Cheetahs Return to India: ಪ್ರಧಾನಿ ಮೋದಿಯಿಂದ ಕುನೋ ನ್ಯಾಷನಲ್ ಪಾರ್ಕ್​ನಲ್ಲಿ 8 ಆಫ್ರಿಕನ್ ಚೀತಾಗಳ ಬಿಡುಗಡೆ; ಏನಿದರ ವಿಶೇಷತೆ?

| Updated By: ಸುಷ್ಮಾ ಚಕ್ರೆ

Updated on: Sep 17, 2022 | 11:43 AM

PM Modi Birthday: ಆಫ್ರಿಕನ್ ಚೀತಾಗಳು ವಿಶ್ವದ ಅತಿ ವೇಗದ ಚೀತಾಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದಿರುವ 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಇಂದು ಬಿಡುಗಡೆ ಮಾಡಿದ್ದಾರೆ.

Cheetahs Return to India: ಪ್ರಧಾನಿ ಮೋದಿಯಿಂದ ಕುನೋ ನ್ಯಾಷನಲ್ ಪಾರ್ಕ್​ನಲ್ಲಿ 8 ಆಫ್ರಿಕನ್ ಚೀತಾಗಳ ಬಿಡುಗಡೆ; ಏನಿದರ ವಿಶೇಷತೆ?
Follow us on

ಗ್ವಾಲಿಯರ್: ಬರೋಬ್ಬರಿ 70 ವರ್ಷಗಳ ಬಳಿಕ 8 ಚೀತಾಗಳು (African Cheetah) ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದಿವೆ. 8 ಚೀತಾಗಳನ್ನು ಹೊತ್ತೊಯ್ಯುವ ವಿಶೇಷ ಸರಕು ವಿಮಾನವು ನಮೀಬಿಯಾದ ರಾಜಧಾನಿಯಿಂದ ಸುಮಾರು 10 ಗಂಟೆಗಳ ಪ್ರಯಾಣದ ಸಮಯದಲ್ಲಿ ವಿಶೇಷ ಮರದ ಪೆಟ್ಟಿಗೆಗಳನ್ನು ಬೋಯಿಂಗ್ ವಿಮಾನದಲ್ಲಿಟ್ಟು ಚೀತಾಗಳನ್ನು ಸಾಗಿಸಲಾಗಿದೆ.  ನಮೀಬಿಯಾದಿಂದ 8 ಆಫ್ರಿಕನ್ ಚೀತಾಗಳು ಮಧ್ಯಪ್ರದೇಶಕ್ಕೆ ಬಂದಿಳಿದಿವೆ. ಅಲ್ಲಿಂದ ಕುನೋ ನ್ಯಾಷನಲ್ ಪಾರ್ಕ್​ಗೆ (Kuno National Park) ಚೀತಾಗಳನ್ನು ಸಾಗಿಸಲಾಗಿದೆ. 4ರಿಂದ 6 ವರ್ಷ ವಯಸ್ಸಿನ 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ವಿಶೇಷ ವಿಮಾನದ ಮೂಲಕ ಕರೆತರಲಾಗಿದೆ. ಚೀತಾವನ್ನು ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ವಿಮಾನದ ಮೂಲಕ ಸಾಗಿಸಿರುವುದು ವಿಶ್ವದಲ್ಲೇ ಇದು ಮೊದಲ ಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದಿರುವ 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಇಂದು ಬಿಡುಗಡೆ ಮಾಡಿದ್ದಾರೆ. ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ 8 ಚೀತಾಗಳನ್ನು ಹೊತ್ತ ವಿಶೇಷ ಸರಕು ಸಾಗಣೆ ವಿಮಾನವು ಪ್ರಧಾನಿ ಮೋದಿಯವರ ಜನ್ಮದಿನವಾದ ಇಂದು (ಸೆ. 17) ಬೆಳಿಗ್ಗೆ 7.50ರ ಸುಮಾರಿಗೆ ಮಧ್ಯಪ್ರದೇಶದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

72 ವರ್ಷದ ನರೇಂದ್ರ ಮೋದಿ ಅವರು ನವದೆಹಲಿಯಿಂದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9.20ರ ಸುಮಾರಿಗೆ ಆಗಮಿಸಿದ್ದಾರೆ. ಅಲ್ಲಿಂದ ಸುಮಾರು 165 ಕಿಮೀ ದೂರದಲ್ಲಿರುವ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದು, 8 ಚೀತಾಗಳನ್ನು ಕ್ವಾರಂಟೈನ್ ಆವರಣಗಳಿಗೆ ಬಿಟ್ಟಿದ್ದಾರೆ. ಎರಡು ಗಂಡು ಚೀತಾಗಳನ್ನು ಒಂದು ಕ್ವಾರಂಟೈನ್ ಆವರಣಕ್ಕೆ ಮತ್ತು ಇನ್ನೊಂದು ಹೆಣ್ಣು ಚೀತಾವನ್ನು ಪಕ್ಕದ ಆವರಣಕ್ಕೆ ಬಿಡಲಾಗುತ್ತದೆ. 8 ಚೀತಾಗಳಿಗೆ 6 ಆವರಣಗಳನ್ನು ನಿರ್ಮಿಸಲಾಗಿದೆ.


