Onam Bumper ₹25 ಕೋಟಿ ಬಹುಮಾನದ ಓಣಂ ಬಂಪರ್: ತಿರುವನಂತಪುರಂ ನಿವಾಸಿ, ಆಟೋ ಚಾಲಕನಿಗೆ ಒಲಿದ ಅದೃಷ್ಟ
ತಿರುವನಂತಪುರಂನ ಪಳವಂಙಾಡಿ ಭಗವತಿ ಲಾಟರಿ ಏಜೆನ್ಸಿಯಿಂದ ಖರೀದಿಸಿದ ಟಿಜೆ 750605 ಸಂಖ್ಯೆಗೆ ಮೊದಲ ಬಹುಮಾನ ಒಲಿದಿದೆ.
ತಿರುವನಂತಪುರಂ: ಈ ಬಾರಿ ಕೇರಳದ ಓಣಂ ಬಂಪರ್ (Onam Bumper) ಬಹುಮಾನ ಮೊತ್ತ ₹25 ಕೋಟಿ. ಬೃಹತ್ ಮೊತ್ತದ ಈ ಲಾಟರಿ ಫಲಿತಾಂಶ ಇಂದು(ಭಾನುವಾರ) ಮಧ್ಯಾಹ್ನ ಪ್ರಕಟವಾಗಿದೆ. ಈ ಬಾರಿಯ ಅದೃಷ್ಟಶಾಲಿ ತಿರುವನಂತಪುರಂ ಶ್ರೀವರಾಹಂ ನಿವಾಸಿ 30 ವರ್ಷದ ಅನೂಪ್ ಎಂಬ ಆಟೋ ಚಾಲಕ. ತಿರುವನಂತಪುರಂನ ಪಳವಂಙಾಡಿ ಭಗವತಿ ಲಾಟರಿ ಏಜೆನ್ಸಿಯಿಂದ ಖರೀದಿಸಿದ ಟಿಜೆ 750605 ಸಂಖ್ಯೆಗೆ ಮೊದಲ ಬಹುಮಾನ ಒಲಿದಿದೆ. ಅನೂಪ್ ಮನೆಯಲ್ಲಿ ಪತ್ನಿ, ಮಗು ಮತ್ತು ತಾಯಿ ಇದ್ದಾರೆ. ಪಳವಂಙಾಡಿ ಭಗವತಿ ಲಾಟರಿ ಏಜೆನ್ಸಿಯಿಂದ ಅನೂಪ್ ನಿನ್ನೆ ರಾತ್ರಿ 8 ಗಂಟೆಗೆ ಲಾಟರಿ ಖರೀದಿಸಿದ್ದರು. ಅನೂಪ್ ಅವರ ತಂದೆಯ ಸಹೋದರಿಯ ಮಗಳು ಸುಜಯಾ ಲಾಟರಿ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಅನೂಪ್ ತನ್ನ ಸಹೋದರಿಯಿಂದಲೇ ಟಿಕೆಟ್ ಖರೀದಿಸಿದ್ದರು. ಮೊದಲ ಬಹುಮಾನ ವಿಜೇತರಿಗೆ ತೆರಿಗೆಯ ನಂತರ 15.75 ಕೋಟಿ ರೂ. ಟಿಕೆಟ್‌ನ ಹಿಂಭಾಗದಲ್ಲಿ ಸಹಿ ಮಾಡಿದವರು ಬಹುಮಾನಕ್ಕೆ ಅರ್ಹರಾಗಿರುತ್ತಾರೆ. ದ್ವಿತೀಯ ಬಹುಮಾನ 5 ಕೋಟಿ ರೂ. ಮೂರನೇ ಬಹುಮಾನ ಹತ್ತು ಜನರಿಗೆ ತಲಾ ಒಂದು ಕೋಟಿ ರೂ. 90 ಮಂದಿಗೆ ನಾಲ್ಕನೇ ಬಹುಮಾನವಾಗಿ ಒಂದು ಲಕ್ಷ ರೂಪಾಯಿ ಸಿಗಲಿದೆ. ಈ ಬಾರಿ ಒಟ್ಟು 126 ಕೋಟಿ ರೂ.ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
ಶನಿವಾರ ಸಂಜೆಯವರೆಗೆ 66.5 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಓಣಂಗೆ 54 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಈ ಬಾರಿ ಮೊದಲು 65 ಲಕ್ಷ ಟಿಕೆಟ್ ಮುದ್ರಿಸಲಾಗಿದೆ. ಬೇಡಿಕೆ ಹೆಚ್ಚಿದ್ದರಿಂದ ಎರಡೂವರೆ ಲಕ್ಷ ಹೆಚ್ಚು ಮುದ್ರಣವಾಯಿತು. ಭಾನುವಾರ ಮಧ್ಯಾಹ್ನದವರೆಗೆ ಟಿಕೆಟ್ ಮಾರಾಟವಾಗಿತ್ತು. ಈ ಬಾರಿ 90 ಲಕ್ಷದವರೆಗೆ ಟಿಕೆಟ್ ಮುದ್ರಿಸಲು ಲಾಟರಿ ಇಲಾಖೆಗೆ ಸರ್ಕಾರ ಅನುಮತಿ ನೀಡಿತ್ತು.
