ಜಾತಿ ಆಧಾರಿತ ಜನಗಣತಿ ಆಗ್ರಹಿಸಿ ಪ್ರಧಾನಿ ಮೋದಿಯವರನ್ನು ಬಿಹಾರ ಸಿಎಮ್ ನಿತೀಶ್ ಕುಮಾರ್ ನಿಯೋಗ ಸೋಮವಾರ ಭೇಟಿಯಾಗಲಿದೆ
ಸದ್ಯಕ್ಕೆ ನಾವು ಜಾತಿ ಅಧಾರಿತ ಜನಗಣತಿಯನ್ನು ನಡೆಸಲು ಕೆಂದ್ರಕ್ಕೆ ಮನವಿ ಮಾಡಲಿದ್ದೇವೆ, ಮುಂದಿನ ವಿಚಾರ ಕೇಂದ್ರದ ವಿವೇಚನೆಗೆ ಬಿಟ್ಟಿದ್ದು, ಎಂದು ಕುಮಾರ್ ಹೇಳಿದರು.
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸರ್ವಪಕ್ಷಗಳ ನಿಯೋಗದೊಂದಿಗೆ ಸೋಮವಾರ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಜಾತಿ ಆಧಾರಿತ ಜನಗಣತಿ ನಡೆಸಲು ಆಗ್ರಹಿಸಲಿದ್ದಾರೆ. ಈ ನಿಯೋಗದಲ್ಲಿ ನಿತೀಶ್ ಅವರ ಬದ್ಧ ವೈರಿ ಮತ್ತು ಅವರ ಕಾರ್ಯವೈಖರಿಯನ್ನು ಸದಾ ಟೀಕಿಸುವ ವಿರೋಧ ಪಕ್ಷದ ನಾಯಕ ಮತ್ತು ರಾಷ್ಟ್ರೀಯ ಜನತಾ ದಳ ಪಕ್ಷದ ಧುರೀಣ ತೇಜಸ್ವೀ ಯಾದವ್ ಮತ್ತು ಗಣಿ ಹಾಗೂ ಭೂಗರ್ಭ ಶಾಸ್ರ ಸಚಿವ ಜನಕ್ ರಾಮ್ ಸಹ ಇರಲಿದ್ದಾರೆ.
‘ಗೌರವಾನ್ವಿತ ಪ್ರಧಾನ ಮಂತ್ರಿಗಳು ಸೋಮವಾರ ಬೆಳಗ್ಗೆ 11 ಗಂಟೆಗೆ ಭೇಟಿ ಸಮಯ ನೀಡಿದ್ದಾರೆ. ನಿಯೋಗದಲ್ಲಿರುವ ಎಲ್ಲ ಸದಸ್ಯರ ಹೆಸರುಗಳನ್ನು ಪಟ್ಟಿ ಮಾಡಿ ಅವರಿಗೆ ಕಳಿಸಲಾಗಿದೆ. ಒಟ್ಟು ಹತ್ತು ಪಕ್ಷಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ,’ ಎಂದು ಕುಮಾರ್ ಸುದ್ದಿಗಾರರಿಗೆ ಪಟನಾದಲ್ಲಿ ಶನಿವಾರ ತಿಳಿಸಿದರು.
ಸದ್ಯಕ್ಕೆ ನಾವು ಜಾತಿ ಅಧಾರಿತ ಜನಗಣತಿಯನ್ನು ನಡೆಸಲು ಕೆಂದ್ರಕ್ಕೆ ಮನವಿ ಮಾಡಲಿದ್ದೇವೆ, ಮುಂದಿನ ವಿಚಾರ ಕೇಂದ್ರದ ವಿವೇಚನೆಗೆ ಬಿಟ್ಟಿದ್ದು, ಎಂದು ಕುಮಾರ್ ಹೇಳಿದರು.
ದೇಶದಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸಬೇಕೆನ್ನುವುದು ಎಲ್ಲರ ಬೇಡಿಕೆಯಾಗಿದೆ ಮತ್ತು ಅದನ್ನು ಮಾಡುವುದು ಬಹಳ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.
ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳನ್ನು ಭೇಟಿಯಾಗುವ ಉಪಾಯವನ್ನು ಸೂಚಿಸಿದ್ದು ಯಾದವ್ ನೇತೃತ್ವದ ಮಹಾಗಟಬಂಧನ್ ಎಂದು ಗೊತ್ತಾಗಿದೆ.
