ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಮೊದಲ ಶಿಕ್ಷೆ ವಿಧಿಸಿದ ನ್ಯಾಯಾಲಯ
ಉತ್ತರ ಪ್ರದೇಶದ ಅಮ್ರೋಹಾದಲ್ಲಿನ ನ್ಯಾಯಾಲಯವು ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ 26 ವರ್ಷದ ಯುವಕನಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಲಖನೌ: ಉತ್ತರ ಪ್ರದೇಶದ (Uttar Pradesh) ಅಮ್ರೋಹಾದಲ್ಲಿನ ನ್ಯಾಯಾಲಯವು ಮತಾಂತರ ನಿಷೇಧ ಕಾನೂನಿನ (Anti-Conversion law) ಅಡಿಯಲ್ಲಿ 26 ವರ್ಷದ ಯುವಕನಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದು ಉತ್ತರ ಪ್ರದೇಶದ ಮತಾಂತರ ನಿಷೇಧ ಕಾಯ್ದೆ 2021ರ ಅಡಿಯಲ್ಲಿ ನೀಡಲಾದ ಮೊದಲ ತೀರ್ಪು ಇದಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಡಿಎನ್ಎ ವರದಿ ಮಾಡಿದೆ.
ಡಿಸೆಂಬರ್ 2021 ರಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು- ಸುವ್ಯವಸ್ಥೆ) ಅಶುತೋಷ್ ಪಾಂಡೆ ಅವರು ಮತಾಂತರ ನಿಷೇಧ ಕಾಯ್ದೆಯನ್ನು ಪರಿಚಯಿಸಿದರು. ಅಮ್ರೋಹಾ ಜಿಲ್ಲೆಯ ಪೋಕ್ಸೊ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕಪಿಲಾ ರಾಘವ್ ಅವರು ಶನಿವಾರ (ಸೆ.18) ಅಫ್ಜಲ್‌ಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 40,000 ರೂಪಾಯಿ ದಂಡ ವಿಧಿಸಿದ್ದಾರೆ.
16 ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಹಸನ್‌ಪುರ ಪೊಲೀಸ್ ಠಾಣೆಯ ತನಿಖಾ ಅಧಿಕಾರಿ ಗಜೇಂದ್ರ ಪಾಲ್ ಸಿಂಗ್ ಏಪ್ರಿಲ್ 4, 2021 ರಂದು, ಆರೋಪಿ ಅಫ್ಜಲ್ನನ್ನು ದೆಹಲಿಯಲ್ಲಿ ಬಂಧಿಸಿದ್ದರು. ಆರೋಪಿ ವಿರುದ್ಧ ಮತಾಂತರ ನಿಷೇಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಾಲಕಿಯ ತಂದೆ ಸಸ್ಯ ನರ್ಸರಿ ನಡೆಸುತ್ತಿದ್ದು, ತನ್ನ ಮಗಳು ಕೆಲಸಕ್ಕೆಂದು ಮನೆಯಿಂದ ಹೋದಳು ಹಿಂತಿರುಗಲಿಲ್ಲ ಎಂದು ಹೇಳಿಕೊಂಡಿದ್ದರು. ಇಬ್ಬರು ಸ್ಥಳೀಯರು ಆಕೆಯನ್ನು ಯುವಕನೊಂದಿಗೆ ನೋಡಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದರು. ಸಸಿಗಳನ್ನು ಖರೀದಿಸಲು, ತನ್ನ ತಂದೆಯ ನರ್ಸರಿಗೆ ಅಫ್ಜಲ್ ಬರುತ್ತಿದ್ದು, ಆಗ ಇಬ್ಬರು ಪರಿಚಯವಾಗಿದ್ದರು ಎಂದು ಬಾಲಕಿಯ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದರು. ನಂತರ ಪೊಲೀಸರು ಅಫ್ಜಲ್ ವಿರುದ್ಧ ಪ್ರಕರಣ ದಾಖಲಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Sun, 18 September 22