ಪಶುಗಳ ಅಕ್ರಮ ಸಾಗಣೆದಾರರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪರಿಣಾಮ 12 ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೇಹರ್ನಲ್ಲಿ ಶನಿವಾರ ರಾತ್ರಿ ನಡೆದಿದೆ. ಭಾರತ-ಬಾಂಗ್ಲಾದೇಶ ಗಡಿ ಸಮೀಪ ಇರುವ, ಮೇಖಾಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಲ್ಲೆ ನಡೆದಿದ್ದಾಗಿ ವರದಿಯಾಗಿದೆ. ಇಲ್ಲಿ ಒಂದಷ್ಟು ಮಂದಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅದರಂತೆ ಸಾಗಣೆದಾರರನ್ನು ಸೆರೆಹಿಡಿಯಲು ಪೊಲೀಸರು ಹೊಂಚು ಹಾಕಿದ್ದರು. ಆದರೆ ಅವರು ಪೊಲೀಸರ ಮೇಲೆಯೇ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾರೆ. ಈ ಕಳ್ಳಸಾಗಣೆದಾರರಲ್ಲಿ ಮಹಿಳೆಯರೂ ಇದ್ದಾರೆ, ಈ ಮಹಿಳೆಯರೂ ನಮ್ಮ ಮೇಲೆ ದಾಳಿಗೆ ಬಂದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರನ್ನು ಕಾಣುತ್ತಿದ್ದಂತೆ ಜಾನುವಾರು ಕಳ್ಳಸಾಗಣೆದಾರರು ಮೊದಲು ಕಲ್ಲು ಹೊಡೆಯಲು ಶುರು ಮಾಡಿದರು. ಅದಾದ ಬಳಿಕ ಬಾಂಬೂ ಕೋಲುಗಳನ್ನು ತೆಗೆದುಕೊಂಡು ಹೊಡೆದರು ಎಂದು ಹೇಳಲಾಗಿದೆ. ಸದ್ಯ ಗಾಯಗೊಂಡ ಪೊಲೀಸರನ್ನು ಮೆಖಾಲಿಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಿದ್ದಾಗ್ಯೂ ಪೊಲೀಸರು ಸುಮ್ಮನೆ ಬರಲಿಲ್ಲ. ನಾಲ್ವರು ಮಹಿಳೆಯರು ಸೇರಿ, ಆರು ಸ್ಮಗ್ಲರ್ಗಳನ್ನು ಬಂಧಿಸಿದ್ದಾರೆ. ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣವಿದ್ದು, ಅಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರು ಜಾನುವಾರುಗಳನ್ನು ಗಡಿಯಾಚೆಗೆ ಅಕ್ರಮವಾಗಿ ಸಾಗಿಸುತ್ತಿದ್ದರು. ಒಟ್ಟು 34 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ನಿನ್ನೆ ಮಾಲ್ಡಾದಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ಇಬ್ಬರು ಜಾನುವಾರು ಸ್ಮಗ್ಲರ್ಗಳನ್ನು ಅರೆಸ್ಟ್ ಮಾಡಿದ್ದರು.
ಇದನ್ನೂ ಓದಿ: ಇಬ್ಬರು ವಿಕೆಟ್ ಕೀಪರ್ಗೆ ಗಾಯ: ಬದಲಿ ಆಟಗಾರನಾಗಿ ಕಣಕ್ಕಿಳಿದು ದಾಖಲೆ ಬರೆದ ಯುವ ಆಟಗಾರ