ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ
Digvijaya Singh shares Narendra Modi's old photo, praises organizational power of RSS: ಆರೆಸ್ಸೆಸ್ ಸಂಘಟನೆಯ ಶಕ್ತಿಯನ್ನು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೊಗಳಿದ್ದಾರೆ. ತೊಂಬತ್ತರ ದಶಕದಲ್ಲಿ ಎಲ್.ಕೆ. ಆಡ್ವಾಣಿ ಕಾಲ ಕೆಳಗೆ ಮುಂಭಾಗದಲ್ಲಿ ನರೇಂದ್ರ ಮೋದಿ ಕುಳಿತು ಭಾಷಣ ಕೇಳುತ್ತಿರುವ ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದಾರೆ. ಸಾಮಾನ್ಯ ಕಾರ್ಯಕರ್ತರಾದವರು ಸಿಎಂ ಮತ್ತು ಪಿಎಂ ಆಗುತ್ತಾರೆ. ಅದು ಸಂಘಟನೆಯ ಶಕ್ತಿ ಎಂದು ದಿಗ್ವಿಜಯ ಸಿಂಗ್ ಹೊಗಳಿದ್ದಾರೆ.

ನವದೆಹಲಿ, ಡಿಸೆಂಬರ್ 27: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ರಾಜ್ಯಸಭಾ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ ಸಿಂಗ್ (Digvijaya Singh) ಬಹಳ ಅಪರೂಪಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಹೊಗಳುವ ಕೆಲಸ ಮಾಡಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೀಗಳೆಯುವ ದಿಗ್ವಿಜಯ ಸಿಂಗ್, ಈಗ ವರಸೆ ಬದಲಿಸಿದ್ದು ಬಿಜೆಪಿಗೂ ಅಚ್ಚರಿಯ ಶಾಕ್ ಕೊಟ್ಟಿದೆ. ಸ್ವಲ್ಪವೂ ತಡ ಮಾಡದ ಬಿಜೆಪಿ ಈಗ ದಿಗ್ವಿಜಯರ ಅಸ್ತ್ರ ಬಳಸಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಕಿಚಅಯಿಸುವ ಕೆಲಸ ಮಾಡಿದೆ.
ದಿಗ್ವಿಜಯ ಸಿಂಗ್ ಹೇಳಿದ್ದೇನು?
ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗುವುದಕ್ಕೂ ಮುನ್ನ ಸಾರ್ವಜನಿಕ ಸಮಾವೇಶವೊಂದರಲ್ಲಿ ಎಲ್ಕೆ ಆಡ್ವಾಣಿ ಮತ್ತಿತರ ಹಿರಿಯ ಮುಖಂಡರ ಮುಂದೆ ನೆಲದ ಮೇಲೆ ಕುಳಿತುಕೊಂಡಿರುವ ಒಂದು ಬ್ಲ್ಯಾಕ್ ಅಂಡ್ ವೈಟ್ ಚಿತ್ರವನ್ನು ದಿಗ್ವಿಜಯ ಸಿಂಗ್ ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಆ ಪೋಸ್ಟ್ನಲ್ಲಿ ಬರೆದಿರುವ ವಿಚಾರ ಈಗ ವೈರಲ್ ಆಗಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳಲ್ಲಿ ತಳಮಟ್ಟದಲ್ಲಿರುವ ಕಾರ್ಯಕರ್ತರು ಹೇಗೆ ಮೇಲೆ ಬೆಳೆಯುತ್ತಾ ಹೋಗಿ ಮುಖ್ಯಮಂತ್ರಿ, ಮತ್ತು ಪ್ರಧಾನಿ ಮಂತ್ರಿಯೂ ಆಗಬಹುದು ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಇದು ಸಂಘಟನೆಯ ಶಕ್ತಿ ಎಂದು ದಿಗ್ವಿಜಯ ಸಿಂಗ್ ಆ ಫೋಟೋಗೆ ವಿವರಣೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ
ಕೋರಾ ಪ್ಲಾಟ್ಫಾರ್ಮ್ನಲ್ಲಿ ಅವರಿಗೆ ಸಿಕ್ಕ ಆ ಚಿತ್ರವನ್ನು ಅವರು ಹಂಚಿಕೊಂಡು, ತಮ್ಮ ಅನಿಸಿಕೆ ಬರೆಯಲು ಕಾರಣವೂ ಇದೆ. ಕಾಂಗ್ರೆಸ್ ಪಕ್ಷವು ತೀರಾ ಕೇಂದ್ರೀಕೃತವಾಗಿದೆ. ತಳಮಟ್ಟದಲ್ಲಿ ಬಲವರ್ಧನೆ ಆಗಬೇಕು ಎಂದು ದಿಗ್ವಿಜಯ ಸಿಂಗ್ ಪದೇ ಪದೇ ಹೇಳುತ್ತಾ ಬರುತ್ತಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಅವರು ಈ ಸಲಹೆ ನೀಡಿದ್ದರು. ತಮ್ಮ ಅನಿಸಿಕೆಗೆ ಪೂರಕವಾಗಿ ಅವರು ನರೇಂದ್ರ ಮೋದಿ ಅವರ ಹಳೆಯ ಫೋಟೋ ಹಂಚಿಕೊಂಡಿದ್ದಿರಬಹುದು.
ಬಿಜೆಪಿಗರ ಮಿಂಚಿನ ಪ್ರತಿಕ್ರಿಯೆ…
ದಿಗ್ವಿಜಯ ಸಿಂಗ್ ಅವರ ಈ ಮೋದಿ ಆಡ್ವಾಣಿ ಪೋಸ್ಟ್ ಅನ್ನು ಇಟ್ಟುಕೊಂಡು ಬಿಜೆಪಿಗರು ಕಾಂಗ್ರೆಸ್ಸನ್ನು ಕಿಚಾಯಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬಗ್ಗೆ ದಿಗ್ವಿಜಯ್ ಸಿಂಗ್ ಅವರ ಪೋಸ್ಟ್ ಕನ್ನಡಿ ಹಿಡಿದಿದೆ ಎಂದು ಹಲವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ
‘ದಿಗ್ವಿಜಯ್ ಸಿಂಗ್ ಅವರು ಬಹಿರಂಗವಾಗಿ ರಾಹುಲ್ ಗಾಂಧಿ ಎದುರು ಭಿನ್ನಮತ ತೋರಿದ್ದಾರೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಸಂಘಟನೆ ಕುಸಿದಿದೆ. ಈಗ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ತೋರುತ್ತಿದೆ’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ, ತಮ್ಮ ಪೋಸ್ಟ್ ಅನ್ನು ಬಿಜೆಪಿಗರು ಬಳಸಿಕೊಳ್ಳುತ್ತಿರುವಂತೆಯೇ ದಿಗ್ವಿಜಯ ಸಿಂಗ್ ಸ್ಪಷ್ಟೀಕರಣ ಕೂಡ ಕೊಟ್ಟಿದ್ದಾರೆ. ತಾನು ಸಂಘಟನೆಯನ್ನು ಮಾತ್ರವೇ ಹೊಗಳಿರುವುದು. ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿಯನ್ನು ಯಾವಾಗಲೂ ವಿರೋಧಿಸಿದ್ದೇನೆ. ಆರೆಸ್ಸೆ ಮತ್ತು ಮೋದಿ ಅವರ ನೀತಿಗಳಿಗೆ ನನ್ನದು ವಿರೋಧ ಇದ್ದೇ ಇರುತ್ತದೆ ಎಂದೂ ಹಿರಿಯ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