ಮಗುವಿನ ಹಣದ ಕುಡಿಕೆ ಒಡೆದು ಖರೀದಿಸಿದ ಟಿಕೆಟ್
ತನ್ನ ಅದೃಷ್ಟದ ಗೆಲುವಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅನೂಪ್, ಇದು ಬಂಪರ್ ಲಾಟರಿಯಲ್ಲಿ ತನ್ನ ಮೊದಲ ಗೆಲುವು ಎಂದು ಹೇಳಿದರು. ಈ ಹಿಂದೆ ಲಾಟರಿಯಲ್ಲಿ ಗರಿಷ್ಠ 5,000 ರೂ ಗೆದ್ದಿದ್ದರು. ಕೆಲಸಕ್ಕಾಗಿ ಮಲೇಷ್ಯಾಗೆ ಹೋಗಲು ನಾನು ಯೋಚಿಸಿದ್ದೆ, ಇನ್ನು ಅಲ್ಲಿಗೆ ಹೋಗುವ ಅಗತ್ಯವಿಲ್ಲ ಎಂದು ಅನೂಪ್ ಹೇಳಿದ್ದಾರೆ. ಲಾಟರಿ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಈಗ ಲಾಟರಿ ಗೆದ್ದ ಮಾತ್ರ ಇದೆ. ಭವಿಷ್ಯದ ಯಾವುದೇ ಯೋಜನೆಗಳನ್ನು ನಿರ್ಧರಿಸಲಾಗಿಲ್ಲ ಎಂದು ಮಾತೃಭೂಮಿ ನ್ಯೂಸ್ ಜತೆ ಮಾತನಾಡಿದ ಅನೂಪ್ ಹೇಳಿದ್ದಾರೆ. ಫಲಿತಾಂಶ ಬಂದಾಗ ಮೊದಲ ಬಹುಮಾನವೇ ಎಂಬ ಅನುಮಾನ ಮೂಡಿತ್ತು. ಆಮೇಲೆ ಲಾಟರಿ ಸಂಖ್ಯೆ ನೋಡಿ ನನ್ನ ಪತ್ನಿ ಖಚಿತಪಡಿಸಿದ್ದಾರೆ. ಶನಿವಾರ ಸಂಜೆ 7:30 ರ ನಂತರ ಟಿಕೆಟ್ ಖರೀದಿಸಿದ್ದೆ. ಮೊದಲು ಒಂದು ಟಿಕೆಟ್ ಖರೀದಿಸಲು ಹೋಗಿ ಅದು ಬೇಡ ಎಂದು ಮತ್ತೊಂದು ಟಿಕೆಟ್ ಖರೀದಿಸಿದ್ದೆ. ಕೊನೇ ಗಳಿಗೆಯಲ್ಲಿ ಲಾಟರಿ ಖರೀದಿಸಲು 50 ರೂ ಕಮ್ಮಿ ಇತ್ತು. ಮಗುವಿನ ಹಣ ಕೂಡಿಟ್ಟ ಕುಡಿಕೆ ಒಡೆದು ಆ ಹಣ ಸೇರಿಸಿ ಈ ಲಾಟರಿ ಖರೀದಿಸಿದ್ದು, ಅದೃಷ್ಟ ಒಲಿಯಿತು ಎಂದು ಅನೂಪ್ ಹೇಳಿದ್ದಾರೆ.
