ಕಾವೇರಿ ಜಲ ವಿವಾದ: ಆದೇಶ ಮರುಪರಿಶೀಲಿಸುವಂತೆ CWMAಗೆ ಕರ್ನಾಟಕ ಆಗ್ರಹ; ಹಲವು ಪ್ರಮುಖ ಕಾರಣ ಉಲ್ಲೇಖ

Cauvery Water Dispute: ತಮಿಳುನಾಡಿಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಿದ್ದ ಆದೇಶವನ್ನು ಮರುಪರಿಶೀಲಿಸಿ, 6 ಸಾವಿರ ಕ್ಯೂಸೆಕ್‌ಗೆ ಇಳಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಕರ್ನಾಟಕ ಸರ್ಕಾರ ಮನವಿ ಮಾಡಿದೆ. ತೀವ್ರ ಮಳೆ ಕೊರತೆ, ಡ್ಯಾಂಗಳ ಸದ್ಯದ ಸ್ಥಿತಿಗತಿ, ಬೆಂಗಳೂರಿಗೆ ಅಗತ್ಯವಿರುವ ಕುಡಿಯುವ ನೀರಿ ಸೇರದಂತೆ ಹಲವು ಪ್ರಮುಖ ವಿಚಾರಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಾವೇರಿ ಜಲ ವಿವಾದ: ಆದೇಶ ಮರುಪರಿಶೀಲಿಸುವಂತೆ CWMAಗೆ ಕರ್ನಾಟಕ ಆಗ್ರಹ; ಹಲವು ಪ್ರಮುಖ ಕಾರಣ ಉಲ್ಲೇಖ
CWMAಗೆ ಕರ್ನಾಟಕದಿಂದ ಮನವಿ
Image Credit source: PTI

Updated on: Aug 19, 2026 | 6:07 PM

ಮುಖ್ಯಾಂಶಗಳು

  • ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಹರಿಸಲು CWMA ಆದೇಶ
  • ಆದೇಶ ಮರುಪರಿಶೀಲನೆಗೆ ಆಗ್ರಹಿಸಿ CWMAಗೆ ಕರ್ನಾಟಕದಿಂದ ಮನವಿ
  • 12 ಸಾವಿರ ಬದಲು 6 ಸಾವಿರ ಕ್ಯೂಸೆಕ್‌ಗೆ ಮಿತಿ ಇಳಿಕೆ ಮಾಡಲು ಆಗ್ರಹ

ನವದೆಹಲಿ/ಬೆಂಗಳೂರು, ಆಗಸ್ಟ್​​ 19: ಕರ್ನಾಟಕದಲ್ಲಿ (Karnataka) ತೀವ್ರ ಮಳೆಯ ಅಭಾವದ ನಡುವೆಯೂ ನೆರೆ ರಾಜ್ಯ ತಮಿಳುನಾಡಿಗೆ ಕಾವೇರಿ ನದಿಯಿಂದ (Cauvery River) 12 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ CWMA ಆದೇಶಕ್ಕೆ ಕರ್ನಾಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಿತಿಯನ್ನು 12 ಸಾವಿರ ಕ್ಯೂಸೆಕ್ ಬದಲು 6 ಸಾವಿರ ಕ್ಯೂಸೆಕ್‌ಗೆ ಇಳಿಸುವಂತೆ ಕೋರಿ ಮನವಿ ಸಲ್ಲಿಕೆ ಮಾಡಲಾಗಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ಮುಂದುವರಿಯದೆ ರಾಜ್ಯಕ್ಕೆ ಸಂಕಷ್ಟ ಎದುರಾಗಿದ್ದು, ಸೂಪರ್ ಎಲ್​ ನಿನೊ ಪರಿಣಾಮದಿಂದ ಮುಂಗಾರು ದುರ್ಬಲವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘1.959 ಲಕ್ಷ ಎಕರೆ ನೀರಾವರಿಗೆ ಹೊಡೆತದ ಭೀತಿ’

ರಾಜ್ಯದ ಕಾವೇರಿ ಡ್ಯಾಮ್​ಗಳ ಒಳಹರಿವಿನಲ್ಲಿ ಶೇ.47.68ರಷ್ಟು ಕೊರತೆ ಇದ್ದು, ಆ.18ಕ್ಕೆ ಜಲಾಶಯಗಳಲ್ಲಿ ಕೇವಲ 77.907 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 25,964 ಕ್ಯೂಸೆಕ್‌ನಿಂದ 13,141 ಕ್ಯೂಸೆಕ್‌ಗೆ ಭಾರಿ ಕುಸಿತ ಕಂಡಿದೆ. 12 ಸಾವಿರ ಕ್ಯೂಸೆಕ್​ ನೀರು ಬಿಡಲು 15 ಸಾವಿರ ಕ್ಯೂಸೆಕ್ ಹೊರಹರಿವಿನ ಅನಿವಾರ್ಯತೆ ಇದೆ. ಹೆಚ್ಚಿನ ನೀರು ಬಿಟ್ಟರೆ KRS ಸಂಗ್ರಹ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. KRSನಲ್ಲಿ 45.051 ಟಿಎಂಸಿ ಸಾಮರ್ಥ್ಯಕ್ಕೆ ಕೇವಲ 26.602 ಟಿಎಂಸಿ ನೀರಿದ್ದು, ಆ ನೀರನ್ನೂ ಬಿಟ್ಟರೆ 1.959 ಲಕ್ಷ ಎಕರೆ ನೀರಾವರಿಗೆ ಹೊಡೆತದ ಭೀತಿ ಎದುರಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಎಂದು ಮನವರಿಕೆ ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಶಾಕ್​​ ಕೊಟ್ಟ CWRC; ತಮಿಳುನಾಡಿಗೆ ಮುಂದಿನ 15ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ

ಯಾಕೆ ಆದೇಶ ಮರುಪರಿಶೀಲನೆ ಅಗತ್ಯ?

ಕಬಿನಿ ಒಳಹರಿವು ಕೂಡ 7,747ರಿಂದ 6,457 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಜಲಾಶಯಗಳಲ್ಲಿ ನೀರಿನ ಕೊರತೆ, ನೀರಾವರಿ ಬೆಳೆಗಳ ಮೇಲೂ ಪರಿಣಾಮ ಉಂಟುಮಾಡಿದೆ. 155 ಟಿಎಂಸಿ ಅಗತ್ಯದ ನಡುವೆ ಜಲಾಶಯಗಳಲ್ಲಿ 77.907 ಟಿಎಂಸಿ ಮಾತ್ರ ನೀರಿದೆ. ಮೆಟ್ಟೂರು ಜಲಾಶಯದಲ್ಲಿ ಸುಮಾರು 45 ಟಿಎಂಸಿ ನೀರು ಸಂಗ್ರಹವಿದ್ದು, ಸಾಂಬಾ ಭತ್ತದ ಬಿತ್ತನೆ ಪ್ರದೇಶ ಕುಸಿಯುವ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಕರ್ನಾಟಕಕ್ಕೆ ನೀರಾವರಿ ಹಾಗೂ ಕುಡಿಯಲು ಅಗತ್ಯ ನೀರು ಉಳಿಸುವ ನಿಟ್ಟಿನಲ್ಲಿ ಆದೇಶ ಮರುಪರಿಶೀಲನೆ ಮಾಡುವಂತೆ CWMAಗೆ ಕರ್ನಾಟಕ ಆಗ್ರಹಿಸಿದೆ.

ನಟರಾಜ್​​, ಟಿವಿ9 ನವದೆಹಲಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:05 pm, Wed, 19 August 26

Loading...
Unable to load recommendations.
Follow Us