Kerala Assembly: ಕೇರಳ ವಿಧಾನಸಭೆಯಲ್ಲಿ ವಿಪಕ್ಷ ಗದ್ದಲ; ಸ್ಪೀಕರ್ ವಿರುದ್ಧ ಪ್ರತಿಭಟಿಸಿದ ಶಾಸಕರನ್ನು ಬಲವಂತವಾಗಿ ಎತ್ತಿ ಹೊರಹಾಕಿದ ಸಿಬ್ಬಂದಿ

ಮಹಿಳೆಯರ ಭದ್ರತೆ ಕುರಿತು ಚರ್ಚಿಸಲು ಮುಂದೂಡಿಕೆ ಸೂಚನೆಯನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ಸ್ಪೀಕರ್ ಇಂದು ಘೋಷಿಸಿದಾಗ, ವಿರೋಧ ಪಕ್ಷದ ಶಾಸಕರು ಘೋಷಣೆಗಳನ್ನು ಕೂಗಿ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ.

Kerala Assembly: ಕೇರಳ ವಿಧಾನಸಭೆಯಲ್ಲಿ ವಿಪಕ್ಷ ಗದ್ದಲ; ಸ್ಪೀಕರ್ ವಿರುದ್ಧ ಪ್ರತಿಭಟಿಸಿದ ಶಾಸಕರನ್ನು ಬಲವಂತವಾಗಿ ಎತ್ತಿ ಹೊರಹಾಕಿದ ಸಿಬ್ಬಂದಿ
ಸ್ಪೀಕರ್ ಕಚೇರಿ ಮುಂದೆ ವಿಪಕ್ಷಗಳ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on:Mar 15, 2023 | 4:05 PM

ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ (Kerala Assembly) ಇಂದು ಸ್ಪೀಕರ್ ಕಚೇರಿಯ ಹೊರಗೆ ವಿರೋಧ ಪಕ್ಷದ ಶಾಸಕರು ನಡೆಸಿದ ಪ್ರತಿಭಟನೆ ವೇಳೆ ಗಲಿಬಿಲಿಯ ವಾತಾವರಣವುಂಟಾಗಿದ್ದು ಭದ್ರತಾ ಸಿಬ್ಬಂದಿ ಶಾಸಕರನ್ನು ಬಲವಂತವಾಗಿ ಹೊರ ಹಾಕಿದ್ದಾರೆ. ಪ್ರತಿಭಟನೆಯಿಂದ ಹಿಂದೆ ಸರಿಯಲು ನಿರಾಕರಿಸಿ ನೆಲದ ಮೇಲೆ ಮಲಗಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ (UDF) ಶಾಸಕರನ್ನು ಸ್ಪೀಕರ್ ಎಎನ್ ಶಂಶೀರ್ (Speaker AN Shamsheer) ಅವರ ಕಚೇರಿಯ ಸಿಬ್ಬಂದಿಗಳು ಎತ್ತಿಕೊಂಡು ಹೊರಗೆ ಕರೆದೊಯ್ದಿದ್ದಾರೆ.

ಮಹಿಳೆಯರ ಸುರಕ್ಷತೆ ಕುರಿತು ಚರ್ಚಿಸಲು ಮಂಡಿಸಿದ ಮುಂದೂಡಿಕೆ ನಿರ್ಣಯ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಶಾಸಕರು ಪ್ರತಿಭಟನೆ ನಡೆಸಿದರು. ಕೊಚ್ಚಿ ಡಂಪ್‌ಯಾರ್ಡ್‌ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ಕೌನ್ಸಿಲರ್‌ಗಳ ವಿರುದ್ಧ ಪೊಲೀಸ್‌ ಕ್ರಮದ ಕುರಿತು ಚರ್ಚಿಸಲು ಮುಂದೂಡಿಕೆ ಪ್ರಸ್ತಾವನೆಯನ್ನು ಮಂಗಳವಾರ ಕೈಗೆತ್ತಿಕೊಂಡಿರಲಿಲ್ಲ.

