ನವದೆಹಲಿ: 40 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಆಮ್ ಆದ್ಮಿ ಪಕ್ಷದ (Aam Aadmi Party) ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ (Jaswant Singh Gajjan) ಅವರ ನಿವಾಸದಲ್ಲಿ ಇಂದು ಕೇಂದ್ರೀಯ ತನಿಖಾ ದಳವು (CBI) ಶೋಧ ನಡೆಸುತ್ತಿದೆ. ಜಸ್ವಂತ್ ಸಿಂಗ್ ಅವರ ಮನೆ ಸೇರಿದಂತೆ ಸಂಗ್ರೂರಿನ ಮೂರು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಅಮರ್‌ಗಢದ ಶಾಸಕರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರೂರ್ ಜಿಲ್ಲೆಯ ಮಲೇರ್‌ಕೋಟ್ಲಾ ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ. ಇದು ಅವರ ಪೂರ್ವಜರ ಮನೆ ಇರುವ ಸ್ಥಳವಾಗಿದೆ.
ಸಿಬಿಐ ಅಧಿಕಾರಿಗಳು ಇಂದು ಮಲೇರ್‌ಕೋಟ್ಲಾ (ಪಂಜಾಬ್) ಸೇರಿದಂತೆ ಮೂರು ಸ್ಥಳಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಖಾಸಗಿ ಸಂಸ್ಥೆಗಳು, ನಿರ್ದೇಶಕರು ಸೇರಿದಂತೆ ಆರೋಪಿಗಳ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ. ಅಂದಾಜು 16.57 ಲಕ್ಷ ರೂ. ನಗದು, ಸುಮಾರು 88 ವಿದೇಶಿ ಕರೆನ್ಸಿ ನೋಟುಗಳು, ಕೆಲವು ಆಸ್ತಿ ದಾಖಲೆಗಳು, ಹಲವಾರು ಬ್ಯಾಂಕ್ ಖಾತೆಗಳು ಮತ್ತು ಇತರ ದೋಷಾರೋಪಣೆಯ ದಾಖಲೆಗಳು ಪತ್ತೆಯಾಗಿವೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.
ಮಲೇರ್‌ಕೋಟ್ಲಾದ ಗೌನ್ಸ್‌ಪುರ ಮೂಲದ ಖಾಸಗಿ ಸಂಸ್ಥೆಯೊಂದರ ವಿರುದ್ಧ ಲುಧಿಯಾನದ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಈ ದೂರಿನಲ್ಲಿ ಸಂಸ್ಥೆಯ ನಿರ್ದೇಶಕರು, ಖಾಸಗಿ ಕಂಪನಿಯ ಖಾತರಿದಾರರು, ಇನ್ನೊಂದು ಖಾಸಗಿ ಸಂಸ್ಥೆ ಮತ್ತು ಅಜ್ಞಾತ ಸಾರ್ವಜನಿಕ ಸೇವಕರು, ಖಾಸಗಿ ವ್ಯಕ್ತಿಗಳು ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಹೆಸರಿಸಲಾಗಿದೆ.