ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ
Viksit Bharat 2025: India's AI, Chip & Critical Mineral Revolution Towards Self-Reliance: 2025 ಭಾರತದ ವೈಜ್ಞಾನಿಕ-ತಂತ್ರಜ್ಞಾನ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಪ್ರಮುಖ ಖನಿಜಗಳು ಹಾಗೂ ಸಂಶೋಧನೆ-ಅಭಿವೃದ್ಧಿ ಕ್ಷೇತ್ರಗಳಲ್ಲಿ ದೇಶವು ಸ್ವಾವಲಂಬನೆ ಸಾಧಿಸುತ್ತಿದೆ. ಜಾಗತಿಕವಾಗಿ ಮುಂಚೂಣಿಗೆ ಬರುತ್ತಿರುವ ಭಾರತ, AI ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೇರಿದೆ. 'ಇಂಡಿಯಾ ಎಐ ಮಿಷನ್' ಮತ್ತು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಯಿಂದ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ. 'ವಿಕಸಿತ ಭಾರತ 2047' ಗುರಿಯತ್ತ ಹೆಜ್ಜೆ ಹಾಕುತ್ತಿದೆ.

2025ರ ವರ್ಷವು ಭಾರತದ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪ್ರಯಾಣದಲ್ಲಿ ಪ್ರಮುಖ ಟರ್ನಿಂಗ್ ಪಾಯಿಂಟ್ ಎನಿಸಿದೆ. ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ದೇಶ ಮುನ್ನಡೆದಿದೆ. ಜಾಗತಿಕ ಮಾನ ಸನ್ಮಾನ ಗಿಟ್ಟಿಸಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ಗಳಿಂದ ಹಿಡಿದು ಬಾಹ್ಯಾಕಾಶ ಅನ್ವೇಷಣೆ, ಪರಮಾಣ ಶಕ್ತಿ, ಪ್ರಮುಖ ಖನಿಜಗಳವರೆಗೆ ಭಾರತ ಜಾಗತಿಕ ತಂತ್ರಜ್ಞಾನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿರುವುದು ಮಾತ್ರ, ಹೊಸ ತಂತ್ರಜ್ಞಾನ ರೂಪಿಸುವ ಸಾಮರ್ಥ್ಯವನ್ನೂ ತೋರಿದೆ. ಭಾರತದ ಸ್ವತಂತ್ರ ಇತಿಹಾಸದಲ್ಲಿ ಮೊದಲ ಬಾರಿಗೆ ತಂತ್ರಜ್ಞಾನ ಸ್ವಾವಂಬನೆ (Technological self-determination) ಎಂಬುದು ಕನಸಾಗಿ ಉಳಿಯದೇ ನನಸಾಗುತ್ತಿದೆ. 2047ರ ವಿಕಸಿತ ಭಾರತದ (Viksit Bharat) ಗುರಿಯೊಂದಿಗೆ ಮಿಳಿತಗೊಂಡಿದೆ.
ಎಐ ಕ್ರಾಂತಿ: ಡಿಜಿಟಲ್ ಬೆನ್ನೆಲುಬಿಗೆ ಆಧಾರ
ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಸರ್ಕಾರವು 10,000 ಕೋಟಿ ರೂಗೂ ಅಧಿಕ ಹೂಡಿಕೆಗೆ ಬದ್ಧವಾಗಿದೆ. ಮಾನವ ಕೇಂದ್ರಿತ ಅಥವಾ ಮಾನವಮುಖಿ ಕೃತಕ ಬುದ್ಧಿಮತ್ತೆಯಲ್ಲಿ ಭಾರತವನ್ನು ಮುಂಚೂಣಿಗೆ ತರುವುದು ಈ ಮಿಷನ್ನ ಗುರಿ. ಸಾಮಾಜಿಕ ನ್ಯಾಯಕ್ಕೆ, ಅದರಲ್ಲೂ ನಗರ ಮತ್ತು ಗ್ರಾಮೀಣ ಅಂತರ ತಗ್ಗಿಸಲು ಆರ್ಟಿಫಿಶಿಯಲ್ ಇಂಟೆಜೆನ್ಸ್ ಅನ್ನು ಒಂದು ಪ್ರಮುಖ ಸಾಧನವಾಗಿ ಮಾಡಬೇಕು ಎಂಬುದು ಈ ಮಿಷನ್ನ ಮಹದೋದ್ದೇಶ. 2025-26ರ ಮೊದಲ ಕ್ವಾರ್ಟರ್ನಲ್ಲಿ (2025ರ ಏಪ್ರಿಲ್ನಿಂದ ಜೂನ್) ಭಾರತದ ರಾಷ್ಟ್ರೀಯ ಎಐ ಇನ್ಫ್ರಾಸ್ಟ್ರಕ್ಚರ್ನಲ್ಲಿ ದೊಡ್ಡ ವಿಸ್ತರಣೆಯನ್ನು ಘೋಷಿಸಲಾಯಿತು. ಈ ಸಂದರ್ಭದಲ್ಲಿ 15,916 ಹೊಸ ಜಿಪಿಯುಗಳನ್ನು ಪಡೆಯಲಾಯಿತು. ಇದರೊಂದಿಗೆ ಭಾರತದ ಒಟ್ಟೂ ಕಂಪ್ಯೂಟ್ ಕೆಪಾಸಿಟಿ 38,000 ಜಿಪಿಯುಗಿಂತ ಹೆಚ್ಚಾಗಿದೆ. ಈ ಜಿಪಿಯುಗಳು ಗಂಟೆಗೆ ಕೇವಲ 67 ರೂಗಳ ದರಕ್ಕೆ ಲಭ್ಯ ಇವೆ. ಮಾರುಕಟ್ಟೆಯಲ್ಲಿ ಈ ಜಿಪಿಯುಗಳ ಬಳಕೆಗೆ ಇರುವ ಸರಾಸರಿ ಬೆಲೆ ಗಂಟೆಗೆ 115 ರೂ. ಆದರೆ, ಸರ್ಕಾರವು ಸಬ್ಸಿಡಿ ಮೂಲಕ ಕಡಿಮೆ ದರಕ್ಕೆ ಈ ಜಿಪಿಯುಗಳನ್ನು ಉದ್ಯಮಗಳಿಗೆ ಕೊಡುತ್ತಿದೆ. ಉನ್ನತ ಮಟ್ಟದ ಕಂಪ್ಯೂಟ್ ಇನ್ಫ್ರಾಸ್ಟ್ರಕ್ಚರ್ ಎಲ್ಲರಿಗೂ ಲಭ್ಯ ಇರಲಿ ಎಂಬುದು ಉದ್ದೇಶ.
ಇತ್ತೀಚೆಗೆ, ಅಮೆರಿಕ ಸ್ಟಾನ್ಫೋರ್ಡ್ ಯೂನಿವರ್ಸಿಟಿಯ 2025ರ ಗ್ಲೋಬಲ್ ಎಐ ವೈಬ್ರನ್ಸಿ ಟೂಲ್ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಜಿಗಿದಿದೆ. ಗ್ಲೋಬಲ್ ಎಐ ಸ್ಪರ್ಧಾತ್ಮಕತೆಯಲ್ಲಿ ಅಮೆರಿಕ ಮತ್ತು ಚೀನಾ ನಂತರ ಭಾರತ ಸ್ಥಾನ ಪಡೆದಿದೆ. ಸೌತ್ ಕೊರಿಯಾ, ಬ್ರಿಟನ್, ಸಿಂಗಾಪುರ್, ಜಪಾನ್, ಜರ್ಮನಿ, ಫ್ರಾನ್ಸ್, ಕೆನಡಾ ಇತ್ಯಾದಿ ಅನೇಕ ಮುಂದುವರಿದ ದೇಶಗಳಿಗಿಂತ ಭಾರತ ಎಐ ಸ್ಪರ್ಧಾತ್ಮಕತೆಯಲ್ಲಿ ಮುಂಚೂಣಿಯಲ್ಲಿದೆ ಎಂದಾಯಿತು. ಗ್ಲೋಬಲ್ ಎಐ ಸ್ಪರ್ಎಯಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಾದರೆ ಟೆಕ್ ಇಕೋಸಿಸ್ಟಂ ಬೇಗ ಬೆಳೆಸಲು ಮತ್ತು ಉತ್ತಮ ಗುಣಮಟ್ಟದ ಪ್ರತಿಭಾ ಸಮೂಹ ಬೆಳೆಸಲು ಭಾರತ ಸರಿಯಾದ ಹಾದಿಯಲ್ಲಿದೆ.