ಬಿಹಾರದಲ್ಲಿ ಎನ್ ಡಿ ಎ ಸರ್ಕಾರದ ಭಾಗವಾಗಿರುವ ಬಿಜೆಪಿ, ಸದರಿ ನಿಯೋಗದಲ್ಲಿ ರಾಮ್ ಅವರನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿದೆ. ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿರುವ ತನ್ನ ನಾಯಕರನ್ನು ಬಿಜೆಪಿ ನಿಯೋಗಕ್ಕೆ ಸೇರಿಸುವ ಪ್ರಯತ್ನ ಮಾಡಿಲ್ಲ.
ಇದು ಬಹಳ ಮಹತ್ವದ ವಿಷಯವಾಗಿದ್ದು ಪ್ರಧಾನಿ ಮೋದಿಯವರ ಪಕ್ಷವು ಜಾತಿ ಆಧಾರಿತ ಜನಗಣತಿಯ ಬಗ್ಗೆ ಒಲವು ಹೊಂದಿರುವುದು ಸಾಬೀತು ಮಾಡುತ್ತದೆ. ಹಾಗೆಯೇ, ನಿಯೋಗದಲ್ಲಿ ತನ್ನನ್ನು ಬಲವಂತದಿಂದ ಭಾಗಿಯಾಗುವಂತೆ ಮಾಡಲಾಗಿದೆ ಎನ್ನುವ ಸಂದೇಶವನ್ನು ಅದು ಮೇಲ್ಜಾತಿಯ ಮತಕ್ಷೇತ್ರಗಳಿಗೆ ರವಾನಿಸುವ ಪ್ರಯತ್ನ ಮಾಡುತ್ತಿದೆ.
ಒಂದು ವೇಳೆ ಕೇಂದ್ರ ಸರ್ಕಾರ ಜಾತಿ ಆಧಾರಿತ ಜನಗಣತಿ ಮಾಡಲು ಹಿಂಜರಿದರೆ, ಬಿಹಾರನಲ್ಲಿ ಜಾತಿವಾರು ಮಾಹಿತಿಯನ್ನು ಸಂಗ್ರಹಿಸುವ ಯೋಜನೆಯೊಂದಕ್ಕೆ ಚಾಲನೆ ನೀಡುವ ಬಗ್ಗೆ ಒಂದು ಚರ್ಚೆ ನಡೆಸಲಾಗುವುದು ಎಂದು ಕುಮಾರ್ ಆಗಸ್ಟ್ 9 ರಂದು ಪಟನಾನಲ್ಲಿ ಹೇಳಿದ್ದರು. ಈ ಕುರಿತು ಪ್ರಧಾನಿಗಳಿಗೆ ಪತ್ರ ಬರೆದು ಬಹಲ ದಿನ ಕಳೆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕುಮಾರ್ ಅವರು ಈ ಹೇಳಿಕೆಯನ್ನು ನೀಡಿದ್ದರು.
ಕೆಲ ದಿನಗಳ ನಂತರ, ತೇಜಸ್ವೀ ಯಾದವ್ ಹೇಳಿಕೆಯೊಂದನ್ನು ನೀಡಿ, ವಿಷಯವನ್ನು ಚರ್ಚಿಸಲು ಮುಖ್ಯಮಂತ್ರಿಗಳಿಗೆ ಸಮಯಾವಕಾಶ ನೀಡದೆ ಅವರನ್ನು ಪ್ರಧಾನಿಗಳು ಅವಮಾನಿಸಿದ್ದಾರೆ ಎಂದಿದ್ದರು.
ಇತ್ತೀಚಿಗೆ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಳಡಗಳ ಜನಗಣತಿ ನಡೆಸುವ ವಿಚಾರ ಮಾತ್ರ ಪರಿಗಣನೆಯಲ್ಲಿದೆ ಎಂದು ಹೇಳಿದ ನಂತರ ಜಾತಿ ಆಧಾರಿತ ಜನಗಣತರ ನಡೆಸುವ ಬಗ್ಗೆ ಆಗ್ರಹ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಉನ್ನತ ಶಿಕ್ಷಣ ವ್ಯವಸ್ಥೆ ಧ್ವಂಸ, ಜಾರಿ ಆದೇಶ ಹಿಂಪಡೆಯಲು ಸಿದ್ದರಾಮಯ್ಯ ಆಗ್ರಹ