ಶಿವಕಾಶಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ; 4 ಮಂದಿ ಸಾವು, ಹಲವರಿಗೆ ಗಾಯ

ಶಿವಕಾಶಿ ಸುತ್ತಮುತ್ತ ಪಟಾಕಿ ತಯಾರಿಕೆ ಮಾಡುವ ಸಾವಿರಾರು ಕಾರ್ಖಾನೆಗಳಿವೆ. ಅದರಲ್ಲೀಗ ಶಿವಕಾಶಿ ಪಕ್ಕದಲ್ಲೇ ಪುಥುಪಟ್ಟಿ ಎಂಬಲ್ಲಿರುವ ಒಂದು ಖಾಸಗಿ ಕಾರ್ಖಾನೆಯಲ್ಲಿ ಸ್ಫೋಟವುಂಟಾಗಿದ್ದಾಗಿ ವರದಿಯಾಗಿದೆ.

ಶಿವಕಾಶಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ; 4 ಮಂದಿ ಸಾವು, ಹಲವರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jan 01, 2022 | 11:47 AM

ಭಾರತದ ಪ್ರಸಿದ್ಧ ಪಟಾಕಿ ತಯಾರಿಕಾ ಸ್ಥಳ, ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆ (Sivakasi Firecracker Factory) ಯೊಂದರಲ್ಲಿ ಸ್ಫೋಟವುಂಟಾಗಿ, ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.  ಈ ಶಿವಕಾಶಿ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿದ್ದು, ಸದ್ಯ ಸ್ಫೋಟದಿಂದ ಧ್ವಂಸಗೊಂಡ ಕಾರ್ಖಾನೆ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ, ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಅಪಾಯದಲ್ಲಿರುವವರನ್ನು ರಕ್ಷಿಸಲಾಗುತ್ತಿದೆ. ಹಾಗೇ, ಮೃತದೇಹಗಳನ್ನು ಹೊರತೆಗೆಯುವ ಕಾರ್ಯವೂ ನಡೆಯುತ್ತಿದೆ.  ಈ ನಾಲ್ವರೂ ಕೂಡ ಸಜೀವ ದಹನಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಶಿವಕಾಶಿ ಸುತ್ತಮುತ್ತ ಪಟಾಕಿ ತಯಾರಿಕೆ ಮಾಡುವ ಸಾವಿರಾರು ಕಾರ್ಖಾನೆಗಳಿವೆ. ಅದರಲ್ಲೀಗ ಶಿವಕಾಶಿ ಪಕ್ಕದಲ್ಲೇ ಪುಥುಪಟ್ಟಿ ಎಂಬಲ್ಲಿರುವ ಒಂದು ಖಾಸಗಿ ಕಾರ್ಖಾನೆಯಲ್ಲಿ ಸ್ಫೋಟವುಂಟಾಗಿದ್ದಾಗಿ ವರದಿಯಾಗಿದೆ. ಕೊಠಡಿಯೊಂದರಲ್ಲಿ ಸ್ಫೋಟವುಂಟಾದ ಹೊತ್ತಲ್ಲಿ, ಕಾರ್ಖಾನೆಯಲ್ಲಿ 30ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ರಭಸಕ್ಕೆ ಫ್ಯಾಕ್ಟರಿಯ ಎರಡು ಕೋಣೆಗಳು ಸಂಪೂರ್ಣ ಧ್ವಂಸಗೊಂಡಿವೆ.

ತಮಿಳುನಾಡಿನ ಶಿವಕಾಶಿಯನ್ನು ಭಾರತದ ಪಟಾಕಿ ತಯಾರಿಕೆಗಳ ರಾಜಧಾನಿ ಎಂದೇ ಕರೆಯಲಾಗುತ್ತದೆ. ಹಾಗೇ, ಇದು ಅತ್ಯಂತ ಅಪಾಯಕಾರಿ ಸ್ಥಳವೂ ಹೌದು. ಇಲ್ಲಿ ಸ್ಫೋಟ, ಬೆಂಕಿ ದುರಂತಗಳು ಪದೇಪದೆ ನಡೆಯುತ್ತಿರುತ್ತವೆ. ಸಾವು ನೋವು ನಿರಂತರ ಎಂಬಂತೆ ಆಗಿಬಿಟ್ಟಿದೆ. ಕಳೆದ ವರ್ಷ 12ಕ್ಕೂ ಹೆಚ್ಚು ಪಟಾಕಿ ತಯಾರಿಕಾ ಕಾರ್ಖಾನೆಗಳು ಸ್ಫೋಟಗೊಂದು ಒಟ್ಟಾರೆ 50ಕ್ಕೂ ಹೆಚ್ಚು ಮಂದಿಯ ಜೀವ ಹೋಗಿತ್ತು. 2021ರ ಫೆಬ್ರವರಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ಅಗ್ನಿದುರಂತವಾಗಿ ಆರು ಮಂದಿ ಸಾವನ್ನಪ್ಪಿದ್ದರು. 2013ರಲ್ಲಿ ಅತಿದೊಡ್ಡ ಮಟ್ಟದ ದುರಂತ ನಡೆದಿತ್ತು. ಇಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟವಾಗಿ, ಬೆಂಕಿ ಹೊತ್ತಿಕೊಂಡ ಪರಿಣಾಮ 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸುಮಾರು 70 ಜನ ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ: ರಾಯಚೂರು ಸರ್ಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ, ಬಾಡೂಟ; ಮುಖ್ಯೋಪಾಧ್ಯಾಯರಿಂದ ದೂರು ದಾಖಲು

Published On - 11:39 am, Sat, 1 January 22