ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ
India's Decisive 2025: New Security Policy & Operation Sindoor Power: 2025 ಭಾರತದ ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಐತಿಹಾಸಿಕ ವರ್ಷ. ಪಿಎಂ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಕಠಿಣ, ನಿರ್ಣಾಯಕ ಕ್ರಮಗಳನ್ನು ಭಾರತ ಅಳವಡಿಸಿಕೊಂಡಿದೆ. ಆಪರೇಷನ್ ಸಿಂದೂರ್ ಮೂಲಕ ಶತ್ರುಗಳ ಪ್ರದೇಶದೊಳಗೆ ನುಗ್ಗಿ ದಾಳಿ ಮಾಡುವ ಸಾಮರ್ಥ್ಯ ಪ್ರದರ್ಶಿಸಿತು. ರಕ್ಷಣಾ ಉತ್ಪಾದನೆ, ಬಜೆಟ್ ಹೆಚ್ಚಳ, ಸ್ವದೇಶಿ ತಂತ್ರಜ್ಞಾನ ಬಳಕೆಯಿಂದ ಭಾರತದ ಸೇನಾ ಶಕ್ತಿ ಮತ್ತು ಸ್ವಾವಲಂಬನೆ ಗಣನೀಯವಾಗಿ ಬೆಳೆದಿದೆ. ಜಾಗತಿಕ ಅನಿಶ್ಚಿತತೆಯ ನಡುವೆ ಭಾರತದ ಆತ್ಮವಿಶ್ವಾಸ ಎದ್ದು ಕಾಣುತ್ತದೆ.

ಭಾರತದ ಭದ್ರತಾ ದೃಷ್ಟಿಯಿಂದ 2025, ಮಹತ್ವದ ವರ್ಷ. ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಮಹತ್ತರ ಮೈಲಿಗಲ್ಲು ತಂದ ವರ್ಷ. ಭಾರತದ ಪ್ರಜೆಗಳ ಮೇಲಿನ ದಾಳಿಯನ್ನು ಸಂಯಮದಿಂದಷ್ಟೇ ಅಲ್ಲ ಕ್ಷಿಪ್ರವಾದ, ನಿಖರವಾದ ಮತ್ತು ನಿರ್ಣಾಯಕವಾದ ಕ್ರಮದಿಂದ ಎದುರಿಸಲಾಗುವುದು ಎಂಬುದನ್ನು ಪಿಎಂ ಮೋದಿ (Narendra Modi) ನಾಯಕತ್ವದ ಭಾರತ ತೋರಿಸಿಕೊಟ್ಟಿದೆ. ಭಯೋತ್ಪಾದನೆ ವಿಚಾರದಲ್ಲಿ ಪಿಎಂ ಮೋದಿ ಅವರು ಐದು ಹೊಸ ಸಹಜ ಕ್ರಮಗಳನ್ನು ತಿಳಿಸಿದ್ದಾರೆ.
