ದೆಹಲಿಯಲ್ಲಿ 2-3ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಚಳಿ; ಹವಾಮಾನ ಇಲಾಖೆ ಎಚ್ಚರಿಕೆ

ರಾಜಧಾನಿಯ ಗರಿಷ್ಠ ಉಷ್ಣಾಂಶ ಸುಮಾರು 16 ಡಿಗ್ರಿ ಸೆಲ್ಸಿಯಸ್ ಆಗಿರಲಿದ್ದು, ದಟ್ಟ ಮಂಜು ಮುಸುಕಿದ ವಾತಾವರಣ ಕಂಡುಬರಲಿರುವ ಬಗ್ಗೆ IMD ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲ್​ದೀಪ್ ಶ್ರೀವಾಸ್ತವ ಸೂಚನೆ ನೀಡಿದ್ದಾರೆ.

  • TV9 Web Team
  • Published On - 11:07 AM, 25 Jan 2021
ದೆಹಲಿಯಲ್ಲಿ 2-3ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಚಳಿ; ಹವಾಮಾನ ಇಲಾಖೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ

ದೆಹಲಿ: ಮುಂದಿನ ಎರಡು-ಮೂರು ದಿನಗಳಲ್ಲಿ ದೆಹಲಿ ಕನಿಷ್ಠ ತಾಪಮಾನ ನಾಲ್ಕು ಡಿಗ್ರಿ ಸೆಲ್ಸಿಯಸ್​ಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇಂದು (ಜ.25) ಮಾಹಿತಿ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಶೀತಗಾಳಿ ಮರುಕಳಿಸುವ ಸಾಧ್ಯತೆ ಇದ್ದು ಚಳಿ ಹೆಚ್ಚಾಗುವ ಬಗ್ಗೆ ಅಂದಾಜಿಸಲಾಗಿದೆ.

ರಾಜಧಾನಿಯ ಗರಿಷ್ಠ ಉಷ್ಣಾಂಶ ಸುಮಾರು 16 ಡಿಗ್ರಿ ಸೆಲ್ಸಿಯಸ್ ಆಗಿರಲಿದ್ದು, ದಟ್ಟ ಮಂಜು ಮುಸುಕಿದ ವಾತಾವರಣ ಕಂಡುಬರಲಿರುವ ಬಗ್ಗೆ IMD ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲ್​ದೀಪ್ ಶ್ರೀವಾಸ್ತವ ಸೂಚನೆ ನೀಡಿದ್ದಾರೆ. ಇಂದು (ಜ.25) ದೆಹಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್ ಆಗಿದೆ. ಭಾನುವಾರ (ಜ.24) ಗರಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಸಹಜ ತಾಪಮಾನಕ್ಕಿಂತ ಆರು ಡಿಗ್ರಿ ಸೆಲ್ಸಿಯಸ್ ಕಡಿಮೆ ಇದ್ದು, ಈ ತಿಂಗಳ ಅತಿ ಕಡಿಮೆ ತಾಪಮಾನವಾಗಿತ್ತು.

ನಾಳೆ (ಜ.26) ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ, ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿ ‘ಕಿಸಾನ್ ಗಣತಂತ್ರ ಪರೇಡ್’ ನಡೆಯಲಿದೆ. ಕಳೆದ ಎರಡು ತಿಂಗಳಿನಿಂದ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರು  ಟ್ರ್ಯಾಕ್ಟರ್​ ಪರೇಡ್ ನಡೆಸಲಿದ್ದಾರೆ. ಇದೇ ದಿನಗಳಲ್ಲಿ ಮತ್ತೆ ತಾಪಮಾನ ಕುಸಿತದ ಮುನ್ಸೂಚನೆ ಲಭಿಸಿದೆ.

ಉತ್ತರಾಖಂಡ್ ಬದರಿನಾಥ್​ನಲ್ಲಿ ಹಿಮಪಾತವಾಗಿದೆ. ಶೇಷ ನೇತ್ರ ಸರೋವರದ ಭಾಗಗಳು ಮಂಜುಗಡ್ಡೆಯಂತಾಗಿದೆ. ಉತ್ತರ ಪ್ರದೇಶದ ಭಾಗಗಳಲ್ಲೂ ಚಳಿ ಅನುಭವವಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್, ಕಾನ್ಪುರ್​​ನಲ್ಲಿ ಮಂಜು ಮುಸುಕಿದ ವಾತಾವರಣ ಕಂಡುಬಂದಿದೆ. ಕಾನ್ಪುರ್​ನಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಾಶ್ಮೀರದಲ್ಲಿ ತೀವ್ರ ಚಳಿ: ಕನಿಷ್ಠ ತಾಪಮಾನಕ್ಕೆ ಮಂಜುಗಡ್ಡೆಯಂತಾದ ದಾಲ್ ಸರೋವರ