ಮಹಿಳೆಯರ ಭದ್ರತೆ ಕುರಿತು ಚರ್ಚಿಸಲು ಮುಂದೂಡಿಕೆ ಸೂಚನೆಯನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ಸ್ಪೀಕರ್ ಇಂದು ಘೋಷಿಸಿದಾಗ, ವಿರೋಧ ಪಕ್ಷದ ಶಾಸಕರು ಘೋಷಣೆಗಳನ್ನು ಕೂಗಿ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ. ಸ್ಪೀಕರ್ ಪಕ್ಷಪಾತಿ ಎಂದು ಆರೋಪಿಸಿದ ವಿಪಕ್ಷ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದಂತೆ ಸ್ಪೀಕರ್ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಇದಾದ ನಂತರ ಪ್ರತಿಪಕ್ಷಗಳ ಶಾಸಕರು ಸದನದಿಂದ ಹೊರನಡೆದು ಸ್ಪೀಕರ್ ಕಚೇರಿಗೆ ಮೆರವಣಿಗೆ ನಡೆಸಿದರು. ರಾಜ್ಯ ವಿಧಾನಸೌಧದಲ್ಲಿ ಭದ್ರತೆಯನ್ನು ನಿರ್ವಹಿಸಿ ಸ್ಪೀಕರ್‌ಗೆ ವರದಿ ಸಲ್ಲಿಸುವ ವಾಚ್ ಆಂಡ್ ವಾರ್ಡ್ ಸಿಬ್ಬಂದಿ ಶಾಸಕರನ್ನು ತಡೆದರು. ಹಲವು ಶಾಸಕರು ಮುಂದಕ್ಕೆ ಹೋಗಲು ಯತ್ನಿಸಿದಾಗ ಮಾರ್ಷಲ್‌ಗಳು ತಡೆದರು. ಪ್ರತಿಭಟನೆಯ ಭಾಗವಾಗಿ ಅಲ್ಲಿ ನೆಲದಲ್ಲಿ ಮಲಗಿದ ಕೆಲ ಶಾಸಕರನ್ನು ಬಲವಂತವಾಗಿ ಎತ್ತಿ ಸ್ಪೀಕರ್ ಕಚೇರಿ ಬಳಿಯಿಂದ ಹೊರ ಹಾಕಲಾಯಿತು. ಮಾರ್ಷಲ್‌ಗಳು ಪ್ರತಿಭಟನಾಕಾರರನ್ನು ತಡೆದ  ನಂತರ ಸ್ಪೀಕರ್ ತಮ್ಮ ಕಚೇರಿಗೆ ಪ್ರವೇಶಿಸಿದರು.

ವಾಚ್ ಆಂಡ್ ವಾರ್ಡ್ ಸಿಬ್ಬಂದಿ ಬೂಟುಗಾಲಿನಲ್ಲಿ ತುಳಿದಿದ್ದಾರೆ: ವಿಪಕ್ಷ ಆರೋಪ

ಸ್ಪೀಕರ್ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ  ವಾಚ್ ಆಂಡ್ ವಾರ್ಡ್ ತಮ್ಮನ್ನು ಎಳೆದಿದ್ದಾರೆ ಎಂದು ವಿಪಕ್ಷ ಶಾಸಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ವಿ.ಡಿ.ಸತೀಶನ್, ಶಾಸಕರಾದ ಎಚ್.ಸಲಾಂ ಮತ್ತು ಸಚಿಂದೇವ್ ಅವರು ಪ್ರತಿಪಕ್ಷದ ಸದಸ್ಯರಿಗೆ ತುಳಿದಿದ್ದಾರೆ ಎಂದು ಆರೋಪಿಸಿದ್ದಾರೆ.

ವಾಚ್ ಆಂಡ್ ವಾರ್ಡ್  ಬೂಟುಗಾಲಲ್ಲಿ ನಮಗೆ ತುಳಿದಿದ್ದಾರೆ ಎಂದು ಟಿ.ಜೆ.ಸನೀಶಕುಮಾರ್ ಜೋಸೆಫ್  ಹೇಳಿದ್ದಾರೆ. ಕೆಳಗೆ ಬಿದ್ದ ನಂತರವೂ ಥಳಿಸಿದ್ದಾರೆ, ಚಿಕಿತ್ಸೆ ವಿಳಂಬಮಾಡಿದರು.. ಸ್ಪೀಕರ್ ಪಕ್ಷದ ಕಾರ್ಯದರ್ಶಿಯಂತೆ ವರ್ತಿಸಬಾರದು ಎಂದು ಸನೀಶ್ ಕುಮಾರ್ ಹೇಳಿದ್ದಾರೆ. ಜಟಾಪಟಿ ವೇಳೆ ಕುಸಿದು ಬಿದ್ದ ಸನೀಶ್ ಕುಮಾರ್ ಜೋಸೆಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾಚ್ ಆಂಡ್ ವಾರ್ಡ್ ಎಳೆದಾಡಿದಾಗ ಕೈಗೆ ಗಾಯವಾಗಿದೆ ಎಂದು ಕೆ.ಕೆ.ರಮಾ ಹೇಳಿದ್ದಾರೆ. ಐವರು ಮಹಿಳೆಯರು ಸೇರಿದಂತೆ ಒಂಬತ್ತು ವಾಚ್ ಆಂಡ್ ವಾರ್ಡ್ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Wed, 15 March 23