ಈ ನೀತಿಗಳು ಇಂತಿವೆ:
- ಭಯೋತ್ಪಾದನಾ ದಾಳಿಗಳಿಗೆ ಖಡಕ್ ಉತ್ತರ (ಯಾವುದೇ ದಾಳಿಯನ್ನೂ ನಿರ್ಣಾಯಕ ಪ್ರತಿದಾಳಿಯಿಂದ ಉತ್ತರಿಸಲಾಗುವುದು)
- ಪರಮಾಣು ಬ್ಲ್ಯಾಕ್ಮೇಲ್ಗೆ ಬಗ್ಗುವುದಿಲ್ಲ (ಪರಮಾಣು ಬೆದರಿಕೆ ಏನೇ ಇದ್ದರೂ ಭಯೋತ್ಪಾದನಾ ನೆಲೆಗಳ ಮೆಲೆ ಭಾರತದ ಆಕ್ರಮಣ ತಡೆಯಲು ಆಗಲ್ಲ)
- ಉಗ್ರರಿಗೂ ಹಾಗೂ ಅವರ ಪ್ರಾಯೋಜಕರಿಗೂ ವ್ಯತ್ಯಾಸ ಇಲ್ಲ (ಆ ಇಬ್ಬರೂ ಕೂಡ ಪಾಪ ಕೃತ್ಯದ ಭಾಗಿದಾರರೇ ಎಂದು ಪರಿಗಣಿಸಲಾಗುವುದು)
- ಯಾವುದೇ ಮಾತುಕತೆಯಲ್ಲಿ ಭಯೋತ್ಪಾದನೆಯದೇ ಮೊದಲು ಪ್ರಸ್ತಾಪ (ಮಾತುಕತೆಗಳಲ್ಲಿ ಭಯೋತ್ಪಾದನೆ ಸಂಬಂಧಿತ ವಿಚಾರಗಳಿಗೆ ಮಾತ್ರ ಗಮನ ಕೊಡಲಾಗುತ್ತದೆ)
- ಸಾರ್ವಭೌಮತೆಯಲ್ಲಿ ಯಾವುದೇ ರಾಜಿ ಇಲ್ಲ (ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ಆಗಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರವೂ ಒಟ್ಟಿಗೆ ಹೋಗುವುದಿಲ್ಲ).
ಜಾಗತಿಕ ಅನಿಶ್ಚಿತತೆಯ ನಡುವೆ ಭಾರತವು ಸಜ್ಜಿತವಾಗಿ ಮತ್ತು ಆತ್ಮವಿಶ್ವಾಸವಾಗಿ ಸೆಟೆದು ನಿಂತಿತು. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ, ಹಾಗೂ ಸಾರ್ವಭೌಮತೆಯನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಲಾಗುವುದು ಎಂಬುವನ್ನು ಭಾರತ ಬಹಳ ಸ್ಪಷ್ಟ ಸಂದೇಶದಲ್ಲಿ ತಿಳಿಸಿಕೊಟ್ಟಿದೆ.
ಆಪರೇಷನ್ ಸಿಂದೂರ್: ಭಯೋತ್ಪಾದನಾ ವಿರೋಧಿ ಕ್ರಮದಲ್ಲಿ ಹೊಸ ದಾರಿ
2025ರ ಮೇ 7ರಂದು ಭಾರತ ಆಪರೇಷನ್ ಸಿಂದೂರ್ ಕೈಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಭಾರತ ನಡೆಸಿದ ಅತ್ಯಂತ ಮಹತ್ವದ ಮಿಲಿಟರಿ ಆ್ಯಕ್ಷನ್ ಅದು. ಪಹಲ್ಗಾಂ ಉಗ್ರ ದಾಳಿಗೆ ಭಾರತ ಪ್ರತಿಕ್ರಿಯಿಸಿದ ವಿಧಾನ ಅದು. ಭಯೋತ್ಪಾದನೆಗೆ ಭಾರತದ ಸ್ಪಂದನೆ ಹೇಗಿರುತ್ತೆ ಎಂದು ತೋರಿಸಲಾಗಿತ್ತು. ‘ತನ್ನ ಪ್ರಜೆಗಳನ್ನು ಗುರಿ ಮಾಡಿದ್ದೇ ಆದಲ್ಲಿ ಭಾರತವು ಭಯೋತ್ಪಾದನೆಯ ಎದೆಗೆ, ಶತ್ರು ಪ್ರದೇಶದೊಳಗೆ ಬಹಳ ದೂರದವರೆಗೆ ಪ್ರಹಾರ ಮಾಡುತ್ತದೆ’ ಎನ್ನುವ ಸಂದೇಶ ರವಾನೆಯಾಗಿದೆ.