ಕೇರಳ ಲಾಟರಿಯ ಇತಿಹಾಸ
ಕೇರಳ ರಾಜ್ಯ ತಮ್ಮ ಆದಾಯ ಹೆಚ್ಚಿಸುವುದಕ್ಕಾಗಿ 1967ರಲ್ಲಿ ಲಾಟರಿ ಇಲಾಖೆಯನ್ನು ಸ್ಥಾಪಿಸಿತು. ಆಗ ರಾಜ್ಯದ ಹಣಕಾಸು ಸಚಿವರಾಗಿದ್ದದ್ದು ಪಿ.ಕೆ ಕುಂಞು ಸಾಹೀಬ್. ಆದಾಯದ ಮೂಲದ ಜತೆಗೆ ಬಡವರು ಮತ್ತು ಅಂಗವಿಕಲರಿಗೆ ಆದಾಯದ ಮೂಲ ಎಂಬುದು ಈ ಯೋಜನೆಯ ಉದ್ದೇಶವಾಗಿತ್ತು. ಮೊದಲಿಗೆ 1 ರೂ ಟಿಕೆಟ್ ಬೆಲೆಯ ಲಾಟರಿ ಮಾರಿದ್ದು, 1968 ಜನವರಿ 26ರಂದು ಲಾಟರಿ ಡ್ರಾ ಆಗಿತ್ತು. ಆಗ ಮೊದಲ ಬಹುಮಾನ ಇದ್ದದ್ದು ₹50,000. ಇದಾದ ನಂತರ ಕೇರಳದಂತೆಯೇ ಇತರ ರಾಜ್ಯಗಳೂ ತಮ್ಮ ರಾಜ್ಯಗಳಲ್ಲಿ ಲಾಟರಿ ಆರಂಭಿಸಿದವು. 2019-20ರಲ್ಲಿ ಲಾಟರಿ ಮಾರಾಟದಿಂದ ರಾಜ್ಯದ ವಹಿವಾಟು ₹9972.97 ಕೋಟಿ. ಇದರಲ್ಲಿ ಲಾಭ ₹1763.69 ಕೋಟಿ. ಆದಾಗ್ಯೂ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಆದಾಯ ಇಳಿಕೆ ಆಗಿದೆ. 2020-21ರಲ್ಲಿ ವಹಿವಾಟು ₹4911.52ಕೋಟಿ ಮತ್ತು 2021-22ರಲ್ಲಿ ವಹಿವಾಟು ₹7145.21 ಕೋಟಿ ಆಗಿದೆ. 2020-21ರಲ್ಲಿ ಲಾಭ ₹472.70 ಕೋಟಿ, 2021-22ರಲ್ಲಿ ಲಾಭ ₹559.63 ಆಗಿದೆ. ವರ್ಷದಲ್ಲಿ 6 ಬಂಪರ್ ಲಾಟರಿಗಳ ಜತೆಗೆ ವೀಕ್ಲಿ (ವಾರಕ್ಕೊಂದು) ಬಹುಮಾನ ನೀಡುವ ಮತ್ತು ತಿಂಗಳಲ್ಲೊಂದು ಬಹುಮಾನ ನೀಡುವ ಲಾಟರಿ ಮಾರಾಟ ಮಾಡುತ್ತದೆ.
ಕ್ಯಾನ್ಸರ್ನಿಂದ ಬಳಲುತ್ತಿರುವ, ಕಿಡ್ನಿ, ಹೃದಯ ಮತ್ತು ಮಾರಕ ರೋಗಳಿಂದ ಬಳಲುತ್ತಿರುವ ಬಡವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಕೇರಳ ಸರ್ಕಾರ 2012ರಲ್ಲಿ ಕಾರುಣ್ಯ ಬೆನೆವೊಲೆಂಟ್ ಫಂಡ್ ಆರಂಭಿಸಿತ್ತು. ಈ ಫಂಡ್ ಗೆ ಹಣ ಬರುವುದು ಕಾರುಣ್ಯ ಮತ್ತು ಕಾರುಣ್ಯ ಪ್ಲಸ್ ಲಾಟರಿ ಮೂಲಕ.
ಲಾಟರಿ ಮಾರುವವರು ಹೆಚ್ಚಿನವರು ಅಂಗವಿಕಲರು. ಇದು ಅವರಿಗೆ ಆದಾಯದ ಮೂಲ. ಇದು ಈ ಯೋಜನೆಯ ಉದ್ದೇಶವನ್ನು ತೋರಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಒಟ್ಟು ಆದಾಯದ ಶೇ 1ರಷ್ಟು ಹಣವನ್ನು ಲಾಟರಿ ಏಜೆಂಟ್ ಮತ್ತು ಮಾರಾಟಗಾರರ ಕಲ್ಯಾಣಕ್ಕಾಗಿ ವಿನಿಯೋಗಿಸಲಾಗುತ್ತದೆ. ಲಾಟರಿ ಏಜೆಂಟರು ಮತ್ತು ಮಾರಾಟಗಾರರು ತಿಂಗಳಿಗೆ 10000 ಟಿಕೆಟ್ ಖರೀದಿಸುವ ಮೂಲಕ ಅಥವಾ ತ್ರೈಮಾಸಿಕದಲ್ಲಿ 30000 ಮೊತ್ತದ ಟಿಕೆಟ್ ಖರೀದಿಸುವ ಮೂಲಕ ಲಾಟರಿ ಏಜೆಂಟ್ ಮತ್ತು ಮಾರಾಟಗಾರರ ಕಲ್ಯಾ ಣ ನಿಧಿ ಮಂಡಳಿ ಸದಸ್ಯತ್ವ ಪಡೆಯುತ್ತಾರೆ. ಏತನ್ಮಧ್ಯೆ, ಟಿಕೆಟ್ ಖರೀದಿಸುವವರು ಸಮಾಜದಲ್ಲಿನ ಸಾಮಾನ್ಯ, ಕೆಳವರ್ಗದಲ್ಲಿನ ಜನರಾಗಿರುವುದರಿಂದ ಟಿಕೆಟ್ ಬೆಲೆ 500 ಆಗಿ ಏರಿಸಿದ್ದಕ್ಕೆ ಟೀಕೆಗಳೂ ಕೇಳಿ ಬಂದಿತ್ತು.
Published On - 4:48 pm, Sun, 18 September 22