ಸೆಮಿಕಂಡಕ್ಟರ್ನಲ್ಲಿ ಭಾರತದ ಸ್ವಾವಲಂಬನೆಯ ಹೊಸ ಪರ್ವ
ಭಾರತದ ಇತಿಹಾಸದಲ್ಲಿ ಸರ್ಕಾರವೊಂದು ಸೆಮಿಕಂಡಕ್ಟರ್ ತಯಾರಿಕೆಯನ್ನು ದೇಶದ ತಂತ್ರಜ್ಞಾನ ಮಿಷನ್ನ ಮುಖ್ಯಭಾಗವಾಗಿ ಇಟ್ಟಿದೆ. 2025ರ ಮೇ ತಿಂಗಳಲ್ಲಿ ನೋಯ್ಡಾ ಮತ್ತು ಬೆಂಗಳೂರಿನಲ್ಲಿ ಎರಡು ಸುಧಾರಿತ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಿತು. ಈ ಎರಡು ಘಟಕಗಳಲ್ಲಿ 3-ಎನ್ಎಂ ಚಿಪ್ ಡಿಸೈನ್ ಮಾಡಲಾಗುತ್ತದೆ. ಈ ಎರಡು ಘಟಕಗಳು ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯವನ್ನಷ್ಟೇ ಅಲ್ಲ, ಬಹಳ ಮುಖ್ಯವಾದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತನ್ನದೇ ಭವಿಷ್ಯ ರೂಪಿಸುವ ಹಾದಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತವೆ.
ಈ 3ಎನ್ಎಂ ಚಿಪ್ಗಳು ಸಾಮಾನ್ಯವಲ್ಲ. ಸ್ಮಾರ್ಟ್ಫೋನ್ಗಳಿಂದ ಹಿಡಿದು ಲ್ಯಾಪ್ಟಾಪ್, ಉನ್ನತ ಸಾಮರ್ಥ್ಯದ ಕಂಪ್ಯೂಟರ್ಗಳವರೆಗೆ ವಿಶ್ವದ ಅತ್ಯಂತ ಸುಧಾರಿತ ತಂತ್ರಜ್ಞಾನಗಳಿಗೆ ಶಕ್ತಿ ಕೊಡುವ ಮುಖ್ಯ ಭಾಗವಾಗಿವೆ. ಐಐಟಿ ಮದ್ರಾಸ್ ತನ್ನ ಶಕ್ತಿ ಯೋಜನೆಮೂಲಕ 7 ಎನ್ಎಂ ಪ್ರೋಸಸರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸೆಪ್ಟೆಂಬರ್ನಲ್ಲಿ ನಡೆದ ಸೆಮಿಕಾನ್ ಇಂಡಿಯಾ 2025 ಕಾನ್ಫರೆನ್ಸ್ ವೇಳೆ ಪ್ರಧಾನಿ ಮೋದಿ ಅವರಿಗೆ ವಿಕ್ರಮ್-32 ಬಿಟ್ ಚಿಪ್ ಅನ್ನು ಉಡುಗೆಯಾಗಿ ಕೊಡಲಾಯಿತು. ಇದು ಪೂರ್ಣ ದೇಶೀಯವಾಗಿ ನಿರ್ಮಿಸಿದ ಚಿಪ್.
