ಯುವ ಕಾಂಗ್ರೆಸ್ ತಂಡದಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ; ವಿವಾದಕ್ಕೆ ಕಾರಣವಾಯ್ತು ಟ್ವೀಟ್
ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ವಿ ಶ್ರೀನಿವಾಸ್ ಈ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಸ್ವಯಂಸೇವಕರಲ್ಲಿ ಒಬ್ಬರಾದ ಮನು ದೀಕ್ಷಿತ್ ಅವರಿಗೆ ನಿನ್ನೆ ಫಿಲಿಫೈನ್ಸ್ ರಾಯಭಾರ ಕಚೇರಿಯಿಂದ ಆಕ್ಷಿಜನ್ ಸಿಲಿಂಡರ್ ಬೇಕಾಗಿದೆ ಎಂದು ಕರೆ ಬಂದಿತ್ತು ಎಂದು ಹೇಳಿದ್ದಾರೆ.
ದೆಹಲಿ: ನಗರದಲ್ಲಿರುವ ನ್ಯೂಜಿಲ್ಯಾಂಡ್ ರಾಯಭಾರ ಕಚೇರಿಗೆ ಮತ್ತು ಫಿಲಿಫೈನ್ಸ್ ರಾಯಭಾರ ಕಚೇರಿಗೆ ಯುವ ಕಾಂಗ್ರೆಸ್ ತಂಡ ಭಾನುವಾರ ಆಕ್ಸಿಜನ್ ಸಿಲಿಂಡರ್ ಪೂರೈಸಿದೆ. ಈ ವಿಚಾರ ಸದ್ಯ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಈ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಸ್ವಯಂಸೇವಕರಲ್ಲಿ ಒಬ್ಬರಾದ ಮನು ದೀಕ್ಷಿತ್ ಅವರಿಗೆ ನಿನ್ನೆ ರಾತ್ರಿ(ಶನಿವಾರ) ಫಿಲಿಫೈನ್ಸ್ ರಾಯಭಾರ ಕಚೇರಿಯಿಂದ ಆಕ್ಷಿಜನ್ ಸಿಲಿಂಡರ್ ಬೇಕಾಗಿದೆ ಎಂದು ಕರೆ ಬಂದಿದೆ. ಅದರಂತೆ ಆಕ್ಷಿಜನ್ ಸಿಲಿಂಡರ್ ಅನ್ನು ಫಿಲಿಫೈನ್ಸ್ ಕಚೇರಿಗೆ ಪೂರೈಸಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ದೀಕ್ಷಿತ್ ಮಾತನಾಡಿದ್ದು, ಮುಂಬೈಯಿಂದ ಫಿಲಿಪೈನ್ಸ್ ರಾಯಭಾರ ಕಚೇರಿಗೆ ಸಂಬಂಧಿಸಿದ ಒಬ್ಬರಿಂದ ಕರೆ ಬಂದಿದೆ. ದೆಹಲಿಯ ರಾಯಭಾರ ಕಚೇರಿಗೆ ತಕ್ಷಣ ಸಿಲಿಂಡರ್‌ಗಳು ಬೇಕು ಎಂದು ಹೇಳಿದರು. ನಾನು ಆ ವ್ಯಕ್ತಿಯ ಹೆಸರನ್ನು ಕೇಳಿದೆ, ಆಗ ಅವರು ತಮ್ಮನ್ನು ಟೋಮ್ಸ್ ವ್ಯಾಲೆರಿಯೊ ಎಂದು ಪರಿಚಯಿಸಿಕೊಂಡರು. ಆ ನಂತರವೇ ನಾವು ಅವರನ್ನು ತಲುಪಿದೆವು. ರಾಯಭಾರ ಕಚೇರಿಯಲ್ಲಿ ಆಕ್ಸಿಜನ್ ಅಗತ್ಯವಿರುವ ಇಬ್ಬರು ರೋಗಿಗಳಿದ್ದಾರೆ ಎಂದು ಅವರು ಹೇಳಿದರು. ಹತ್ತು ಸಣ್ಣ ಸಿಲಿಂಡರ್ಗಳನ್ನು ನಮ್ಮಿಂದ ಕೋರಿದರು ಆದರೆ ನಮ್ಮಲ್ಲಿ ಸಣ್ಣ ಸಿಲಿಂಡರ್ ಇರಲಿಲ್ಲ. ಹೀಗಾಗಿ ಎರಡು ದೊಡ್ಡ ಅಕ್ಸಿಜನ್ ಸಿಲಿಂಡರ್ಗಳ ವ್ಯವಸ್ಥೆ ಮಾಡಿದೆವು ಎಂದು ಹೇಳಿದ್ದಾರೆ.
