ಕೇರಳದಲ್ಲಿ ಕೊವಿಡ್ 19 ಹೆಚ್ಚಳ; ಆರೋಗ್ಯ ಕ್ಷೇತ್ರ ಬಲವರ್ಧನೆಗೆ ಕೇಂದ್ರದಿಂದ 267 ಕೋಟಿ ರೂ. ಬಿಡುಗಡೆ
Covid 19: ಇಂದು ಕೇಂದ್ರ ಆರೋಗ್ಯ ಸಚಿವರು ನಡೆಸಿದ ಸಭೆಯಲ್ಲಿ ಕಾಯಿಲೆ ನಿಯಂತ್ರಣಾ ರಾಷ್ಟ್ರೀಯ ಕೇಂದ್ರದ ಮುಖ್ಯಸ್ಥ ಡಾ. ಸುಜೀತ್ ಕೆ ಸಿಂಗ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕೂಡ ಹಾಜರಿದ್ದರು.
ಕೇರಳದಲ್ಲಿ ಕೊರೊನಾ ಸೋಂಕಿನ (Corona Virus) ಪ್ರಮಾಣ ಹೆಚ್ಚಾಗಿದ್ದು, ಈಗಿರುವ ಸ್ಥಿತಿಗತಿ ಪರಿಶೀಲನೆಗಾಗಿ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೇರಿ ತಿರುವನಂತಪುರದಲ್ಲಿ ಸಭೆ ನಡೆಸಿದ್ದಾರೆ. ಸದ್ಯ ದಕ್ಷಿಣ ಭಾರತದ ರಾಜ್ಯಗಳಲ್ಲೇ ಅತ್ಯಂತ ಹೆಚ್ಚು ಕೊರೊನಾ ಕೇಸ್ (Covid 19)ಗಳು ದಾಖಲಾಗುತ್ತಿರುವುದು ಕೇರಳದಲ್ಲಿ. ಇತ್ತೀಚೆಗೆ ಕೇಂದ್ರದಿಂದ ನುರಿತ ತಜ್ಞರ ತಂಡವೊಂದನ್ನು ಕೇರಳ (Kerala)ಕ್ಕೆ ಕಳಿಸಲಾಗಿತ್ತು. ಇಂದು ಬೆಳಗ್ಗೆ ಸ್ವತಃ ಕೇಂದ್ರ ಆರೋಗ್ಯ ಸಚಿವರೇ ಇಲ್ಲಿಗೆ ಆಗಮಿಸಿ, ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ತುರ್ತು ಕೊವಿಡ್ ಪ್ರತಿಕ್ರಿಯಾ ಪ್ಯಾಕೇಜ್-2ರ ಅಡಿ ಕೇರಳಕ್ಕೆ 267.35 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು ಎಂದು ಸಭೆಯ ವೇಳೆ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ. ಕೇರಳದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದರೊಂದಿಗೆ, ಕೇರಳದ ಎಲ್ಲ ಜಿಲ್ಲೆಗಳಲ್ಲಿ ಔಷಧಗಳ ಲಭ್ಯತೆ ಪ್ರಮಾಣ ಹೆಚ್ಚಿಸಲು ಹೆಚ್ಚುವರಿಯಾಗಿ ಒಂದು ಕೋಟಿ ಬಿಡುಗಡೆ ಮಾಡಲಾಗುವುದು ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲ, ಕೇರಳದ ಪ್ರತಿ ಜಿಲ್ಲೆಯಲ್ಲೂ ಟೆಲಿಮೆಡಿಸಿನ್ ವ್ಯವಸ್ಥೆ ರೂಪಿಸಲೂ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ಇನ್ನು ಮಕ್ಕಳ ಆರೋಗ್ಯವನ್ನೂ ಆದ್ಯತೆಯನ್ನಾಗಿಸಲಾಗಿದೆ. ಪ್ರತಿ ಜಿಲ್ಲಾಸ್ಪತ್ರೆಗಳಲ್ಲೂ 10 ಕೆಎಲ್ ಲಿಕ್ವಿಡ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವಿರುವ ಮಕ್ಕಳ ಐಸಿಯು ಸ್ಥಾಪಿಸಲೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇಂದು ಕೇಂದ್ರ ಆರೋಗ್ಯ ಸಚಿವರು ನಡೆಸಿದ ಸಭೆಯಲ್ಲಿ ಕಾಯಿಲೆ ನಿಯಂತ್ರಣಾ ರಾಷ್ಟ್ರೀಯ ಕೇಂದ್ರದ ಮುಖ್ಯಸ್ಥ ಡಾ. ಸುಜೀತ್ ಕೆ ಸಿಂಗ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕೂಡ ಹಾಜರಿದ್ದರು. ನಾಳೆ ಮನ್ಸುಖ್ ಮಾಂಡವಿಯಾ ಅಸ್ಸಾಂನ ಗುವಾಹಟಿಯಲ್ಲಿ ಕೊರೊನಾ ಸ್ಥಿತಿಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಈಶಾನ್ಯ ರಾಜ್ಯಗಳ ಎಲ್ಲ ಆರೋಗ್ಯ ಸಚಿವರುಗಳೂ ಇರಲಿದ್ದಾರೆ.
ಕೇರಳದಲ್ಲಿ ಕೊರೊನಾ ಹೆಚ್ಚಳ ಕೇರಳದಲ್ಲಿ ಕೊರೊನಾ ಮಿತಿಮೀರಿದೆ. ಆಗಸ್ಟ್ 15ರಂದು 18ಸಾವಿರಕ್ಕೂ ಹೆಚ್ಚ ಕೇಸ್ಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 36.69 ಲಕ್ಷಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 102 ಮಂದಿ ಮೃತಪಟ್ಟಿದ್ದು, ಇಲ್ಲಿ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 18,601ಕ್ಕೆ ತಲುಪಿದೆ. ಇದುವರೆಗೆ 34,92,367 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳು 1,78,630 ಎಂದು ಕೇರಳ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ರಾತ್ರಿ 1.15ಕ್ಕೆ ಭಾಷಣ
‘ಉತ್ತರಾಖಂಡ ರಾಜ್ಯದ ಜನರಿಗಾಗಿ ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ’ -ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್
Published On - 11:20 pm, Mon, 16 August 21