ಕಬ್ಬು ಬೆಳೆಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ: ಎಷ್ಟು ಗೊತ್ತಾ?
ಇತ್ತೀಚೆಗೆ ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿದ್ದ ಕೇಂದ್ರ ಸರ್ಕಾರ ಇದೀಗ ಕಬ್ಬು ಬೆಳೆಗೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ.
ನವದೆಹಲಿ: ಕಬ್ಬು ಬೆಳೆಗೆ (Sugarcane Crop) ಬೆಂಬಲ ಬೆಲೆ ಹೆಚ್ಚಿಸಿವ ಮೂಲಕ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಗಿಫ್ಟ್ ನೀಡಿದೆ. ಪ್ರತಿ ಕ್ವಿಂಟಾಲ್ ಕಬ್ಬಿಗೆ 10 ರೂ. ಹೆಚ್ಚಳ ಮಾಡುವ ಮೂಲಕ 2023-24 ಸಾಲಿನಲ್ಲಿ ಕ್ವಿಂಟಾಲ್ ಕಬ್ಬಿಗೆ 315 ರೂ. ಬೆಲೆ ನಿಗದಿ ಮಾಡಿದೆ. ಕೇಂದ್ರ ಸಂಪುಟ ಸಭೆಯಲ್ಲಿ ನಡೆದ ಮಹತ್ವದ ನಿರ್ಧಾರ ಇದಾಗಿದೆ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಹೆಚ್ಚಳದಿಂದ ಕಬ್ಬು ಬೆಳೆಗಾರರು ಸಂತಸಗೊಂಡಿದ್ದಾರೆ. 2014-15ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ಗೆ 210 ರೂ. ಇದ್ದ ಕಬ್ಬಿನ ಎಫ್‌ಆರ್‌ಪಿ ಕಳೆದ ವರ್ಷ 305 ರೂಪಾಯಿ ಇತ್ತು. ಇದೀಗ 2023-24ನೇ ಸಾಲಿನಲ್ಲಿ ಕ್ವಿಂಟಲ್‌ಗೆ 315 ರೂ.ಗೆ ಏರಿಕೆಯಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಬ್ಬು ಬೆಂಬಲ ಬೆಲೆ 10 ರೂ. ಹೆಚ್ಚಳದಿಂದಾಗಿ ದೇಶದಲ್ಲಿರುವ 5 ಕೋಟಿಗೂ ಅಧಿಕ ಕಬ್ಬು ಬೆಳೆಗಾರರು, ಕೂಲಿ ಕಾರ್ಮಿಕರು ಹಾಗೂ ಸಕ್ಕರೆ ಕಾರ್ಖಾನೆಗಳ 5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. 2013-14ನೇ ಸಾಲಿನಲ್ಲಿ ದೇಶಾದ್ಯಂತ 57,104 ಕೋಟಿ ರೂಪಾಯಿ ಮೌಲ್ಯದ ಕಬ್ಬು ಖರೀದಿ ಮಾಡಿದ್ದ ಸಕ್ಕರೆ ಕಾರ್ಖಾನೆಗಳು, 2022-23ನೇ ಸಾಲಿನಲ್ಲಿ 1,11,366 ಕೋಟಿ ರೂ. ಮೌಲ್ಯದ 3,353 ಲಕ್ಷ ಟನ್ ಕಬ್ಬನ್ನು ಖರೀದಿ ಮಾಡಿವೆ ಅಂತಾ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಯೂರಿಯಾ ಸಬ್ಸಿಡಿ ಯೋಜನೆಯ ಮುಂದುವರಿಕೆಗೆ CCEA ಅನುಮೋದನೆ
ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಹಣವನ್ನು ಸಮಯಕ್ಕೆ ಸರಿಯಾಗಿ ಸಂದಾಯ ಮಾಡಲಾಗುತ್ತಿದೆ. ಕಾರ್ಖಾನೆಗಳು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದ ಕೇಂದ್ರ ಸಚಿವರು, ಎಥೆನಾಲ್ ಅನ್ನು ಕಚ್ಚಾತೈಲದ ಜೊತೆ ಬೆರೆಸುವ ಯೋಜನೆ ರೈತರಿಗೆ ಪ್ರಯೋಜನ ನೀಡಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 20,500 ಕೋಟಿ ರೂ. ಅನುದಾನ ನೀಡಿದೆ ಎಂದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