ಈ ಅಂಕಿ ಅಂಶದ ಹಿಂದೆ ಜಾಗತಿಕ ರಾಜಕೀಯ ವಿಚಾರವೂ ಮಿಳಿತವಾಗಿದೆ. ವೈಚಾರಿಕ ತುಮುಲಗಳ ನಡುವೆ ಜಾಗತಿಕ ಸರಬರಾಜು ಸರಪಳಿಯು ಹರಿದು ಹಂಚಿಹೋಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯವು ಆರ್ಥಿಕ ಕ್ಷಮತೆಯನ್ನು ಬಿಂಬಿಸುತ್ತದೆ. 2025ರ ಒಂದೇ ವರ್ಷದಲ್ಲಿ ಭಾರತವು ಐದಕ್ಕೂ ಅಧಿಕ ಸೆಮಿಕಂಡಕ್ಟರ್ ಯೂನಿಟ್ಗಳಿಗೆ ಅನುಮೋದನೆ ಕೊಟ್ಟಿತು. ಇದರೊಂದಿಗೆ ಆರು ರಾಜ್ಯಗಳಲ್ಲಿ ಒಟ್ಟು 1.60 ಲಕ್ಷ ಕೋಟಿ ರೂ ಹೂಡಿಕೆಯೊಂದಿಗೆ ಆರಂಭವಾಗಿರುವ ಮತ್ತು ಆರಂಭವಾಗಲಿರುವ ಸೆಮಿಕಂಡಕ್ಟರ್ ಘಟಕಗಳ ಸಂಖ್ಯೆ 10ಕ್ಕೆ ಏರಿದೆ. 2030ರೊಳಗೆ ಜಾಗತಿಕ ಸೆಮಿಕಂಡಕ್ಟರ್ ಅನುಭೋಗದಲ್ಲಿ ಶೇ. 10 ಪಾಲನ್ನು ಪಡೆಯುವ ದೊಡ್ಡ ಗುರಿ ಭಾರತದ್ದಾಗಿದೆ. ಇದು ಸಾಧ್ಯವಾದರೆ ಭಾರತವು ಸೆಮಿಕಂಡಕ್ಟರ್ ಡಿಸೈನ್, ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್ನಲ್ಲಿ ಪ್ರಮುಖ ಕೇಂದ್ರವಾಗಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ
ವಿರಳ ಭೂ ಖನಿಜಗಳ ಯೋಜನೆ
ಗಗನಚುಂಬಿ ಕಟ್ಟಡಗಳನ್ನು ಕಟ್ಟಡಲು ಉಕ್ಕು ಎಷ್ಟು ಮುಖ್ಯವೋ, ಸೆಮಿಕಂಡಕ್ಟರ್ಗಳನ್ನು ನಿರ್ಮಿಸಲು ಕ್ರಿಟಿಕಲ್ ಮಿನರಲ್ಗಳು ಬಹಳ ಮುಖ್ಯ. ಈ ವಿರಳ ಭೂ ಖನಿಜಗಳು (Critical minerals) ಇಲ್ಲದಿದ್ದರೆ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಆಗಲೀ ಎಐ ಆಗಲೀ ಕಷ್ಟಸಾಧ್ಯ. ಡಿಜಿಟಲ್ ಭವಿಷ್ಯ ಮಸುಕಾಗುತ್ತದೆ. ಹೀಗಾಗಿ, ಮೋದಿ ಸರ್ಕಾರ 2025ರ ಜನವರಿಯಲ್ಲಿ ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್ಗೆ ಚಾಲನೆ ನೀಡಿದರು. ಭಾರತಕ್ಕೆ ಅಗತ್ಯವಾಗಿರುವ ವಿರಳ ಭೂಖನಿಜಗಳನ್ನು ಗಳಿಸಲು, ಹಾಗೂ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿಯಲ್ಲಿ ಸ್ವಾವಲಂಬನೆ ಸಾಧಿಸಲು 16,300 ಕೋಟಿ ರೂ ಬಜೆಟ್ ಇಟ್ಟು ಈ ಮಿಷನ್ ಆರಂಭಿಸಲಾಗಿದೆ.
ಈ ಖನಿಜಗಳು ದೇಶೀಯವಾಗಿಯೇ ಸಿಗುವಂತೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದೆನಿಸಿದೆ. ಈ ಖನಿಜಗಳಿಗಾಗಿ ಬೇರೆ ದೇಶಗಳ ಮೇಲೆ ಅವಲಂಬಿಸುವುದನ್ನು ತಪ್ಪಿಸಬಹುದು. 2024-25ರಲ್ಲಿ ಜಿಎಸ್ಐ ಸಂಸ್ಥೆಯು ದೇಶಾದ್ಯಂತ 195 ಕಡೆ ಮುಖ್ಯ ಖನಿಜಗಳ ಅನ್ವೇಷಣೆ ಯೋಜನೆಗಳನ್ನು ಆರಂಭಿಸಿತು. 2025-26ರಲ್ಲಿ ಒಟ್ಟು 227 ಪ್ರಾಜೆಕ್ಟ್ಗಳು ಕಾರ್ಯಗತಗೊಳ್ಳುತ್ತಿವೆ. 2025-26ರ ಬಜೆಟ್ನಲ್ಲಿ ಮೋದಿ ಸರ್ಕಾರವು ಲಿಥಿಯಮ್ ಅಯಾನ್ ಬ್ಯಾಟರಿಯ ತ್ಯಾಜ್ಯವಾದ ಕೊಬಾಲ್ಟ್ ಪೌಂಡರ್, ಪಾದರಸ (ಲೆಡ್), ಜಿಂಕ್ ಹಾಗೂ ಇನ್ನೂ 12 ಇತರ ಮುಖ್ಯ ಖನಿಜನಗಳಿಗೆ ವಿನಾಯಿತಿ ನೀಡಿತು. ಇವುಗಳ ರೀಸೈಕ್ಲಿಂಗ್ ಮತ್ತು ಪ್ರೋಸಸಿಂಗ್ಗೆ ಉತ್ತೇಜಿಸುವಂತಹ ಕ್ರಮಗಳನ್ನು ಕೈಗೊಂಡಿತು.
