ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೊ ಸೋರಿಕೆ ವಿವಾದ: ಪ್ರಕರಣದ ಸತ್ಯಾಂಶ ಏನು? ವಿವಿ ಹೇಳಿಕೆಯಲ್ಲೇನಿದೆ?
ಚಂಡೀಗಢ ವಿಶ್ವವಿದ್ಯಾನಿಲಯದ ಹೇಳಿಕೆಯೊಂದರಲ್ಲಿ ಯಾವುದೇ ವಿದ್ಯಾರ್ಥಿಯ ಯಾವುದೇ ಆಕ್ಷೇಪಾರ್ಹ ಎಂದು ಕಾಣುವ ವಿಡಿಯೊ ಕಂಡುಬಂದಿಲ್ಲ , ಆದರೆ ಹುಡುಗಿಯೊಬ್ಬಳು ಚಿತ್ರೀಕರಿಸಿದ ವೈಯಕ್ತಿಕ...

ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ (Chandigarh University) ತಡರಾತ್ರಿ ನಡೆದ ಪ್ರತಿಭಟನೆಯ ನಡುವೆ ಭಾರೀ ಗಲಾಟೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಶಿಮ್ಲಾದ ಹುಡುಗನಿಗೆ ವಿಡಿಯೊ ಕಳುಹಿಸಿದ ಆರೋಪದಿಂದ ಇದು ಪ್ರಾರಂಭವಾಯಿತು ಎಂದು ಹೇಳಲಾಗಿದೆ. ಆಕೆ ಸಹ ವಿದ್ಯಾರ್ಥಿಗಳ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ವಿಶ್ವ ವಿದ್ಯಾಲಯದಲ್ಲಿ ತಡರಾತ್ರಿ ಹೊತ್ತಿಗೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದು, ತನಿಖೆ ಮತ್ತು ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವಿಡಿಯೊಗಳ ಸೋರಿಕೆಯನ್ನು ಹಲವು ರಾಜಕೀಯ ಪಕ್ಷಗಳ ನಾಯಕರು ಖಂಡಿಸಿದ್ದಾರೆ.
ಚಂಡೀಗಢ ವಿವಿಯಲ್ಲಿ ವಿಡಿಯೊ ಸೋರಿಕೆ ವಿವಾದದ ಸುತ್ತ
- ಚಂಡೀಗಢ ವಿಶ್ವವಿದ್ಯಾನಿಲಯದ ಹೇಳಿಕೆಯೊಂದರಲ್ಲಿ ಯಾವುದೇ ವಿದ್ಯಾರ್ಥಿಯ ಯಾವುದೇ ಆಕ್ಷೇಪಾರ್ಹ ಎಂದು ಕಾಣುವ ವಿಡಿಯೊ ಕಂಡುಬಂದಿಲ್ಲ , ಆದರೆ ಹುಡುಗಿಯೊಬ್ಬಳು ಚಿತ್ರೀಕರಿಸಿದ ವೈಯಕ್ತಿಕ ವಿಡಿಯೊವನ್ನು ಆಕೆ ಆಕೆಯ ಬಾಯ್ ಫ್ರೆಂಡ್ ಜತೆ ಹಂಚಿಕೊಂಡಿದ್ದಾಳೆ.
- “ಇತರ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೊಗಳನ್ನು ಚಿತ್ರೀಕರಿಸಲಾಗಿದೆ ಎಂಬ ಎಲ್ಲಾ ವದಂತಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಚಂಡೀಗಢ ವಿಶ್ವವಿದ್ಯಾನಿಲಯದ ಪ್ರೊ-ಕುಲಪತಿ ಡಾ. ಆರ್.ಎಸ್ ಬಾವಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏಳು ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳಿವೆ. ಆದರೆ ಯಾವುದೇ ಹುಡುಗಿ ಅಂತಹ ಕೃತ್ಯಕ್ಕೆ ಪ್ರಯತ್ನಿಸಲಿಲ್ಲ. ಘಟನೆಯಲ್ಲಿ ಯಾವುದೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಬಾವಾ ಹೇಳಿದ್ದಾರೆ.