ಇದನ್ನೂ ಓದಿ: African Cheetahs ಪ್ರಧಾನಿ ಮೋದಿ ಜನ್ಮದಿನದಂದು ಭಾರತಕ್ಕೆ ತರಲಿರುವ ಆಫ್ರಿಕನ್ ಚಿರತೆಗಳ ಫಸ್ಟ್​​ ಲುಕ್​​; ವಿಡಿಯೊ ನೋಡಿ

ಭಾರತವು ಈ ವರ್ಷ 20 ಆಫ್ರಿಕನ್ ಚೀತಾಗಳನ್ನು ಸ್ವೀಕರಿಸಬೇಕಿತ್ತು. ಅವುಗಳಲ್ಲಿ 8 ಚೀತಾಗಳು ನಮೀಬಿಯಾದಿಂದ ಆಗಮಿಸಿದ್ದು, ಇನ್ನೂ 12 ಚೀತಾಗಳು ದಕ್ಷಿಣ ಆಫ್ರಿಕಾದಿಂದ ಆಗಮಿಸಬೇಕಾಗಿದೆ. ಪರಿಸರ ಸಚಿವಾಲಯದ ಅಧಿಕಾರಿಗಳು ದಕ್ಷಿಣ ಆಫ್ರಿಕಾದ ಚೀತಾಗಳನ್ನು ತರಲು ಭಾರತದ ಕಡೆಯಿಂದ ಎಲ್ಲಾ ಪ್ರೋಟೋಕಾಲ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದಿಂದ ಒಪ್ಪಿಗೆಗಾಗಿ ಸರ್ಕಾರ ಇನ್ನೂ ಕಾಯುತ್ತಿದೆ.

ಆಫ್ರಿಕನ್ ಚೀತಾಗಳ ವಿಶೇಷತೆಯೇನು?:

ಆಫ್ರಿಕನ್ ಚೀತಾಗಳು ವಿಶ್ವದ ಅತಿ ವೇಗದ ಚೀತಾಗಳಾಗಿವೆ. ಈ ಚೀತಾಗಳನ್ನು ವಿಮಾನಕ್ಕೆ ಹತ್ತಿಸುವ ಮುನ್ನ ಅವುಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಯಾವುದೇ ಸೋಂಕಿಗೆ ತುತ್ತಾಗದಂತೆ, ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿತ್ತು. ಈ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾದ ಕಾರಣ, ಅವುಗಳಿಗೆ ಕುನೋ ನ್ಯಾಷನಲ್ ಪಾರ್ಕ್​ನಲ್ಲಿ ಮುಕ್ತವಾಗಿ ವಿಹರಿಸಲು ಅವಕಾಶ ನೀಡಲಾಗುತ್ತದೆ.

ಭಾರತವು ಹಿಂದೆ ಏಷ್ಯಾಟಿಕ್ ಚಿರತೆಗಳಿಗೆ ನೆಲೆಯಾಗಿತ್ತು. ಆದರೆ 1952 ರ ವೇಳೆಗೆ ಈ ಪ್ರಭೇದವು ದೇಶೀಯವಾಗಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಯಿತು. ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ವನ್ಯ ಮೃಗಗಳ ಸ್ಥಳಾಂತರ ಯೋಜನೆಯ ಭಾಗವಾಗಿ ಇದೀಗ 8 ಚಿರತೆಗಳನ್ನು ನಮೀಬಿಯಾದಿಂದ ಭಾರತಕ್ಕೆ ತರಲಾಗಿದೆ. ಈ ಚೀತಾಗಳು ವಾಸವಾಗಲಿರುವ ಕುನೋ ರಾಷ್ಟ್ರೀಯ ಉದ್ಯಾನವನವು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿದೆ. ಇದು ಗ್ವಾಲಿಯರ್‌ನಿಂದ ಸುಮಾರು 165 ಕಿಮೀ ದೂರದಲ್ಲಿದೆ. ಹೇರಳವಾದ ಹುಲ್ಲುಗಾವಲುಗಳ ಕಾರಣದಿಂದಾಗಿ ಕುನೋ ಉದ್ಯಾನವನವನ್ನು ಆಫ್ರಿಕನ್ ಚೀತಾಗಳನ್ನು ಇರಿಸಲು ಆಯ್ಕೆ ಮಾಡಲಾಗಿದೆ.

ವನ್ಯಜೀವಿಗಳನ್ನು ಸಂರಕ್ಷಿಸುವ ನರೇಂದ್ರ ಮೋದಿ ಸರ್ಕಾರದ ಪ್ರಯತ್ನಗಳ ಬಗ್ಗೆ ಇಲ್ಲಿದೆ ಮಾಹಿತಿ.

2014ರಲ್ಲಿ ದೇಶದ ಭೌಗೋಳಿಕ ಪ್ರದೇಶದ ಶೇ. 4.90ರಷ್ಟಿದ್ದ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿ ಈಗ ಶೇ. 5.03ಕ್ಕೆ ಏರಿದೆ. ಇದು 1,61,081.62 ಚ.ಕಿ.ಮೀ ವಿಸ್ತೀರ್ಣದೊಂದಿಗೆ ದೇಶದಲ್ಲಿ 740 ರಷ್ಟಿರುವ ಸಂರಕ್ಷಿತ ಪ್ರದೇಶಗಳ ಹೆಚ್ಚಳವನ್ನು ಒಳಗೊಂಡಿದೆ. ಕಳೆದ 4 ವರ್ಷಗಳಲ್ಲಿ ಅರಣ್ಯ ಮತ್ತು ಮರಗಳ ವ್ಯಾಪ್ತಿಯು 16,000 ಚದರ ಕಿ.ಮೀ.ಗಳಷ್ಟು ಹೆಚ್ಚಾಗಿದೆ. ಅರಣ್ಯ ಪ್ರದೇಶವು ನಿರಂತರವಾಗಿ ಹೆಚ್ಚುತ್ತಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ.

ಇದನ್ನೂ ಓದಿ: ನಮೀಬಿಯಾದಿಂದ ಮಧ್ಯಪ್ರದೇಶಕ್ಕೆ ಅಗಮಿಸಿದವು 8 ಚೀತಾಗಳು, ಚಿರತೆ ಮತ್ತು ಚೀತಾ ನಡುವಿನ ವ್ಯತ್ಯಾಸ ಗೊತ್ತಾ?

ಭಾರತದ 18 ರಾಜ್ಯಗಳಲ್ಲಿ ಸುಮಾರು 75,000 ಚದರ ಕಿ.ಮೀ ಪ್ರದೇಶವನ್ನು ಆವರಿಸಿರುವ 52 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಭಾರತವು 2018ರಲ್ಲಿ ಹುಲಿ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು 2022ರಲ್ಲಿ 4 ವರ್ಷ ಮುಂಚಿತವಾಗಿಯೇ ಸಾಧಿಸಿದೆ. ಭಾರತದಲ್ಲಿ ಹುಲಿಗಳ ಸಂಖ್ಯೆಯು 2014ರಲ್ಲಿ 2,226 ಇದ್ದುದು 2018ರಲ್ಲಿ 2,967ಕ್ಕೆ ಏರಿದೆ. ಹುಲಿ ಸಂರಕ್ಷಣೆಗೆ ಬಜೆಟ್‌ನಲ್ಲಿ ಮೀಡಲಿಟ್ಟಿರುವ ಹಣ 2014ರಲ್ಲಿ 185 ಕೋಟಿ ರೂ.ಗಳಿಂದ 2022ರಲ್ಲಿ 300 ಕೋಟಿ ರೂ.ಗೆ ಏರಿಕೆಯಾಗಿದೆ.

ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು 2015ರಲ್ಲಿ 523 ಸಿಂಹಗಳಿಂದ ಶೇ. 28.87ರಷ್ಟು (ಇದುವರೆಗಿನ ಅತ್ಯಧಿಕ ಬೆಳವಣಿಗೆಯ ದರಗಳಲ್ಲಿ ಒಂದಾಗಿದೆ) ಹೆಚ್ಚಳವಾಗಿದೆ. ಭಾರತವು ಈಗ (2020) 12,852 ಚಿರತೆಗಳನ್ನು ಹೊಂದಿದೆ. ಭಾರತದ ಚಿರತೆಗಳ ಸಂಖ್ಯೆಯಲ್ಲಿ ಶೇ. 60ರಷ್ಟು ಹೆಚ್ಚಳ ದಾಖಲಾಗಿದೆ.

ಏನಿದು ಚೀತಾ ಯೋಜನೆ?:
2008-09ರಲ್ಲಿ ‘ಪ್ರಾಜೆಕ್ಟ್ ಚೀತಾ’ದ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಯಿತು. ಆಗಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಈ ಯೋಜನೆಯನ್ನು ಅನುಮೋದಿಸಿತ್ತು. ಆದರೆ, 2013ರಲ್ಲಿ ಸುಪ್ರೀಂ ಕೋರ್ಟ್ ಈ ಯೋಜನೆಗೆ ತಡೆ ನೀಡಿತ್ತು. ಹಾಗೇ, 2020ರಲ್ಲಿ ಅದನ್ನು ಅನುಮತಿಸುವ ಮೂಲಕ ಚೀತಾಗಳು ಭಾರತಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Sat, 17 September 22