Karti Chidambaram: ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ನಿವಾಸದ ಮೇಲೆ ಸಿಬಿಐ ದಾಳಿ
ಚೆನ್ನೈನಲ್ಲಿರುವ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಚೆನ್ನೈನಲ್ಲಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ (P Chidambaram) ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ (Karti Chidambaram) ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು (ಶನಿವಾರ) ದಾಳಿ ನಡೆಸಿದ್ದಾರೆ. ಚೆನ್ನೈನ ನುಂಗಂಬಾಕ್ಕಂನಲ್ಲಿರುವ ಚಿದಂಬರಂ ಅವರ ಮನೆಯ ಮೇಲೆ 6 ಮಂದಿ ಸಿಬಿಐ (CBI Raid) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಸಿಬಿಐ ದಾಳಿ ನಡೆದಾಗ ಚಿದಂಬರಂ ಮತ್ತು ಕಾರ್ತಿ ಮನೆಯಲ್ಲಿ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಸಿಬಿಐ ಅಧಿಕಾರಿಗಳು ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ ನೀಡಿದ್ದಕ್ಕಾಗಿ ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಅವರ ಪುತ್ರ ಕಾರ್ತಿ ಅವರಿಗೆ ಸೇರಿದ ಸ್ಥಳಗಳ ಮೇಲೆ ಮೇ 18ರಂದು ದಾಳಿ ನಡೆಸಿದ್ದರು. ಕಾರ್ತಿ ಚಿದಂಬರಂ ಅವರ ಚೆನ್ನೈ ಮತ್ತು ದೆಹಲಿಯ ನಿವಾಸಗಳು ಸೇರಿದಂತೆ ದೇಶದ ಅನೇಕ ನಗರಗಳಲ್ಲಿ 10 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿತ್ತು.
Tamil Nadu | CBI officials raid Congress leader Karti Chidambaram’s residence in Chennai pic.twitter.com/SlVxVpb2pu
— ANI (@ANI) July 9, 2022
ಸಿಬಿಐ ನುಂಗಂಬಾಕ್ಕಂನಲ್ಲಿರುವ ರಾಜ್ಯಸಭಾ ಸಂಸದ ಪಿ ಚಿದಂಬರಂ ಅವರ ನಿವಾಸದಲ್ಲಿ ಶೋಧ ನಡೆಸುತ್ತಿದೆ. ಕಳೆದೆರಡು ತಿಂಗಳ ಹಿಂದೆಯೂ ಕಾಂಗ್ರೆಸ್ ಹಿರಿಯ ನಾಯಕ ಪಿಸಿ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ನಂತರ ದೆಹಲಿ ಮತ್ತು ಚೆನ್ನೈನಲ್ಲಿ ಪಿ ಚಿದಂಬರಂ ಅವರ 8 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.
ಇದನ್ನೂ ಓದಿ: ಅಪ್ಪನ ಅಧಿಕಾರದಿಂದ ಅಲ್ಲ, ಕಠಿಣ ಪರಿಶ್ರಮದಿಂದಾಗಿ ನಾನಿಲ್ಲಿದ್ದೇನೆ: ಕಾರ್ತಿ ಚಿದಂಬರಂಗೆ ಟಾಂಗ್ ನೀಡಿದ ಕಾಂಗ್ರೆಸ್ ನಾಯಕ
ಪಿ. ಚಿದಂಬರಂ ಕೇಂದ್ರ ಗೃಹ ಮಂತ್ರಿಯಾಗಿದ್ದಾಗ 2011ರಲ್ಲಿ 263 ಚೀನಾ ಪ್ರಜೆಗಳಿಗೆ ವೀಸಾ ನೀಡಿಕೆ ಆರೋಪದಲ್ಲಿ ಕಾರ್ತಿ ಚಿದಂಬರಂ ಮತ್ತಿತರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇದೇ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ ಎಫ್ ಐಆರ್ ಅನ್ನು ಪರಿಗಣಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು.
Published On - 4:15 pm, Sat, 9 July 22