ಮುಂಬೈ ಕಿರೀಟವನ್ನು ಮುಡಿಗೇರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ; 25 ವರ್ಷಗಳ ಬಳಿಕ ಠಾಕ್ರೆ ಭದ್ರಕೋಟೆ ಪತನ

BMC Election Results: ಈ ಬಾರಿ ಎಲ್ಲರೂ ನಿರೀಕ್ಷೆ ಮಾಡಿದ್ದಂತೆ ಮಹಾರಾಷ್ಟ್ರದ ಬಿಎಂಸಿ (ಬೃಹನ್​ಮುಂಬೈ ಮುನ್ಸಿಪಲ್ ಕಾರ್ಪೋರೇಷನ್) ಚುನಾವಣೆಯಲ್ಲಿ ಠಾಕ್ರೆ ಸೋದರರಿಗೆ ಭಾರೀ ಮುಖಭಂಗವಾಗಿದೆ. ಬಿಜೆಪಿ-ಶಿವಸೇನೆ ಮೈತ್ರಿಯ ಮಹಾಯುತಿ ಭಾರೀ ಗೆಲುವು ಕಾಣುವ ಮೂಲಕ ಇತಿಹಾಸ ಸೃಷ್ಟಿಸಿದೆ. 25 ವರ್ಷಗಳ ಕಾಲ ಉದ್ಧವ್ ಠಾಕ್ರೆಯ ಭದ್ರಕೋಟೆಯಾಗಿದ್ದ ಬಿಎಂಸಿ ಈ ಬಾರಿ ಅವರ ಕೈತಪ್ಪಿದೆ. ಮುಂಬೈಯನ್ನು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಮುನ್ಸಿಪಲ್ ಕಾರ್ಪೋರೇಷನ್ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದಾಗಿ ಈ ಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ.

ಮುಂಬೈ ಕಿರೀಟವನ್ನು ಮುಡಿಗೇರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ; 25 ವರ್ಷಗಳ ಬಳಿಕ ಠಾಕ್ರೆ ಭದ್ರಕೋಟೆ ಪತನ
Eknath Shinde And Devendra Fadnavis

Updated on: Jan 16, 2026 | 7:16 PM

ಮುಂಬೈ, ಜನವರಿ 16: 25 ವರ್ಷಗಳ ನಂತರ ಮುಂಬೈ ನಾಗರಿಕ ಸಂಸ್ಥೆಯಾದ ಬಿಎಂಸಿ ಮೇಲೆ ಠಾಕ್ರೆ ಸಹೋದರರು ಹಿಡಿತ ಕಳೆದುಕೊಂಡಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC Elections) ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಭಾರಿ ಗೆಲುವು ಕಂಡಿದೆ. ಗುರುವಾರ ಬಿಎಂಸಿ ಚುನಾವಣೆ ನಡೆದಿತ್ತು. ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಅನೇಕ ಉದ್ಯಮಿಗಳು, ಸೆಲಬ್ರಿಟಿಗಳು, ರಾಜಕಾರಣಿಗಳ ವಾಸ ಸ್ಥಾನ. ಇದು ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಕಾರ್ಪೋರೇಷನ್ ಆಗಿದೆ. ಬಿಎಂಸಿ ಸೇರಿದಂತೆ ಮಹಾರಾಷ್ಟ್ರದಾದ್ಯಂತ 29 ನಾಗರಿಕ ಸಂಸ್ಥೆಗಳಲ್ಲಿ ಮತದಾನ ನಡೆದಿತ್ತು. ಬಹುತೇಕ ಅನೇಕ ಕಡೆ ಬಿಜೆಪಿ ಈ ಬಾರಿ ಗೆಲುವಿನ ನಗು ಬೀರಿರುವುದು ವಿಶೇಷ. ಇದು ಮಹಾರಾಷ್ಟ್ರದಲ್ಲಿ ಶಿವಸೇನೆಯ ಪತನದ ಸಂಕೇತವಾಗಿದೆ.

ವಾರ್ಷಿಕ ಬಜೆಟ್ 74,400 ಕೋಟಿ ರೂ. ಮೀರಿರುವ ಬಿಎಂಸಿಯಲ್ಲಿ 9 ವರ್ಷಗಳ ವಿಳಂಬದ ನಂತರ ನಡೆದ ಚುನಾವಣೆಯಲ್ಲಿ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2017ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ, ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಒಂದಾಗಿದ್ದ ಸಂಯುಕ್ತ ಶಿವಸೇನೆ ದಶಕಗಳಿಂದ ನಿಯಂತ್ರಿಸುತ್ತಿದ್ದ ಬಿಎಂಸಿಯ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಅವರಿಬ್ಬರೂ ಬೇರೆ ಬೇರೆಯಾಗಿ ಅಖಾಡಕ್ಕಿಳಿದಿದ್ದರು.

ಇದನ್ನೂ ಓದಿ: Pune Elections: ಮುಂಬೈ ಜೊತೆ ಪುಣೆಯಲ್ಲೂ ಬಿಜೆಪಿಯದ್ದೇ ದರ್ಬಾರ್; ಎಕ್ಸಿಟ್ ಪೋಲ್​ನಲ್ಲಿ ಏನಿದೆ?

ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟವು ವಿಜಯಶಾಲಿಯಾಗಿ ಹೊರಹೊಮ್ಮಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಐತಿಹಾಸಿಕ ಸಾಧನೆಯ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ನಾಯಕತ್ವದಲ್ಲಿ ಬಿಜೆಪಿ 2017ರಲ್ಲಿ ತನ್ನ ಹಿಂದಿನ ಗರಿಷ್ಠ 82 ಸ್ಥಾನಗಳನ್ನು ಮೀರಿದೆ. ಇದುವರೆಗೆ ಬಿಎಂಸಿಯ 227 ವಾರ್ಡ್‌ಗಳಲ್ಲಿ 88ರಲ್ಲಿ ಬಿಜೆಪಿ ಗೆದ್ದಿದೆ ಅಥವಾ ಮುನ್ನಡೆ ಸಾಧಿಸಿದೆ. ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 28 ಸ್ಥಾನಗಳಲ್ಲಿ ಮುಂದಿದೆ. ಈ ಮಹಾಯುತಿ ಮೈತ್ರಿಕೂಟವು 114ರ ಅರ್ಧದಷ್ಟನ್ನು ಆರಾಮವಾಗಿ ದಾಟಿದೆ.


ಇದನ್ನೂ ಓದಿ: BJP National President Election Date: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ದಿನಾಂಕ ಘೋಷಣೆ

29 ನಾಗರಿಕ ಸಂಸ್ಥೆಗಳ 893 ವಾರ್ಡ್‌ಗಳಲ್ಲಿ 2,869 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಿತು. ಮುಂಬೈನಲ್ಲಿ 1,700 ಸೇರಿದಂತೆ 15,931 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 52.94% ಮತದಾನ ದಾಖಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Fri, 16 January 26