ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ
ಕಳೆದ ಒಂದೆರಡು ತಿಂಗಳಿಂದ ಬಾಂಬ್ ಬೆದರಿಕೆಗಳು ಹೆಚ್ಚಾಗುತ್ತಿವೆ, ಶಾಲೆ, ಕಾಲೇಜುಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ವಿಮಾನಗಳು ಸೇರಿದಂತೆ ಎಲ್ಲೆಡೆ ಬೆದರಿಕೆಗಳು ಬರುತ್ತಿವೆ. ಹಾಗೆಯೇ ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿತ್ತು.
ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ(IndiGo Flight)ಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮಾಹಿತಿ ಮೇರೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ 10.30ರ ಸುಮಾರಿಗೆ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನಯಾನ ಸಂಸ್ಥೆ ಬಾಂಬ್ ಬೆದರಿಕೆಯನ್ನು ದೃಢಪಡಿಸಿದೆ ಮತ್ತು ಪ್ರೋಟೋಕಾಲ್ ಅನ್ನು ಅನುಸರಿಸಲಾಗಿದೆ ಮತ್ತು ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಹೇಳಿದೆ.
ಇಂಡಿಗೋ ಫ್ಲೈಟ್ 6E 5149, ಚೆನ್ನೈನಿಂದ ಮುಂಬೈಗೆ ಕಾರ್ಯನಿರ್ವಹಿಸುತ್ತಿದೆ. ನಾವು ಭದ್ರತಾ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಎಲ್ಲಾ ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ವಿಮಾನವನ್ನು ಟರ್ಮಿನಲ್ ಪ್ರದೇಶದಲ್ಲಿ ಇರಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ, ಮುಂಬೈನಲ್ಲಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಧಾನ ಕಚೇರಿಗೂ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಅಪರಿಚಿತ ವ್ಯಕ್ತಿ ಪ್ರಧಾನ ಕಚೇರಿಯನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಭಾರತದಲ್ಲಿ ಹಲವಾರು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ; ಬಿಗಿ ಭದ್ರತೆ
ಬೆದರಿಕೆ ಇಮೇಲ್‌ನ ನಂತರ, ಪೊಲೀಸರು ಕಟ್ಟಡವನ್ನು ಹುಡುಕಿದರು ಮತ್ತು ಅನುಮಾನಾಸ್ಪದ ವಸ್ತುಗಳು ಯಾವುದೂ ಕಂಡುಬಂದಿಲ್ಲ. ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ 50 ಆಸ್ಪತ್ರೆಗಳು ಹಾಗೂ ಕಾಲೇಜುಗಳಿಗೆ ಬಾಂಬ್ ಬೆದರಿಕೆ
ಇತ್ತೀಚೆಗೆ ಬಾಂಬ್ ಬೆದರಿಕೆ(Bomb Threat)ಗಳು ಹೆಚ್ಚಾಗುತ್ತಿವೆ. ವಾರಾಣಸಿ ಹಾಗೂ ನಾಗ್ಪುರ ಸೇರಿದಂತೆ 41ಕ್ಕೂ ಅಧಿಕ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಗಳು ಬಂದ ಬೆನ್ನಲ್ಲೇ ಮುಂಬೈನ್ 40 ಆಸ್ಪತ್ರೆಗಳು ಹಾಗೂ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಬಂದಿದ್ದು ಆತಂಕ ಸೃಷ್ಟಿಯಾಗಿದೆ.
ಜಸ್ಲೋಕ್ ಆಸ್ಪತ್ರೆ, ರಹೇಜಾ ಆಸ್ಪತ್ರೆ, ಸೆವೆನ್ ಹಿಲ್ಸ್ ಆಸ್ಪತ್ರೆ, ಕೊಹಿನೂರ್ ಆಸ್ಪತ್ರೆ, ಕೆಇಎಂ ಆಸ್ಪತ್ರೆ, ಜೆಜೆ ಆಸ್ಪತ್ರೆ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆ ಸೇರಿದಂತೆ ನಗರದಾದ್ಯಂತ ಹಲವಾರು ಆಸ್ಪತ್ರೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ನಗರದ ಗಿರ್‌ಗಾಂವ್ ಪ್ರದೇಶದಲ್ಲಿರುವ ಹಿಂದೂಜಾ ಕಾಲೇಜ್ ಆಫ್ ಕಾಮರ್ಸ್‌ಗೂ ಇದೇ ರೀತಿಯ ಬೆದರಿಕೆ ಮೇಲ್ ಬಂದಿತ್ತು.
ಹೆಸರಾಂತ ಆಸ್ಪತ್ರೆಗಳು ಬೆಡ್‌ಗಳ ಕೆಳಗೆ ಮತ್ತು ಬಾತ್‌ರೂಮ್‌ಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಹೇಳುವ ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಲಾಗಿದೆ. ವಿಪಿಎನ್ ನೆಟ್‌ವರ್ಕ್ ಬಳಸಿ ಈ ಎಲ್ಲಾ ಆಸ್ಪತ್ರೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ.
Beeble.com ಹೆಸರಿನ ವೆಬ್‌ಸೈಟ್‌ನಿಂದ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರತಿಯೊಂದು ಇಮೇಲ್ ಅನ್ನು ಪ್ರತ್ಯೇಕವಾಗಿ ರಚಿಸಲಾಗಿದೆ ಮತ್ತು 50 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೆಯೇ ನಿನ್ನೆ ದೇಶದ 40ಕ್ಕೂ ಅಧಿಕ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