ಇದನ್ನೂ ಓದಿ: Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು
ಸಂಶೋಧನೆ ಮತ್ತು ನಾವೀನ್ಯತೆ ವ್ಯವಸ್ಥೆಯಲ್ಲಿ ವೇಗದ ಪರಿವರ್ತನೆ
2047ರ ವಿಕಸಿತ ಭಾರತದ ಗುರಿಸಾಧನೆಗೆ ಆರ್ ಅಂಡ್ ಡಿಗೆ ಬಹಳ ಆದ್ಯತೆ ಕೊಡಲಾಗಿದೆ. ನವೆಂಬರ್ 3ರಂದು ರಿಸರ್ಚ್ ಡೆವಲಪ್ಮೆಂಟ್ ಅಂಡ್ ಇನ್ನೋವೇಶನ್ (ಆರ್ಡಿಐ) ಸ್ಕೀಮ್ ಫಂಡ್ ಅನ್ನು ಆರಂಭಿಸಲಾಯಿತು. ಭಾರತದ ಸಂಧೋಧನೆ ಮತ್ತು ಅಭಿವೃದ್ಧಿ ಇಕೋಸಿಸ್ಟಂ ಬಲಪಡಿಸುವ ಉದ್ದೇಶದ ಈ ಫಂಡ್ಗೆ ಒಂದು ಲಕ್ಷ ಕೋಟಿ ರೂ ಮೀಸಲಿಡಲಾಗಿದೆ. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಕೋಸಿಸ್ಟಂ ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಮುಖ ಸ್ಕೀಮ್ಗಳ ಏಕೀಕರಣಕ್ಕೆ ಅನುಮೋದನೆ ಕೊಟ್ಟರು. 10,579.84 ಕೋಟಿ ರೂ ಅನುದಾನದ ‘ವಿಜ್ಞಾನ್ ಧಾರ’ ಯೋಜನೆ ಇದು. ವಿಜ್ಞಾನಿಗಳಿಗೆ ತರಬೇತಿ ನೀಡುವುದು, ಲ್ಯಾಬ್ ಸೌಕರ್ಯ ವ್ಯವಸ್ಥೆ ಉನ್ನತೀಕರಿಸುವುದು, ವೈಜ್ಞಾನಿಕ ಆವಿಷ್ಕಾರಗಳು ಲ್ಯಾಬ್ನಿಂದ ನಾಡಿಗೆ ಬೇಗ ವರ್ಗಾವಣೆಗೊಳುವುದು, ಈ ಅಂಶಗಳತ್ತ ಇದು ಗಮನ ಕೊಡುತ್ತದೆ. ಫಂಡಿಂಗ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಭಾರತದ ವೈಜ್ಞಾನಿಕ ಇಕೋಸಿಸ್ಟಂ ಹೆಚ್ಚು ಕ್ಷಮತೆಯಿಂದ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವಂತೆ ಮಾಡುವುದು ಈ ಸ್ಕೀಮ್ನ ಉದ್ದೇಶ.
ದೂರದೃಷ್ಟಿ ಗುಣದ ಪಿಎಂ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ನಾವೀನ್ಯತೆಗೆ ಪುಷ್ಟಿ ಸಿಕ್ಕಿದೆ, ದೇಶೀಯ ಸಾಮರ್ಥ್ಯ ಹೆಚ್ಚಿದೆ, ತಂತ್ರಜ್ಞಾನ ಸ್ವಾಲವಂಬನೆ ಬಲಗೊಂಡಿದೆ. ಭಾರತ ಈಗ ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ರಾಂತಿಯಲ್ಲಿ ಕೇವಲ ವೀಕ್ಷಕನಾಗಿ ಉಳಿಯದೇ ಮುಂಚೂಣಿಯಲ್ಲಿ ಸಾಗುತ್ತಿದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




