ಸಿರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಸಿಇಒ ಪೂನಾವಾಲಾಗೆ ವೈ ಕೆಟೆಗಿರಿ ಭದ್ರತೆ

ಕೇಂದ್ರ ಮೀಸಲು ಪಡೆಯ ಜವಾನರು ಅದಾರ್ ಪೂನಾವಾಲಾ ಭಾರತದ ಯಾವುದೇ ಮೂಲೆಗೆ ಪ್ರಯಾಣಿಸಿದರೂ ಭದ್ರತೆಯನ್ನು ಒದಗಿಸುತ್ತಾರೆ.

ಸಿರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಸಿಇಒ ಪೂನಾವಾಲಾಗೆ ವೈ ಕೆಟೆಗಿರಿ ಭದ್ರತೆ
ಆಧಾರ್ ಪೂನಾವಾಲಾ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 28, 2021 | 10:40 PM

ನವದೆಹಲಿ: ಸಿರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಭಾರತದಾದ್ಯಂತ ವೈ ಕೆಟೆಗಿರಿ ಭದ್ರತೆ ಪಡೆಯಲಿದ್ದಾರೆಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಸದರಿ ಭದ್ರತಾ ಕೆಟೆಗಿರಿಯು ಒಂದಿಬ್ಬರು ಕಮಾಂಡೊಗಳು ಸೇರಿದಂತೆ ಪೊಲೀಸರನ್ನು ಒಳಗೊಂಡಿರುತ್ತದೆ. ಮೇ ಒಂದರಿಂದ ಲಸಿಕಾ ಅಭಿಯಾನದ ಮೂರನೆಯ ಹಂತ ಶುರುವಾಗುವ ಮೊದಲು ಪೂನಾವಾಲಾಗೆ ಭದ್ರತೆ ಒದಗಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ವರ್ಷವೊಂದರಲ್ಲಿ ತಯಾರಾಗುವ ಡೋಸ್​ಗಳ ಆಧಾರದಲ್ಲಿ ಪುಣೆಯಲ್ಲಿರುವ ಸಿರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ (ಎಸ್​ಐಐ) ದೇಶದ ಅತಿದೊಡ್ಡ ಲಸಿಕಾ ಉತ್ಪಾದಿಸುವ ಸಂಸ್ಥೆಯಾಗಿದ್ದು ಭಾರತದ ಲಸಿಕಾ ಅಭಿಯಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸಂಸ್ಥೆಯ ಕೋವಿಷೀಲ್ಡ್ ಅಲ್ಲದೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಭಾರತದ ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತೊಂದು ಲಸಿಕೆಯಾಗಿದೆ.

ಕೇಂದ್ರ ಮೀಸಲು ಪಡೆಯ ಜವಾನರು ಅದಾರ್  ಪೂನಾವಾಲಾ ಭಾರತದ ಯಾವುದೇ ಮೂಲೆಗೆ ಪ್ರಯಾಣಿಸಿದರೂ ಭದ್ರತೆಯನ್ನು ಒದಗಿಸುತ್ತಾರೆ. ಎಸ್​ಐಐ ಡೈರೆಕ್ಟರ್​ ಆಗಿರುವ ಪ್ರಕಾಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 16ರಂದು ಗೃಹ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು ಪೂನಾವಾಲಾ ಅವರಿಗೆ ಭದ್ರತೆ ಒದಗಿಸಬೇಕೆಂದು ಕೋರಿದ್ದರು.

ಕೊವಿಡ್-19 ಲಸಿಕೆ ಸರಬರಾಜು ಕುರಿತಂತೆ ಪೂನಾವಾಲಾ ಅವರಿಗೆ ಹಲವಾರು ಜನರಿಂದ ಬೆದರಿಕೆಗಳ ಬರುತ್ತಿವೆ ಎಂದು ಸಿಂಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ‘ಕೊವಿಡ್​-19 ಪಿಡುಗಿನ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಸಮರ್ಥ ನೇತೃತ್ವದಲ್ಲಿ ಹೋರಾಡುತ್ತಿರುವ ಭಾರತ ಸರ್ಕಾರದೊಂದಿಗೆ ನಾವು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದೇವೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಪೂನಾವಾಲಾ ಅವರು ಕೋವಿಶೀಲ್ಡ್​  ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ 150 ರೂಪಾಯಿಗಳಿಗೆ ಮಾರಿ ರಾಜ್ಯ ಸರ್ಕಾರಗಳಿಗೆ 400 ರೂಪಾಯಿಗಳಿಗೆ ಮಾರಿ ಭಾರೀ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಕಳೆದ ಕೆಲ ದಿನಗಳಿಂದ ಟೀಕೆಗಳು ಎದುರಾಗಿದ್ದವು. ಬುಧವಾರದಂದು ಕೇಂದ್ರವು 18ರಿಂದ 44 ವರ್ಷ ವಯಸ್ಸಿನವರಿಗೆ ಲಸಿಕೆಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಿದ ನಂತರ ಅವರು ಲಸಿಕೆಯ ದರವನ್ನು 100 ರೂಪಾಯಿ ಕಡಿಮೆ ಮಾಡಿ ಪ್ರತಿ ಡೋಸನ್ನು 300 ರೂಪಾಯಿಗಳಿಗೆ ಮಾರುವುದಾಗಿ ಹೇಳಿದ್ದರು. ಆದರೆ ಪೂನಾವಾಲಾ ಅವರ ಪರಿಷ್ಕೃತ ದರ ರಾಜ್ಯ ಸರ್ಕಾರಗಳನ್ನು ಸಂತೃಪ್ತಿಗೊಳಿಸಿಲ್ಲ. ಯಾಕೆಂದರೆ ಕೇಂದ್ರಕ್ಕೆ ಮಾರುತ್ತಿರುವ ಮತ್ತು ರಾಜ್ಯಗಳಿಗೆ ನಿಗದಿಪಡಿಸಿರುವ ದರದಲ್ಲಿ ಇನ್ನೂ 150 ರೂಪಾಯಿಗಳ ವ್ಯತ್ಯಾಸವಿದೆ.

‘ಸಿರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಪರ ದೇಣಿಗೆಯ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡುತ್ತಿರವ ಕೋವಿಶೀಲ್ಡ್​ ಲಸಿಕೆಯ ಪ್ರತಿ ಡೋಸಿನ ದರವನ್ನು ₹ 400 ರಿಂದ ₹ 300 ಗಳಿಗೆ ತಕ್ಷಣವೇ ಇಳಿಸಲಾಗುವುದೆಂದು ನಾನು ಈ ಮೂಲಕ ಹೇಳುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಇದು ರಾಜ್ಯ ಸರ್ಕಾರಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಲಿದೆ. ಈ ಉಳಿತಾಯ ಹೆಚ್ಚುವರಿ ಲಸಿಕೆಗಳನ್ನು ಖರೀದಿಸಿ ಅಸಂಖ್ಯಾತ ಪ್ರಾಣಗಳನ್ನು ಉಳಿಸಲು ನೆರವಾಗುತ್ತದೆ’ ಎಂದು ಪೂನಾವಾಲಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Covishield Price: ಕೋವಿಶೀಲ್ಡ್​ ಲಸಿಕೆ 300 ರೂಪಾಯಿಗೆ ರಾಜ್ಯ ಸರ್ಕಾರಗಳಿಗೆ ಒದಗಿಸಲು ಸೇರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಸಮ್ಮತಿ

Published On - 10:37 pm, Wed, 28 April 21