Coal Crisis: ದೇಶದ ಕಲ್ಲಿದ್ದಲು ಸಂಗ್ರಹ 4 ದಿನಗಳಿಗೆ ಇಳಿಕೆ; ಭಾರತದಲ್ಲೂ ಎದುರಾಗುತ್ತಾ ವಿದ್ಯುತ್ ಬಿಕ್ಕಟ್ಟು?

TV9 Digital Desk

| Edited By: Sushma Chakre

Updated on:Oct 09, 2021 | 1:53 PM

Coal Shortage: ಕೆಲ ಥರ್ಮಲ್ ಪ್ಲಾಂಟ್ ಗಳಲ್ಲಿ ಕೇವಲ ನಾಲ್ಕು ದಿನದ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಮಾತ್ರ ಇದೆ. ಇದರಿಂದ ಭಾರತದಲ್ಲೂ ವಿದ್ಯುತ್ ಬಿಕ್ಕಟ್ಟು ಉಂಟಾಗುವ ಆತಂಕ ಎದುರಾಗಿದೆ.

Coal Crisis: ದೇಶದ ಕಲ್ಲಿದ್ದಲು ಸಂಗ್ರಹ 4 ದಿನಗಳಿಗೆ ಇಳಿಕೆ; ಭಾರತದಲ್ಲೂ ಎದುರಾಗುತ್ತಾ ವಿದ್ಯುತ್ ಬಿಕ್ಕಟ್ಟು?
ಸಾಂದರ್ಭಿಕ ಚಿತ್ರ

Follow us on

ನವದೆಹಲಿ: ಬೇರೆ ವರ್ಷಗಳಿಗಿಂತಲೂ ಭಾರತದಲ್ಲಿ ಈ ವರ್ಷ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹವು ಭಾರೀ ಕುಸಿತ ಕಂಡಿದೆ. ಹೀಗಾಗಿ, ಭಾರತದ ಆರ್ಥಿಕತೆಯಲ್ಲಿ ಕೂಡ ಚೀನಾ ಮತ್ತು ಯುರೋಪ್‌ ರಾಷ್ಟ್ರಗಳಲ್ಲಿ ಉಂಟಾಗಿರುವ ವಿದ್ಯುತ್ ಬಿಕ್ಕಟ್ಟಿನಿಂದ ಉಂಟಾದ ಪರಿಣಾಮಗಳೇ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತದಲ್ಲಿ ಈಗ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲ್ಲಿನ ಭಾರೀ ಕೊರತೆ ಉಂಟಾಗಿದೆ. ಕೆಲ ಥರ್ಮಲ್ ಪ್ಲಾಂಟ್ ಗಳಲ್ಲಿ ಕೇವಲ ನಾಲ್ಕು ದಿನದ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಮಾತ್ರ ಇದೆ. ಇದರಿಂದ ಭಾರತದಲ್ಲೂ ವಿದ್ಯುತ್ ಬಿಕ್ಕಟ್ಟು ಉಂಟಾಗುವ ಆತಂಕ ಎದುರಾಗಿದೆ.

ದೇಶದಲ್ಲಿ ಕಲ್ಲಿದ್ದಲು ಗಣಿಗಳಿಂದ ಥರ್ಮಲ್‌ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಆಗಿರುವ ಇಳಿಕೆಯಿಂದ ಈಗ ಥರ್ಮಲ್‌ ಘಟಕಗಳು ಸಂಕಷ್ಟಕ್ಕೆ ಸಿಲುಕಿವೆ. ಹಬ್ಬದ ದಿನಗಳಲ್ಲಿ ಒಂದೆಡೆ ವಿದ್ಯುತ್‌ ಬಳಕೆ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಥರ್ಮಲ್‌ ಘಟಕಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ಉತ್ಪಾದನೆ ಸ್ಥಗಿತಗೊಳಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿರುವುದು ಥರ್ಮಲ್‌ ಘಟಕಗಳಿಗೆ ಈಗ ಸಂಕಷ್ಟ ತಂದೊಡ್ಡಿದೆ. ದೇಶದಲ್ಲಿರುವ ಬಹುತೇಕ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆ ಕೇಂದ್ರಗಳಲ್ಲಿ ಕಲ್ಲಿದ್ದಲು ಸಂಗ್ರಹಣೆ ಕುಸಿದಿದೆ. ಬ್ಲೂಮ್​ಬರ್ಗ್ ವರದಿ ಪ್ರಕಾರ, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಈಗ ಕೇವಲ 4 ದಿನಗಳಿಗಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ.

ಭಾರತದ 6 ಥರ್ಮಲ್‌ ವಿದ್ಯುತ್‌ ಕೇಂದ್ರಗಳಲ್ಲಿ ಕಲ್ಲಿದ್ದಲು ಸಂಗ್ರಹ ಈಗಾಗಲೇ ಶೂನ್ಯಕ್ಕೆ ತಲುಪಿದೆ. ಭಾರತದ ಒಟ್ಟು 108 ಥರ್ಮಲ್‌ ಕೇಂದ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಹಬ್ಬದ ಸಂದರ್ಭವಾದ್ದರಿಂದ ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಹಾಗೇ, ಕೈಗಾರಿಕೆಗಳು ನಿರಂತರವಾಗಿ ಚಟುವಟಿಕೆಯನ್ನು ಹೆಚ್ಚಿಸುತ್ತಿವೆ. ಭಾರತವು ಒಟ್ಟು 209 GW ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಸಾಮರ್ಥ್ಯವನ್ನು ಹೊಂದಿದೆ. ಇದು ದೇಶದ ವಿದ್ಯುತ್ ಪೂರೈಕೆಯ ಶೇ. 70ರಷ್ಟಿದೆ.