ಇದನ್ನೂ ಓದಿ: Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು
ಐದು ದಶಕಗಳಲ್ಲಿ ಪಾಕಿಸ್ತಾನದ ಭೂಭಾಗದೊಳಗೆ ಭಾರತ ನಡೆಸಿದ ಪ್ರಮುಖ ಮಿಲಿಟರಿ ಕಾರ್ಯಾಚರಣೆ ಇದೆನಿಸಿದೆ. ಪರಮಾಣು ಶಕ್ತ ಶತ್ರು ದೇಶದ ಆಳದಲ್ಲಿ ಹಲವು ಸ್ಥಳಗಳನ್ನು ನಿಖರವಾಗಿ ಗುರಿ ಮಾಡಿ ಭಾರತ ದಾಳಿ ಎಸಗಿದ್ದು ಇದೇ ಮೊದಲು. ಇದು ದೇಶದ ಮಿಲಿಟರಿ ಹೊಂದಿರುವ ಆತ್ಮವಿಶ್ವಾಸದ ಸಂಕೇತವಾಗಿದೆ.
1971ರ ನಂತರ ಮೊದಲ ಬಾರಿಗೆ ಭಾರತವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಆಳಕ್ಕೆ ದಾಳಿ ಮಾಡಿ ಬಹುತೇಕ 100 ಉಗ್ರರನ್ನು ಸಂಹರಿಸಿದೆ. ಪಾಕಿಸ್ತಾನದ ಒಳಗೆ ಮತ್ತು ಎಲ್ಓಸಿ ಗಡಿ ಉದ್ದಕ್ಕೂ ಒಮ್ಮೆಗೇ ಹಲವು ದೊಡ್ಡ ಗುರಿಗಳನ್ನು ಹೊಡೆದು, ಉಗ್ರರ ಶಿಬಿರಗಳನ್ನು ಮತ್ತು ಇನ್ಫ್ರಾಸ್ಟ್ರಕ್ಚರ್ ಅನ್ನು ನಾಶ ಮಾಡಿದ್ದೂ ಇದೇ ಮೊದಲು.
ಮೇ 10ರಂದು ಭಾರತ 11 ಪಾಕಿಸ್ತಾನೀ ವಾಯುನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿತು. ಭಾರತದ ಒಂದೂ ಮಿಸೈಲ್ ಅನ್ನೂ ಪಾಕಿಸ್ತಾನದ ವಾಯು ರಕ್ಷಣೆ ವ್ಯವಸ್ಥೆಗೆ ತಡೆಯಲು ಆಗಲಿಲ್ಲ. ‘ಭಾರತೀಯ ಪ್ರಜೆಗಳನ್ನು ಗುರಿ ಮಾಡಿದರೆ, ಭಾರತ ತನ್ನದೇ ರೀತಿಯಲ್ಲಿ ಕ್ಷಿಪ್ರವಾಗಿ ಪ್ರತಿಕ್ರಿಯಿಸಬಲ್ಲುದು, ಶತ್ರು ಪಾಳದೊಳಗೆ ಬೇಕಾದರೂ ನುಗ್ಗಿ ಮರುಘಾತ ಕೊಡಬಹುದು’ ಎಂದು ಆಪರೇಷನ್ ಸಿಂದೂರ ತೋರಿಸಿಕೊಟ್ಟಿದೆ.
ಆಪರೇಷನ್ ಸಿಂದೂರದಲ್ಲಿ ಬಳಕೆ ಆಗಿದ್ದು ಬಹುತೇಕ ಮೇಡ್ ಇನ್ ಇಂಡಿಯಾ ತಂತ್ರಜ್ಞಾನವೇ. ಇದು ಜಾಗತಿಕ ಸಮುದಾಯಕ್ಕೆ ಅಚ್ಚರಿ ಮೂಡಿಸಿದೆ. ಆಪರೇಷನ್ ಸಿಂದೂರ್ನಲ್ಲಿ ಭಾರತೀಯ ವಾಯುಪಡೆ ಬಹಳ ಸಂಯೋಜಿತ ರೀತಿಯಲ್ಲಿ ನಿಖರ ದಾಳಿ ನಡೆಸಿತು. ಬ್ರಹ್ಮೋಸ್ ಸೂಪರ್ಸೋನಿ ಕ್ರ್ಯೂಸ್ ಮಿಸೈಲ್, ರಫೇಲ್ ಜೆಟ್ಗಳಿಂದ ನಿಖರ ದಾಳಿ ನಡೆಸಲಾಯಿತು. ಕಾಮಿಕೇಜ್ ಡ್ರೋನ್, ಲಾಯಿಟರಿಂಗ್ ಡ್ರೋನ್ಗಳು ಶತ್ರುಪಾಳಯದ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಮತ್ತು ಗುರಿಗಳ ಮೇಲೆ ನಿಖರ ದಾಳಿ ಮಾಡಲು ಬಳಕೆಯಾದವು.