- ಹಾಸ್ಟೆಲ್‌ನಲ್ಲಿರುವ ಇತರ ಹುಡುಗಿಯರು ವಿಡಿಯೊ ಚಿತ್ರೀಕರಿಸುತ್ತಿರುವುದನ್ನು ನೋಡಿದ್ದಾರೆ. ಅವರು ವಾಶ್‌ರೂಮ್‌ನಲ್ಲಿದ್ದಾಗ ಅವರ ವಿಡಿಯೊವನ್ನೂ ಹುಡುಗಿಯೊಬ್ಬಳು ಶೂಟ್ ಮಾಡುತ್ತಿದ್ದಾಳೆ ಎಂದು ಭಾವಿಸಿ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಮೊಹಾಲಿ ವಿವೇಕ್ ಶೀಲ್ ಸೋನಿ ಸ್ಪಷ್ಟಪಡಿಸಿದ್ದಾರೆ.
- ವಿವಾದದ ಕೇಂದ್ರಬಿಂದುವಾದ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ಬಾಯ್ ಫ್ರೆಂಡ್ ನ್ನು ಕೂಡಾ ಪೊಲೀಸರು ಬಂಧಿಸಲಿದ್ದಾರೆ.
- ಎಲ್ಲೆಡೆಯಿಂದ ಟೀಕಾ ಪ್ರಹಾರ ನಡೆಯುತ್ತಿರುವ ನಡುವೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
- “ನಮ್ಮ ಹೆಣ್ಣುಮಕ್ಕಳು ನಮ್ಮ ಘನತೆ ಮತ್ತು ಹೆಮ್ಮೆ” ಎಂದು ಮಾನ್ ಹೇಳಿದ್ದು ಘಟನೆಯು “ಖಂಡನೀಯ” ಎಂದಿದ್ದಾರೆ. ಇದರಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
- ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚಂಡೀಗಡ ವಿವಿಯ ಘಟನೆ ನಾಚಿಕೆಗೇಡಿನ ಸಂಗತಿಯಾಗಿದೆ. ಹೊಣೆಗಾರರಿಗೆ ಕಠಿಣ ಶಿಕ್ಷೆ ನೀಡಬೇಕು. ನಮ್ಮ ಹೆಣ್ಣುಮಕ್ಕಳ ಘನತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪೊಲೀಸರು ಕ್ರಮಕೈಗೊಳ್ಳುತ್ತಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಮಾದರಿಯಾಗುತ್ತಾರೆ ಎಂದು ಭಾವಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.
- ಅಕಾಲಿದಳದ ಹರ್ಸಿಮ್ರತ್ ಕೌರ್ ಬಾದಲ್ ಕೂಡ ಈ ಹಿಂದೆ ಸಿಎಂ ಮಾನ್ ಅವರಲ್ಲಿ ತಪ್ಪಿಸತ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಎಲ್ಲಾ ಆಕ್ಷೇಪಾರ್ಹ ವಿಡಿಯೊಗಳನ್ನು ತೆಗೆದುಹಾಕುವ ಮೂಲಕ ಇಂಟರ್‌ನೆಟ್‌ನಲ್ಲಿ ಹೆಣ್ಣು ವಿದ್ಯಾರ್ಥಿಗಳ ಘನತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಬಾದಲ್ ಒತ್ತಾಯಿಸಿದರು. ಅದೇ ವೇಳೆ ವಿವಿ ಮಾಹಿತಿಗಳನ್ನು ದಮನಿಸಲು ಯತ್ನಿಸಬಾರದು ಎಂದಿದ್ದಾರೆ ಅವರು.
- ರಾಷ್ಟ್ರೀಯ ಮಹಿಳಾ ಆಯೋಗವು ಘಟನೆಯ ಬಗ್ಗೆ ತೀವ್ರ ತನಿಖೆಯನ್ನು ಕೋರಿದೆ.
- ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷ ಇಶರ್‌ಪ್ರೀತ್ ಸಿಂಗ್‌ಗೆ ಭೇಟಿ ನೀಡಲು ಅವಕಾಶ ನೀಡಲಿಲ್ಲ ಎಂದು ಪಂಜಾಬ್ ಯೂತ್ ಕಾಂಗ್ರೆಸ್ ಮುಖ್ಯಸ್ಥ ಬೃಂದರ್ ಧಿಲ್ಲೋನ್ ಆರೋಪಿಸಿದ್ದಾರೆ.
Published On - 7:22 pm, Sun, 18 September 22