ಬಿಎಂಸಿ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ; ಭರ್ಜರಿ ಗೆಲುವಿನತ್ತ ಬಿಜೆಪಿ ಮೈತ್ರಿಕೂಟ; ಠಾಕ್ರೆ ಸಹೋದರರಿಗೆ ಹಿನ್ನಡೆ
ಮುಂಬೈನಲ್ಲಿ 9 ವರ್ಷಗಳ ನಂತರ ನಿನ್ನೆ (ಗುರುವಾರ) ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳು ನಡೆದವು. ಇಂದು ಈ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಮುಂಬೈ ಕಾರ್ಪೋರೇಷನ್ ಗೆಲ್ಲುವುದು ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ. ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಲ್ಲಿ ಒಟ್ಟು 227 ವಾರ್ಡ್‌ಗಳಿವೆ. ಈ ಚುನಾವಣೆಯಲ್ಲಿ 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮುಂಬೈ, ಜನವರಿ 16: ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಸಂಗತಿಯಾಗಿರುವ ಬಿಎಂಸಿ ಚುನಾವಣೆಯ ಫಲಿತಾಂಶ ಹೊರಬೀಳಲು ಕೆಲವೇ ಕ್ಷಣಗಳು ಬಾಕಿ ಇದೆ. ಈಗಾಗಲೇ ಎಕ್ಸಿಟ್ ಪೋಲ್ (Exit Polls) ಊಹಿಸಿರುವಂತೆ ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ಗಳಿಸುವುದು ಖಚಿತವಾಗಿದೆ. ಈ ಮೂಲಕ 25 ವರ್ಷಗಳಿಂದ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (BMC) ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಉದ್ಧವ್ ಠಾಕ್ರೆಗೆ ಈ ಬಾರಿ ಭಾರೀ ಮುಖಭಂಗವಾಗಲಿದೆ. ಇಂದು ಸಂಜೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಇಲ್ಲಿಯವರೆಗಿನ ಮತ ಎಣಿಕೆಯಲ್ಲಿ ಯಾರು ಮುಂದಿದ್ದಾರೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯ ಎಲ್ಲಾ 23 ಗೊತ್ತುಪಡಿಸಿದ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿರುವಾಗ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಮೈತ್ರಿಕೂಟ ಮುಂಬೈಯನ್ನು ಮುನ್ನಡೆಸಲಿದೆ. ಇಂದು ಸಂಜೆಯೊಳಗೆ ಅಂತಿಮ ಫಲಿತಾಂಶವನ್ನು ಘೋಷಿಸಲಾಗುವುದು.
227 ವಾರ್ಡ್‌ಗಳಲ್ಲಿ ಕಾರ್ಪೊರೇಟರ್‌ಗಳನ್ನು ಆಯ್ಕೆ ಮಾಡಲು ಗುರುವಾರ (ಜನವರಿ 15) ಬಿಎಂಸಿ ಚುನಾವಣೆಗಳು ನಡೆದವು. ಇದು ಭಾರತದ ಅತಿದೊಡ್ಡ ಮತ್ತು ಶ್ರೀಮಂತ ಪುರಸಭೆ ಎಂದು ಪರಿಗಣಿಸಲ್ಪಟ್ಟಿದ್ದು, ಬಹುಮತ ಗೆಲ್ಲಲು ಕನಿಷ್ಠ 114 ಸ್ಥಾನಗಳು ಬೇಕಾಗುತ್ತವೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದರು. 879 ಮಹಿಳೆಯರು ಮತ್ತು 821 ಪುರುಷರು ಸೇರಿದಂತೆ ಸುಮಾರು 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸದ್ಯದ ಮಟ್ಟಿಗೆ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 115 ವಾರ್ಡ್‌ಗಳಲ್ಲಿ ಮುಂದಿದ್ದರೆ, ಠಾಕ್ರೆ ಸೋದರರು 77 ಸ್ಥಾನಗಳನ್ನು ಪಡೆದಿದ್ದಾರೆ.