ಭಾರತದ ಹೊಸ ರಕ್ಷಣಾ ನೀತಿ: ಸಂಕಲ್ಪ ಮತ್ತು ಸಾಮರ್ಥ್ಯ ಬೆರೆತಾಗ…
ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದ ರಕ್ಷಣಾ ಕ್ಷೇತ್ರದಲ್ಲಾದ ಪರಿವರ್ತನೆ 2025ರಲ್ಲಿ ಉಚ್ಛ್ರಾಯ ಸ್ಥಿತಿ ಮುಟ್ಟಿತು. ಡಿಫೆನ್ಸ್ ಪ್ರೊಡಕ್ಷನ್ 2014ರಲ್ಲಿ 40,000 ಕೋಟಿ ರೂ ಇದ್ದದ್ದು ಈಗ 1.54 ಲಕ್ಷ ಕೋಟಿ ರೂಗೆ ಏರಿದೆ. ಇದು ಭಾರತವು ವಿಶ್ವಾಸಾರ್ಹವಾದ ಒಂದು ಜಾಗತಿಕ ರಕ್ಷಣಾ ಉತ್ಪಾದನಾ ಅಡ್ಡೆಯಾಗುತ್ತಿರುವುದನ್ನು ತೋರಿಸುತ್ತದೆ.
ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?
ಭಾರತದ ರಕ್ಷಣಾ ಬಜೆಟ್ 2013-14ರಲ್ಲಿ 2.53 ಲಕ್ಷ ಕೋಟಿ ರೂ ಇತ್ತು. 2025-26ರಲ್ಲಿ 6.81 ಲಕ್ಷ ಕೋಟಿ ರೂಗೆ ಏರಿದೆ. ಆಧುನೀಕರಣ, ಇನ್ಫ್ರಾಸ್ಟ್ರಕ್ಚರ್ಗೆ ಭಾರತ ಉತ್ತಮ ರೀತಿಯ ಹೂಡಿಕೆ ಮಾಡುತ್ತಿರುವುದನ್ನು ತೋರಿಸುತ್ತದೆ. ಭಾರತದಲ್ಲಿ ತಯಾರಾಗುವ ರಕ್ಷಣಾ ಉಪಕರಣಗಳು 100ಕ್ಕೂ ಅಧಿಕ ದೇಶಗಳಿಗೆ ರಫ್ತಾಗುತ್ತಿವೆ. ಅಮೆರಿಕ, ಫ್ರಾನ್ಸ್, ಆರ್ಮೇನಿಯಾ ಮೊದಲಾದ ದೇಶಗಳಿಗೂ ರಫ್ತಾಗುತ್ತಿವೆ. ಇದರಲ್ಲಿ ಡಿಫೆನ್ಸ್ ಸೆಕ್ಟರ್ನ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲೇ ಶೇ. 77ರಷ್ಟಿದೆ.