ಧನ್​ಬಾದ್‌ನ ಅತಿದೊಡ್ಡ ಕಲ್ಲಿದ್ದಲು ಗಣಿಗಳಲ್ಲಿನ ಸಮಸ್ಯೆಗಳು ಮತ್ತು ಏರಿಕೆಯಾಗಿರುವ ಅಂತಾರಾಷ್ಟ್ರೀಯ ಕಲ್ಲಿದ್ದಲು ಬೆಲೆಗಳಿಂದಾಗಿ ಹಾಗೂ ಆಮದು ಮಾಡಿದ ಕಲ್ಲಿದ್ದಲಿನ ಕಡಿಮೆ ಪೂರೈಕೆಯಿಂದಾಗಿ ದೇಶೀಯ ಕಲ್ಲಿದ್ದಲು ಪೂರೈಕೆ ಕಡಿಮೆಯಾಗಿದೆ. ಇದರಿಂದ ಮುಂಬರುವ ವಿದ್ಯುತ್ ಬಿಕ್ಕಟ್ಟು ದೇಶದಲ್ಲಿ ಇನ್ನೂ ದುರ್ಬಲ ಆರ್ಥಿಕತೆಯನ್ನು ಸೃಷ್ಟಿಸುವ ಆತಂಕ ಹೆಚ್ಚುತ್ತಿದೆ. ಈಗ ಭಾರತದಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರ (ಥರ್ಮಲ್ ಪವರ್ ಪ್ಲಾಂಟ್)ಗಳಲ್ಲಿ ಕಲ್ಲಿದ್ದಲಿನ ಕೊರತೆ ಇದೆ. ಆಕ್ಟೋಬರ್ 4ರಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ದಾಖಲೆಯ ಪ್ರಕಾರ, ದೇಶದ 64 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನಾಲ್ಕು ದಿನಕ್ಕೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಮಾತ್ರ ಇದೆ. ದೇಶದ 25 ಉಷ್ಣು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ 7 ದಿನಕ್ಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇದೆ. ದೇಶದ 135 ವಿದ್ಯುತ್ ಉತ್ಪಾದನಾ ಘಟಕಗಳನ್ನು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ ಮಾನಿಟರ್ ಮಾಡುತ್ತದೆ. ದೇಶದ 135 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಪ್ರತಿ ನಿತ್ಯ ಒಟ್ಟಾರೆ 165 ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದ ಶಿಫಾರಸ್ಸಿನ ಪ್ರಕಾರ, ದೇಶದ ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಕನಿಷ್ಠ 14 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು. ಆದರೆ, ಅಕ್ಟೋಬರ್ 4ರಂದು ದೇಶದ 16 ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಒಂದು ದಿನಕ್ಕಾಗುವಷ್ಟು ಕಲ್ಲಿದ್ದಲು ಕೂಡ ದಾಸ್ತಾನು ಇರಲಿಲ್ಲ. ಮಳೆಗಾಲದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಸ್ಥಗಿತಗೊಳಿಸುವುದರಿಂದ ಮತ್ತು ಖಾಸಗಿ ವಲಯದ ವಿದ್ಯುತ್ ಉತ್ಪಾದಕರಿಂದ ಪೂರೈಕೆ ಪರಿಸ್ಥಿತಿ ಹದಗೆಟ್ಟಿದೆ.

ಆಮದು ಮಾಡಿದ ಕಲ್ಲಿದ್ದಲಿನ ಬೆಲೆಗಳು ಈ ಸಾಮರ್ಥ್ಯಗಳ ಬಳಕೆಯನ್ನು ಮೊಟಕುಗೊಳಿಸುವುದಕ್ಕೆ ಕಾರಣವಾಗುತ್ತವೆ. ಆದರೂ ನಿರ್ವಹಣೆ ಸ್ಥಗಿತದಿಂದ ಹೊರಬರುವ ದೇಶೀಯ ಕಲ್ಲಿದ್ದಲು ಆಧಾರಿತ ಸಾಮರ್ಥ್ಯಗಳಿಂದ ಇದನ್ನು ಸರಿದೂಗಿಸಬಹುದು ಎಂದು ಕೋಟಕ್ ಇಕ್ವಿಟೀಸ್ ಹೇಳಿದೆ. ಬ್ರೋಕರೇಜ್ ಸಂಸ್ಥೆಯು ಅಕ್ಟೋಬರ್ ನಂತರ ವಿದ್ಯುತ್ ಬೇಡಿಕೆಯ ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗುತ್ತಿದೆ. ಏಕೆಂದರೆ ಚಳಿಗಾಲದಲ್ಲಿ ಹವಾ ನಿಯಂತ್ರಣಗಳು ಮತ್ತು ಕೂಲರ್‌ಗಳ ಅಗತ್ಯವನ್ನು ಕಡಿಮೆಯಾಗುತ್ತದೆ. ಭಾರತದಲ್ಲಿ, ನವೆಂಬರ್-ಫೆಬ್ರವರಿಯಲ್ಲಿ ವಿದ್ಯುತ್ ಬೇಡಿಕೆ ಸಾಮಾನ್ಯವಾಗಿ ವರ್ಷದ ಉಳಿದ ಸಮಯಕ್ಕಿಂತ ಶೇ. 8ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ಕರ್ನಾಟಕ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ- ಸುನಿಲ್ ಕುಮಾರ್

Coal shortage in RTPS: ಆರ್​ಟಿ​ಪಿಎಸ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ; ಕತ್ತಲಲ್ಲಿ ಮುಳುಗಲಿದೆ ಅರ್ಧ ರಾಜ್ಯ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada