ಪ್ರಧಾನಿ ಮೋದಿ ಫೋಟೋವನ್ನೂ ಸಹಿಸಿಕೊಳ್ಳಲಾಗದಷ್ಟು ಅಸಹಿಷ್ಣುತೆಯನ್ನು ನಾಗರಿಕರು ತೋರಬಾರದು; ಕೇರಳ ಹೈಕೋರ್ಟ್
ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಮತ್ತು ಸರ್ಟಿಫಿಕೇಟ್ನಿಂದ ಮೋದಿಯವರ ಫೋಟೋ ತೆಗೆಯಬೇಕು ಎಂದು ಮನವಿ ಮಾಡಿ ಮತ್ತೊಮ್ಮೆ ಪೀಟರ್ ಅರ್ಜಿ ಸಲ್ಲಿಸಿದ್ದರು.
ತಿರುವನಂತಪುರಂ: ಕೊವಿಡ್ 19 ಸರ್ಟಿಫಿಕೇಟ್ನಿಂದ ಪ್ರಧಾನಿ ನರೇಂದ್ರ ಮೋದಿ ಫೋಟೋ ತೆಗೆಯಬೇಕು ಎಂದು ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದ ಕೇರಳ ಹೈಕೋರ್ಟ್( Kerala High Court), ಕೊರೊನಾ ಲಸಿಕೆ ಪ್ರಮಾಣಪತ್ರ(COVID-19 Vaccination Certificates)ದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನೂ ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಾಗರಿಕರು ಅಸಹಿಷ್ಣುತೆ ತೋರಿಸಬಾರದು ಎಂದು ಹೇಳಿದೆ. 2021ರ ಡಿಸೆಂಬರ್ನಲ್ಲಿ ಪೀಟರ್ ಮೈಲಿಪರಂಪಿ ಎಂಬುವರೊಬ್ಬರು, ಪ್ರಧಾನಿ ಮೋದಿ ಫೋಟೋವನ್ನು ಸರ್ಟಿಫಿಕೇಟ್ನಿಂದ ತೆಗೆಯಲು ಆದೇಶಿಸಬೇಕು. ಕೊವಿಡ್ 19 ಸರ್ಟಿಫಿಕೇಟ್ ಮೇಲೆ ಪ್ರಧಾನಿಯವರ ಫೋಟೋ ಹಾಕಿದ್ದರ ಹಿಂದೆ ದುರುದ್ದೇಶಪೂರಿತ ಮತ್ತು ಕ್ಷುಲ್ಲಕವೆನ್ನಿಸುವ ಕಾರಣಗಳು ಇವೆ ಎಂದು ಹೇಳಿದ್ದರು. ಆಗ ಹೈಕೋರ್ಟ್ನ ಏಕಸದಸ್ಯ ಪೀಠ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಅರ್ಜಿದಾರರು ರಾಜಕೀಯ ಕಾರಣಕ್ಕೆ ಇಂಥ ಮನವಿ ಸಲ್ಲಿಸುತ್ತಿದ್ದಾರೆ ಎನ್ನಿಸುತ್ತಿದೆ ಎಂದು ಹೇಳಿದ್ದ ಜಡ್ಜ್, ಅರ್ಜಿದಾರ ಪೀಟರ್ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದರು.
ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಮತ್ತು ಸರ್ಟಿಫಿಕೇಟ್ನಿಂದ ಮೋದಿಯವರ ಫೋಟೋ ತೆಗೆಯಬೇಕು ಎಂದು ಮನವಿ ಮಾಡಿ ಮತ್ತೊಮ್ಮೆ ಪೀಟರ್ ಅರ್ಜಿ ಸಲ್ಲಿಸಿದ್ದಾರೆ. ಅದನ್ನೀಗ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಲೆ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ. ಭಾರತದ ಪ್ರಧಾನಮಂತ್ರಿ ಅದಾಗಲೇ ಈ ದೇಶದ ಪ್ರಧಾನಿ ಕಾರ್ಯಾಲಯದಲ್ಲಿ ಕುಳಿತವರು. ಅವರಿಗೆ ಅದಕ್ಕಿಂತಲೂ ದೊಡ್ಡ ಆಕರ್ಷಣೆ ಇನ್ನೇನು ಬೇಕು? ಜಾಹಿರಾತು ಕೊಟ್ಟು ನಾಗರಿಕರ ಗಮನ ಸೆಳೆಯುವ ಅಗತ್ಯವಾದರೂ ಏನಿರುತ್ತದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಯತ್ನ ಎಂಬ ಮಾತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದೆ.
ಈ ಲಸಿಕೆ ಪ್ರಮಾಣ ಪತ್ರದಲ್ಲಿನ ಶಾಸನಗಳು, ಛಾಯಾಚಿತ್ರಗಳನ್ನು ನಾಗರಿಕರನ್ನು ಲಸಿಕೆಯತ್ತ ಆಕರ್ಷಿಸುವ ಉದ್ದೇಶದಿಂದ ಮಾಡಲಾಗಿದೆ ಹೊರತು ಚುನಾವಣಾ ಕಾರಣಕ್ಕಲ್ಲ. ಇವು ಯಾವ ಕಾರಣಕ್ಕೂ ನಾಗರಿಕರ ಮೂಲಭೂತ ಹಕ್ಕುಗಳಿಗೆ ಅಡ್ಡಿಯಾಗುವುದಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ. ಕೊವಿಡ್ 19 ಲಸಿಕೆ ಪಡೆದ ಬಳಿಕವೂ, ಕೊರೊನಾ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಪಾಲನೆ ಮಾಡುವಂತೆ ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿದ್ದರೂ ಕೂಡ, ಪ್ರತಿಪಕ್ಷಗಳು ಇದನ್ನು ತೀವ್ರವಾಗಿ ವಿರೋಧಿಸುತ್ತಿವೆ. ಇದು ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್, ಪ್ರಚಾರದ ಕ್ರಮ ಎಂದು ಹೇಳಿವೆ.
ಇದನ್ನೂ ಓದಿ: ದಂಡ ಕಟ್ಟುವಂತೆ ಹೇಳಿದಕ್ಕೆ ASI ಕಾಲರ್ ಹಿಡಿದು ಹಲ್ಲೆಗೆ ಯತ್ನಿಸಿದ ವ್ಯಕ್ತಿ; ಠಾಣೆಯಲ್ಲಿ ಕೇಸ್ ದಾಖಲು
Published On - 8:35 am, Sun, 6 February 22