ್ತಾನೆ. ಹಿರಿಯ ವ್ಯಕ್ತಿಯ್ಲಲಿ ಪ್ರಶ್ನೆಗಳನ್ನು ಕೇಳುತ್ತಾ ಅವರ ಕಪಾಳಕ್ಕೆ ಹೊಡೆಯುತ್ತಿರುವುದು ಕಾಣುತ್ತದೆ. “ನಿಮ್ಮ ಹೆಸರನ್ನು ಸರಿಯಾಗಿ ಹೇಳಿ, ನಿಮ್ಮ ಆಧಾರ್ ಕಾರ್ಡ್ ತೋರಿಸಿ” ಎಂದು ಆತ ಹೇಳುತ್ತಿರುವುದು ವಿಡಿಯೊದಲ್ಲಿದೆ .
65ರ ಹರೆಯದ ಆ ಹಿರಿಯ ವ್ಯಕ್ತಿ ಏನು ಮಾಡಬೇಕೆಂದು ತೋಚದೆ ಚಡಪಡಿಸುತ್ತಿರುವುದು ಕಾಣುತ್ತದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕೂಡಲೇ ಜೈನ್ ಅವರ ಕುಟುಂಬ ಪೊಲೀಸರಿಗೆ ದೂರು ನೀಡಿದ್ದು ಕುಶ್ವಾಹನನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಎಫ್‌ಐಆರ್ ದಾಖಲಾದ ಪೊಲೀಸ್ ಠಾಣೆಯ ಉಸ್ತುವಾರಿ ಕೆಎಲ್ ಡಾಂಗಿ ಅವರು ಈ ವಿಡಿಯೊವನ್ನು ಗುರುವಾರ ಚಿತ್ರೀಕರಿಸಿದ್ದಿರಬಹುದು ಎಂದಿದ್ದಾರೆ.
ವಿಡಿಯೊ ಹೊರಬಿದ್ದ ಬಳಿಕ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಬಿಜೆಪಿ ದ್ವೇಷದ ಕುಲುಮೆಯನ್ನು ಹೊತ್ತಿಸಿದೆ ಎಂದು ಕಾಂಗ್ರೆಸ್ ಶಾಸಕ ಜಿತು ಪಟ್ವಾರಿ ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರವಾಲ್, “ಘಟನೆ ದುರದೃಷ್ಟಕರ, ಆರೋಪಿ ಆರೋಪಿಯೇ ಹೊರತು ಪಕ್ಷ ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಅಂತಹ ಕೃತ್ಯದಲ್ಲಿ ಭಾಗಿಯಾಗಿರುವ ಯಾರನ್ನೂ ರಾಜ್ಯ ಸರ್ಕಾರವು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