ಬಿಎಂಸಿಯಲ್ಲಿ ಬಿಜೆಪಿ 136 ವಾರ್ಡ್‌ಗಳಲ್ಲಿ ಸ್ಪರ್ಧಿಸಿದರೆ, ಶಿವಸೇನೆ (ಶಿಂಧೆ ಬಣ) 89 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಮತ್ತೊಂದೆಡೆ, ಶಿವಸೇನೆ (ಯುಬಿಟಿ) 164 ವಾರ್ಡ್‌ಗಳಲ್ಲಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 52 ವಾರ್ಡ್‌ಗಳಲ್ಲಿ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) 12 ವಾರ್ಡ್‌ಗಳಲ್ಲಿ ಸ್ಪರ್ಧಿಸಿತು. ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆ (ಶಿಂಧೆ)ಗೆ ದೊಡ್ಡ ಹಿನ್ನಡೆಯಾಗಿದ್ದು, ಶಿಂಧೆ ಸೇನಾ ಸಂಸದ ರವೀಂದ್ರ ವೈಕರ್ ಅವರ ಪುತ್ರಿ ದೀಪ್ತಿ ವೈಕರ್ ವಾರ್ಡ್ ಸಂಖ್ಯೆ 73ರಿಂದ ಚುನಾವಣೆಯಲ್ಲಿ ಸೋತಿದ್ದಾರೆ.
ಬಿಎಂಸಿಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 115 ವಾರ್ಡ್‌ಗಳಲ್ಲಿ ಮುಂದಿದೆ. ಬಿಜೆಪಿ 86 ರಲ್ಲಿ ಮುನ್ನಡೆ ಸಾಧಿಸಿದರೆ, ಏಕನಾಥ್ ಶಿಂಧೆ ಅವರ ಶಿವಸೇನೆ 29 ವಾರ್ಡ್‌ಗಳಲ್ಲಿ ಮುಂದಿದೆ. ಠಾಕ್ರೆ ಸೋದರಸಂಬಂಧಿಗಳು 77 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಉದ್ಧವ್ ಠಾಕ್ರೆ ಅವರ ಸೇನೆ 71ರಲ್ಲಿ ಮುಂದಿದ್ದರೆ, ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) 6 ವಾರ್ಡ್‌ಗಳಲ್ಲಿ ಮುಂದಿದೆ.
ಇದನ್ನೂ ಓದಿ: Pune Elections: ಮುಂಬೈ ಜೊತೆ ಪುಣೆಯಲ್ಲೂ ಬಿಜೆಪಿಯದ್ದೇ ದರ್ಬಾರ್; ಎಕ್ಸಿಟ್ ಪೋಲ್ನಲ್ಲಿ ಏನಿದೆ?
ಮಹಾರಾಷ್ಟ್ರದಾದ್ಯಂತ 29 ಮುನ್ಸಿಪಲ್ ಕಾರ್ಪೊರೇಷನ್‌ಗಳ ಒಟ್ಟಾರೆ ಅಂಕಿಅಂಶಗಳು ಬಿಜೆಪಿಗೆ ಜಯ ಸಿಗಲಿದೆ ಎಂದು ಹೇಳುತ್ತಿವೆ. ಒಟ್ಟಾರೆ ಅಂಕಿ ಅಂಶಗಳು ಬಿಜೆಪಿ 909 ವಾರ್ಡ್‌ಗಳಲ್ಲಿ ಮುಂದಿದೆ ಎಂದು ತೋರಿಸುತ್ತದೆ. ಹಾಗೇ ಶಿಂಧೆ ನೇತೃತ್ವದ ಮಿತ್ರಪಕ್ಷ ಶಿವಸೇನೆ 237 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷವಾರು ಲೆಕ್ಕಾಚಾರದಲ್ಲಿ, ಕಾಂಗ್ರೆಸ್ 179 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನದಲ್ಲಿದೆ. ಶಿವಸೇನೆ (ಯುಬಿಟಿ) ನಾಲ್ಕನೇ ಸ್ಥಾನದಲ್ಲಿದೆ. ಅಜಿತ್ ಪವಾರ್ ಅವರ ಎನ್‌ಸಿಪಿ 112 ಸ್ಥಾನಗಳಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
