
ನವದೆಹಲಿ, ಡಿಸೆಂಬರ್ 27: ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಇತ್ಯಾದಿ ನಾಗರಿಕ ಪ್ರಶಸ್ತಿಗಳು (civilian awards) ಅಧಿಕೃತ ಪದವಿಗಳಲ್ಲ (titles). ಅವುಗಳನ್ನು ಪ್ರಶಸ್ತಿವಿಜೇತರ ಹೆಸರಿನ ಹಿಂದೆ ಅಥವಾ ಮುಂದೆ ಜೋಡಿಯಾಗಿ ಬಳಸಲು ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಪದ್ಮಶ್ರೀ ಡಾ. ಶರದ್ ಎಂ ಹರ್ಡೀಕರ್ ಅವರನ್ನೊಳಗೊಂಡ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಾಧೀಶ ಸೋಮಶೇಖರ್ ಸುಂದರೇಶನ್ ಈ ತೀರ್ಪು ನೀಡಿದ್ದಾರೆ.
ಹೈಕೋರ್ಟ್ನಿಂದ ಬಂದ ಈ ತೀರ್ಪು ಹೊಸದಲ್ಲ. ಈ ಹಿಂದೆ ಸಾಂವಿಧಾನಿಕ ಪೀಠವೊಂದು ನೀಡಿದ ತೀರ್ಪನ್ನು ಪುನರುಚ್ಚರಿಸಿದೆ. 1995ರಲ್ಲಿ ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠವು ನಾಗರಿಕ ಪ್ರಶಸ್ತಿಗಳನ್ನು ವ್ಯಕ್ತಿಯ ಹೆಸರಿನೊಂದಿಗೆ ಬಳಸಬಾರದು ಎಂದು ತೀರ್ಪು ಕೊಟ್ಟಿತ್ತು. ಬಾಂಬೆ ಹೈಕೋರ್ಟ್ನ ಏಕಸದಸ್ಯ ಪೀಠವು ಆ ಸಾಂವಿಧಾನಿಕ ಪೀಠದ ತೀರ್ಪನ್ನು ಉಲ್ಲೇಖಿಸುತ್ತಾ, ನಾಗರಿಕ ಪ್ರಶಸ್ತಿಗಳನ್ನು ವ್ಯಕ್ತಿಯ ಹೆಸರಿನೊಂದಿಗೆ ಬಳಸುವುದು ಕಾನೂನಿನ ಮಾನ್ಯತೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಸೊಮಾಲಿಲ್ಯಾಂಡ್ಗೆ ಮಾನ್ಯತೆ ಕೊಟ್ಟ ವಿಶ್ವದ ಏಕೈಕ ದೇಶ ಇಸ್ರೇಲ್; ಯಾವುದಿದು ಆಫ್ರಿಕನ್ ನಾಡು?
ಡಾ. ತ್ರಂಬಕ್ ವಿ ದಾಪಕೇಕರ್ ವರ್ಸಸ್ ಪದ್ಮಶ್ರೀ ಡಾ. ಶರದ್ ಎಂ ಹರ್ಡೀಕರ್ ಪ್ರಕರಣದ ವಿಚಾರಣೆ ವೇಳೆ ನ್ಯಾ| ಸೋಮಶೇಖರ್ ಸುಂದರೇಶನ್ ಅವರು ಮೇಲಿನ ವಿಚಾರ ಪ್ರಸ್ತಾಪಿಸಿದರು. ಶರದ್ ಹರ್ಡೀಕರ್ ಅವರ ಹೆಸರಿನ ಜೊತೆ ಪದ್ಮಶ್ರೀ ಅನ್ನು ಸೇರಿಸಿರುವುದಕ್ಕೆ ನ್ಯಾಯಾಧೀಶರು ಆಕ್ಷೇಪಿಸಿದರು.
ನಾಗರಿಕ ಪ್ರಶಸ್ತಿಗಳನ್ನು ಗೌರವ ಪದವಿಗಳಂತೆ ಬಳಸಬಾರದು. ಹಾಗೆ ಬಳಸಲು ಕಾನೂನಿನಲ್ಲಿ ಅನುಮತಿ ಇಲ್ಲ. ಕೋರ್ಟ್ ವಿಚಾರಗಳಲ್ಲಿ ಇದನ್ನು ಬಳಸಬಾರದು ಎಂದು ಜಡ್ಜ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ವಿರೋಧಿ ಶಕ್ತಿಗಳೊಂದಿಗೆ ರಾಹುಲ್ ಗಾಂಧಿ? ಜರ್ಮನಿಗೆ ಹೋಗಿದ್ದು ಯಾಕೆ? ಬಿಜೆಪಿ ಟೀಕೆ
ನಟ ಡಾ. ರಾಜಕುಮಾರ್ ಅವರನ್ನು ಪದ್ಮಭೂಷಣ ಡಾ. ರಾಜಕುಮಾರ್ ಎಂದು ಕರೆಯುವುದು ರೂಢಿ. ಆದರೆ, ಅಧಿಕೃತ ದಾಖಲೆಗಳಲ್ಲಿ ಅವರ ಹೆಸರರಿನ ಜೊತೆ ಪದ್ಮಭೂಷಣ, ನಟ ಇತ್ಯಾದಿ ವಿಶೇಷಣಗಳು ಇರುವಂತಿಲ್ಲ. ಇಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಿಗುವ ಡಾಕ್ಟರೇಟ್ ಪದವಿಗಳನ್ನು ಹೆಸರಿನ ಜೊತೆ ಬಳಸಲು ಅಡ್ಡಿ ಇಲ್ಲ. ಆದರೆ, ಪ್ರಶಸ್ತಿಗಳ ಹೆಸರು ಬಳಸುವಂತಿಲ್ಲ. ಹಾಗೆಯೇ, ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಹೀಗೆ ಬಳಸಲು ಅಡ್ಡಿ ಇರುವುದಿಲ್ಲ. ಅಧಿಕೃತ ದಾಖಲೆಗಳಲ್ಲಿ ಮಾತ್ರ ಇದನ್ನು ಬಳಸಬಾರದು ಎಂಬುದು ಕೋರ್ಟ್ನ ತೀರ್ಪಿನ ಇಂಗಿತ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