ಪ್ರಧಾನಿ ಮೋದಿ ಭೇಟಿ ಮಾಡಿದ ಮಹಾರಾಷ್ಟ್ರ ನಾಯಕರು; ನೂತನ ಮಂತ್ರಿ ಮಂಡಲ ರಚನೆಗೆ ಸಿಗುತ್ತಾ ಅಸ್ತು?
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ನವದೆಹಲಿ: ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Cm Eknath Shinde) ಮತ್ತು ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ (Devendra Fadnavis) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಈ ಸಂಬಂಧ ನಿನ್ನೆ (ಜುಲೈ 8) ದೆಹಲಿಗೆ ತೆರಳಿದ್ದು, ಸಂಜೆ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿದ್ದರು. ಈಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಮಹಾರಾಷ್ಟ್ರದ ಸಚಿವ ಸಂಪುಟ ರಚನೆಯ ಬಗ್ಗೆ ಚರ್ಚೆ ನಡೆಯಲಿದೆ.
ಬೃಹತ್ ಬಂಡಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಜೂನ್ 30ರಂದು ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡಿದ್ದರು ಮತ್ತು ಉಪ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅಧಿಕಾರದಲ್ಲಿದ್ದಾರೆ. 105 ಶಾಸಕರ ಬಲವನ್ನು ಹೊಂದಿರುವ ಬಿಜೆಪಿಗೆ ಮೂಲಗಳ ಪ್ರಕಾರ 28 ಸಚಿವ ಸ್ಥಾನಗಳು ದೊರೆಯಲಿದ್ದು, ಈ ಪೈಕಿ 8 ಮಂದಿ ರಾಜ್ಯ ಸಚಿವರಾಗುವ ನಿರೀಕ್ಷೆ ಇದೆ.
The Chief Minister of Maharashtra Shri @mieknathshinde and the Deputy Chief Minister Shri @Dev_Fadnavis called on PM @narendramodi. @CMOMaharashtra pic.twitter.com/i2ljZTeuFB
— PMO India (@PMOIndia) July 9, 2022
ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದಲ್ಲಿರುವ 40 ಮಂದಿ ಶಾಸಕರಲ್ಲಿ 8 ಜನ ಸಚಿವರಾಗುವ ನಿರೀಕ್ಷೆ ಇದೆ. ಈ ಇಬ್ಬರು ನಾಯಕರು ಶುಕ್ರವಾರ ರಾತ್ರಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ನೇತೃತ್ವದ ಬಣದ ನಡುವಿನ ಅಧಿಕಾರ ಹಂಚಿಕೆ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಭೇಟಿ ನಂತರ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ ಅಮಿತ್ ಷಾ ಅವರು, ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನೀವಿಬ್ಬರೂ ನಿಷ್ಠೆಯಿಂದ ಜನರಿಗೆ ಸೇವೆ ಸಲ್ಲಿಸುತ್ತೀರಿ, ಮಹಾರಾಷ್ಟ್ರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಪಿಟಿಐ ಪ್ರಕಾರ, ಮೋದಿ, ಜೆ.ಪಿ. ನಡ್ಡಾ ಭೇಟಿಯ ಬಳಿಕ ಸಂಜೆ ಸಿಎಂ ಏಕನಾಥ್ ಶಿಂಧೆ ಪುಣೆಗೆ ತೆರಳುತ್ತಾರೆ. ಭಾನುವಾರ ಮುಂಜಾನೆ ‘ಆಷಾಢ ಏಕಾದಶಿ’ ಮಹಾಪೂಜೆಯಲ್ಲಿ ಪಾಲ್ಗೊಳ್ಳಲು ದೇವಾಲಯದ ಪಟ್ಟಣವಾದ ಪಂಢರಪುರಕ್ಕೆ ತೆರಳಲಿದ್ದಾರೆ.
ಕೇಂದ್ರ ನಾಯಕರೊಂದಿಗೆ ಇಂದು ಮತ್ತು ನಾಳೆ ಸಚಿವ ಸಂಪುಟ ಕುರಿತು ಚರ್ಚೆ ನಡೆಯಲಿದ್ದು, ಯಾವ ಬಣಕ್ಕೆ ಎಷ್ಟು ಸಚಿವ ಸ್ಥಾನ ಒಲಿದು ಬರಲಿದೆ ಎಂದು ಕಾದು ನೋಡಬೇಕಿದೆ.