ಎಲ್ಲಾ ಮೂರು ರಕ್ಷಣಾ ಸೇವೆಗಳ ಬಲವರ್ಧನೆ
2025ರಲ್ಲಿ ಭಾರತದ ರಕ್ಷಣಾ ಕ್ಷೇತ್ರವನ್ನು ಬಹಳ ವೇಗವಾಗಿ ಆಧುನೀಕರಣ ಮಾಡಲಾಯಿತು. ಈ ವರ್ಷ 4.30 ಲಕ್ಷ ಕೋಟಿ ರೂ ಮೌಲ್ಯದ ಖರೀದಿ ಪ್ರಸ್ತಾವಗಳಾದವು. ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಲ್ಲಿ ಯುದ್ಧ ಸನ್ನದ್ಧ ಸ್ಥಿತಿ ತಲುಪಲು ಸರ್ಕಾರ ಬಹಳ ತ್ವರಿತ ಹೆಜ್ಜೆಗಳನ್ನು ಇಡುತ್ತಿದೆ ಎಂಬುದು ಈ ಖರೀದಿ ಪ್ರಸ್ತಾವಗಳಿಂದ ಗೊತ್ತಾಗುತ್ತದೆ.
2025ರ ಮಾರ್ಚ್ನಲ್ಲಿ, ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ (ರಕ್ಷಣಾ ಖರೀದಿ ಮಂಡಳಿ) 54,000 ಕೋಟಿ ರೂ ಮೊತ್ತದ ಖರೀದಿ ಪ್ರಸ್ತಾವಕ್ಕೆ ಅನುಮೋನೆ ಕೊಟ್ಟಿತು. ಈ ಪ್ರಸ್ತಾಪದಲ್ಲಿ ಟಿ-90 ಟ್ಯಾಂಕ್ಗಳಿಗೆ 1,350 ಎಚ್ಪಿ ಎಂಜಿನ್ಗಳು, ದೇಶೀಯವಾಗಿ ಅಭಿವೃದ್ಧಿಪಡಿಸಿದ ವರುಣಾಸ್ತ್ರಗಳು, ಆಗಸದಿಂದಲೇ ಮುನ್ನೆಚ್ಚರಿಕೆ ನೀಡುವಂತಹ ಸಿಸ್ಟಂಗಳು ಮೊದಲಾದವು ಒಳಗೊಂಡಿವೆ. ಎಚ್ಎಎಲ್ನಿಂದ 156 ಹಗುರ ಯುದ್ಧ ಹೆಲಿಕಾಪ್ಟರ್ಗಳನ್ನು ಖರೀದಿಸಲು ಸರ್ಕಾರ ಅದೇ ಮಾರ್ಚ್ ತಿಂಗಳಲ್ಲಿ 62,000 ಕೋಟಿ ರೂಗೆ ಡೀಲ್ ಮಾಡಿಕೊಂಡಿತು.
ಏಪ್ರಿಲ್ ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಡಸ್ಸೋ ಸಂಸ್ಥೆಯಿಂದ 26 ರಫೇಲ್ ಎಂ ಫೈಟರ್ ಜೆಟ್ ಅನ್ನು ಖರೀದಿಸಲು ಫ್ರಾನ್ಸ್ ಜೊತೆ 63,000 ಕೋಟಿ ರೂಗೆ ಡೀಲ್ ಮಾಡಿಕೊಳ್ಳಲಾಯಿತು. ಜುಲೈ ತಿಂಗಳಲ್ಲಿ 1.05 ಲಕ್ಷ ಕೋಟಿ ರೂ ಮೌಲ್ಯದ 10 ಖರೀದಿ ಪ್ರಸ್ತಾವಗಳಿಗೆ ಅನುಮೋದನೆ ಸಿಕ್ಕಿತು. ಇದರಲ್ಲಿ ಎಲೆಕ್ಟ್ರಾನಿಕ್ ವಾರ್ಫೇರ್ ಸಿಸ್ಟಂ, ಆರ್ಮರ್ಡ್ ರಿಕವರಿ ವೆಹಿಕಲ್ ಮೊದಲಾದವುಗಳ ಖರೀದಿ ಸೇರಿದೆ.
ಆಗಸ್ಟ್ ತಿಂಗಳಲ್ಲಿ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸಲು 67,000 ಕೋಟಿ ರೂ ಮೌಲ್ಯದ ವಿವಿಧ ಒಪ್ಪಂದಗಳಿಗೆ ಅನುಮೋದನೆ ಕೊಟ್ಟಿತು ಡಿಎಸಿ. ಅಕ್ಟೋಬರ್ನಲ್ಲಿ 79,000 ಕೋಟಿ ರೂ ಮೌಲ್ಯದ ಖರೀದಿ ಒಪ್ಪಂದಗಳಿಗೆ ಸಮ್ಮತಿ ಸಿಕ್ಕಿತು. ಇವೆಲ್ಲವೂ ಕೂಡ ದೇಶದ ಮಿಲಿಟರಿ ಸಾಮರ್ಥ್ಯ ವೃದ್ಧಿಸಲು ಸರ್ಕಾರ ಹೊಂದಿರುವ ಬದ್ಧತೆಗೆ ಕನ್ನಡಿ ಹಿಡಿಯುತ್ತವೆ.
ಪ್ರಮುಖ ಸೇರ್ಪಡೆ, ಪರೀಕ್ಷೆ, ದೇಶೀಯ ತಯಾರಿಕೆ
ಭಾರತದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ದೇಶೀಯವಾಗಿ ಎಕೆ-203 ಅಸ್ಸಾಲ್ಟ್ ರೈಫಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಮೇಥಿಯಲ್ಲಿ ಈ ರೈಫಲ್ಗಳನ್ನು ತಯಾರಿಸಲಾಗಿದ್ದು 2025ರ ಡಿಸೆಂಬರ್ನಲ್ಲಿ ಭಾರತೀಯ ಸೇನೆಯ ಬಳಕೆಗೆ ಸಿಗಲಿದೆ. ಈ ವರ್ಷದ ಆರಂಭದಲ್ಲಿ (2025ರ ಜನವರಿ) ಡೆಸ್ಟ್ರಾಯರ್, ಫ್ರಿಗೇಟ್ ಮತ್ತು ಸಬ್ಮರೀನ್ ಈ ಮೂರು ನೌಕೆಗಳು ಇದೇ ಮೊದಲ ಬಾರಿಗೆ ಒಟ್ಟಿಗೆ ಭಾರತೀಯ ನೌಕೆಗೆ ಸೇರ್ಪಡೆಯಾಗಿವೆ.
2025ರ ಆಗಸ್ಟ್ ತಿಂಗಳಲ್ಲಿ ಮುಕ್ಕಾಲು ಪಾಲು ದೇಶೀಯವಾಗಿ ಅಭಿವೃದ್ಧಿಯಾದ ಐಎನ್ಎಸ್ ಹಿಮಗಿರಿ ಮತ್ತು ಐಎನ್ಎಸ್ ಉದಯಗಿರಿ ಈ ಎರಡು ಸ್ಟೀಲ್ತ್ ಫ್ರಿಗೇಟ್ಗಳನ್ನು ನೌಕಾಪಡೆಗೆ ಸೇರಿಸಲಾಯಿತು.
ಸೆಪ್ಟೆಂಬರ್ ತಿಂಗಳಲ್ಲಿ 2,000 ಕಿಮೀ ದೂರ ಕ್ರಮಿಸಬಲ್ಲ ಪರಮಾಣ ಶಕ್ತ ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆ ನಡೆಸಿತು. ರೈಲ್ ಮೇಲಿನ ಲಾಂಚರ್ನಿಂದ ಇದರ ಉಡಾವಣೆ ಮಾಡಲಾಯಿತು. ಈ ರೀತಿ ರೈಲ್ಕಾರ್ ಆಧಾರಿತ ಅಂತರಖಂಡ ಬ್ಯಾಲಿಸ್ಟಿಕ್ ಮಿಸೈಲ್ಗಳನ್ನು ಉಡಾಯಿಸಬಲ್ಲ ಸಾಮರ್ಥ್ಯ ಇರುವ ರಷ್ಯಾ, ಅಮೆರಿಕ ಮತ್ತು ಚೀನಾ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಗೊಂಡಿತು.
