ಲಡಾಖ್ನಲ್ಲಿ ಮತ್ತೆ ಚಟುವಟಿಕೆ ಆರಂಭಿಸಿದ ಚೀನಾ: ಭಾರತಕ್ಕೆ ಅಮೆರಿಕ ಎಚ್ಚರಿಕೆ
ಸ್ವಲ್ಪ ದಿನಗಳಿಂದ ಶಾಂತವಾಗಿದ್ದ ಚೀನಾ ಸೇನೆಯು ಮತ್ತೆ ಲಡಾಖ್ನಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ ಎಂದು ಅಮೆರಿಕ ಜನರಲ್ ಚಾರ್ಲ್ಸ್ ಎ ಫ್ಲಿನ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ: ಸ್ವಲ್ಪ ದಿನಗಳಿಂದ ಶಾಂತವಾಗಿದ್ದ ಚೀನಾ ಸೇನೆಯು ಮತ್ತೆ ಲಡಾಖ್ನಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ ಎಂದು ಅಮೆರಿಕ ಜನರಲ್ ಚಾರ್ಲ್ಸ್ ಎ ಫ್ಲಿನ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಹಿಮಾಲಯದ ಸುತ್ತಲೂ ಚೀನಾ ಸೇನೆಯು ತಮ್ಮ ಮೂಲಭೂತ ಅವಶ್ಯಕತೆಗಳು ಪೂರೈಸಿಕೊಳ್ಳಲು ಹಲವು ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
ಜನರಲ್ ಚಾರ್ಲ್ಸ್ ಫ್ಲಿನ್ ಅಮೆರಿಕ ಸೇನೆಯ ಕಮಾಂಡಿಗ್ ಜನರಲ್ ಆಗಿದ್ದು, ಲಡಾಖ್ನಲ್ಲಿ ಚೀನಾ ಸೇನೆ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಕಣ್ಣಿಡುವಂತೆ ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕವು ಅಕ್ಟೋಬರ್ನಲ್ಲಿ 9 ಸಾವಿರದಿಂದ 10 ಸಾವಿರ ಅಡಿಯಷ್ಟು ಎತ್ತರದಲ್ಲಿ ಯುದ್ಧ ತರಬೇತಿಯನ್ನು ನೀಡಲು ಮುಂದಾಗಿವೆ. ಆದರೆ ಇದುವರೆಗೂ ಯಾವ ಪ್ರದೇಶದಲ್ಲಿ ಯುದ್ಧ ಅಭ್ಯಾಸ ನಡೆಯಲಿದೆ ಎನ್ನುವ ಕುರಿತು ಮಾಹಿತಿ ಇಲ್ಲ. ಭಾರತೀಯ ಸೈನಿಕರಿಗೆ ಅಲಾಸ್ಕಾದಲ್ಲಿ ಮೈಕೊರೆಯುವ ಚಳಿ ನಡುವೆ ಯುದ್ಧ ಅಭ್ಯಾಸ ಮಾಡಿಸಲಾಗುತ್ತದೆ.
ಈ ಹಿಂದೆ ಚೀನಾವು ಪ್ಯಾಂಗಾಂಗ್ ಸರೋವರದ ಬಳಿ ಸೇತುವೆಯನ್ನು ನಿರ್ಮಿಸುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹಾಗೆಯೇ ಚೀನಾವು ತಮ್ಮ ಏರ್ಫೀಲ್ಡ್, ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದು, ಇದರಿಂದ ಭಾರತಕ್ಕೆ ಅಪಾಯ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.
ಚೀನಾದಿಂದ ನಡೆಸಲಾಗುತ್ತಿರುವ ಕಾಮಗಾರಿಗಳ ಮೇಲೆ ಲಕ್ಷ್ಯವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಹಿಂದೆ 1962ರ ಭಾರತ-ಚೀನಾ ನಡುವಿನ ಯುದ್ಧದ ಪರಿಸ್ಥಿತಿಯು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ದೊಡ್ಡ ವಾಹನಗಳ ಸಂಚಾರಕ್ಕೆ ಅಗತ್ಯವಿರುವ ರಸ್ತೆಗಳ ನಿರ್ಮಾಣ ಮಾಡಬೇಕಿದೆ ಎಂದು ಹೇಳಲಾಗಿದೆ.
ಚೀನಾವು ಯಾವುದೋ ಒಂದು ಮಾರ್ಗದಿಂದ ತನ್ನ ಅಸ್ತಿತ್ವವನ್ನು ಇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಚೀನಾದ ಸೈನಿಕರನ್ನು ಮಟ್ಟ ಹಾಕಲು, ಭಾರತ ಹಾಗೂ ಅಮೆರಿಕ ಸೇನೆಯು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಈವರೆಗೆ ಭಾರತ ಮತ್ತು ಚೀನಾ LAC ಉದ್ದಕ್ಕೂ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು 2020 ರ ಆರಂಭದಲ್ಲಿ ಪ್ರಾರಂಭವಾದ ಬಿಕ್ಕಟ್ಟನ್ನು ಕೊನೆಗೊಳಿಸಲು ಹಲವು ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಗಳನ್ನು ನಡೆಸಲಾಗಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