ಈ ವರ್ಷ, ಲಕ್ನೋದ ಇಂಟಿಗ್ರೇಶನ್ ಮತ್ತು ಟೆಸ್ಟಿಂಗ್ ಘಟಕದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಯ ಮೊದಲ ಬ್ಯಾಚ್ ಅನ್ನು ಬಿಡುಗಡೆ ಮಾಡಲಾಯಿತು. ಉತ್ತರಪ್ರದೇಶದ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ನಲ್ಲಿ ಈ ಘಟಕವು ಒಂದು ಪ್ರಮುಖ ಭಾಗವಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ತೇಕನ್ಪುರ್ನಲ್ಲಿ ಭಾರತದ ಮೊದಲ ಡ್ರೋನ್ ಸಮರ ಶಾಲೆಯನ್ನು ಬಿಎಸ್ಎಫ್ ಆರಂಭಿಸಿತು. ಡಿಸೆಂಬರ್ನಲ್ಲಿ ಡಿಆರ್ಡಿಒ ತನ್ನ ಏಳು ಸುಧಾರಿತ ತಂತ್ರಜ್ಞಾನಗಳನ್ನು ಭಾರತೀಯ ನೌಕಾಸೇನೆ ಮತ್ತು ವಾಯುಸೇನೆಗೆ ಹಸ್ತಾಂತರಿಸಿತು.
ಇದೇ ಡಿಸೆಂಬರ್ ತಿಂಗಳಲ್ಲಿ ಡಿಆರ್ಡಿಒ ಫೈಟರ್ ಏರ್ಕ್ರಾಫ್ಟ್ ಎಸ್ಕೇಪ್ ಸಿಸ್ಟಂನ ಹೈಸ್ಪೀಡ್ ರಾಕೆಟ್ ಸ್ಲೆಡ್ ಟೆಸ್ಟ್ ನಡೆಸಿತು. ಈ ಪರೀಕ್ಷೆ ಯಶಸ್ವಿಯಾಯಿತು. ಕೆಲವೇ ದೇಶಗಳಿಗೆ ಮಾತ್ರವೇ ಈ ಪರೀಕ್ಷಾ ಸಾಮರ್ಥ್ಯ ಇರುವುದು.
ಡಿಫೆನ್ಸ್ ಕೈಗಾರಿಕಾ ಇಕೋಸಿಸ್ಟಂ ಮತ್ತು ಸುಧಾರಣೆಗಳು
2025ರ ನವೆಂಬರ್ 1ರಿಂದ ಜಾರಿಯಾಗುವಂತೆ, ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಮ್ಯಾನುಯಲ್ನಿಂದ ಉದ್ಯಮ ಸ್ನೇಹಿ ಸುಧಾರಣೆಗಳು ಚಾಲ್ತಿಗೆ ಬಂದವು. ಉತ್ತರಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಮತ್ತು ತಮಿಳುನಾಡು ರಕ್ಷಣಾ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ 9,145 ಕೋಟಿ ರೂ ಮೊತ್ತದ ಹೂಡಿಕೆಗಳು ಬಂದವು. ಇದರಲ್ಲಿ 289 ತಿಳಿವಳಿಕೆ ಒಪ್ಪಂದಗಳಾದವು. ಓಪನ್ ಟೆಂಡರ್ನಲ್ಲಿ ಖಾಸಗಿ ಕಂಪನಿಗಳುಮತ್ತು ಎಂಎಸ್ಎಂಇಗಳು ಪಾಲ್ಗೊಳ್ಳಬೇಕಾದರೆ ಡಿಫೆನ್ಸ್ ಸೆಕ್ಟರ್ನ ಪಬ್ಲಿಕ್ ಸೆಕ್ಟರ್ ಕಂಪನಿಗಳಿಂದ ಎನ್ಒಸಿ ಪಡೆಯಬೇಕು ಎಂದಿದ್ದ ನಿಯಮವನ್ನು ತೆಗೆದುಹಾಕಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