ಬಳಿಕ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಫಿಲಿಫೈನ್ಸ್ ರಾಯಭಾರ ಕಚೇರಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸೇವೆಯ ದೃಶ್ಯಗಳನ್ನು ಟ್ವೀಟ್ ಮಾಡಿದ್ದಾರೆ. ಇದನ್ನು ಕಂಡ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ನಾನು ಐವೈಸಿ (ಭಾರತೀಯ ಯುವ ಕಾಂಗ್ರೇಸ್) ಅವರ ಈ ಸೇವೆಗೆ ಧನ್ಯವಾದ ಹೇಳುತ್ತೇನೆ. ಭಾರತೀಯ ಪ್ರಜೆಯಾಗಿ ನಾನು ಆಶ್ಚರ್ಯಚಕಿತನಾಗಿದ್ದೇನೆ ಏಕೆಂದರೆ ವಿರೋಧ ಪಕ್ಷದ ತಂಡಕ್ಕೆ ಸಹಾಯಕ್ಕಾಗಿ ಕರೆ ಬಂದಿದೆ. ವಿದೇಶಾಂಗ ಇಲಾಖೆ ಮಲಗಿದೆಯೇ ಡಾ.ಎಸ್.ಜೈಶಂಕರ್ ಎಂದು ಪ್ರಶ್ನೆ ಮಾಡಿದ್ದಾರೆ.
ಜೈರಾಮ್ ರಮೇಶ್ ಟ್ವೀಟ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಉತ್ತರ ನೀಡಿದ್ದು, ಎಂಇಎ ( ವಿದೇಶಾಂಗ ಸಚಿವಾಲಯ) ಫಿಲಿಫೈನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆ. ಇಲ್ಲಿ ಯಾವುದೇ ಕೊವಿಡ್ ಸೋಂಕಿತರಿಲ್ಲ. ಪ್ರಚಾರಕ್ಕಾಗಿ ಈ ರೀತಿ ಸುಳ್ಳು ಸುದ್ದಿಗಳನ್ನು ರವಾನೆ ಮಾಡಬೇಡಿ. ಆಕ್ಸಿಜನ್ ಅಗತ್ಯವಿರುವ ಅನೇಕರು ನಮ್ಮ ನಡುವೆ ಇರುವಾಗ ಈ ರೀತಿಯ ಸುದ್ದಿ ಭಯವನ್ನು ಹುಟ್ಟಿಸುತ್ತದೆ. ಜೈರಾಮ್ ಜಿ, ಎಂಇಎ ಎಂದಿಗೂ ನಿದ್ರೆ ಮಾಡುವುದಿಲ್ಲ. ಈ ಬಗ್ಗೆ ಪ್ರಪಂಚದಾದ್ಯಂತ ತಿಳಿದಿದೆ. ಹಾಗೆಯೇ ಎಂದಿಗೂ ಎಂಇಎ ಸುಳ್ಳು ಸುದ್ದಿ ನೀಡುವುದಿಲ್ಲ ಯಾರು ಈ ರೀತಿ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
Update- New Zealand high commission opened gates of the embassy and accepted cylinders.
Also, they thanked the #SOSIYC team for this quick relief as patient inside embassy was critically ill. https://t.co/BzGwj0wm0q pic.twitter.com/vu6TUhD1r8
— Srinivas B V (@srinivasiyc) May 2, 2021
ವಿದೇಶಾಂಗ ಸಚಿವರ ಈ ಟ್ವೀಟ್ ನಿರಾಶದಾಯಕವಾಗಿದೆ. ನಾವು ಡೆಲಿವರಿ ಬಾಯ್ಗಳಲ್ಲ ನಮಗೆ ಆಕ್ಸಿಜನ್ ಸಿಲಿಂಡರ್ ಅಗತ್ಯತೆ ಇದೆ ಎಂದು ಮನವಿ ಬಂದಿತ್ತು. ಹೀಗಾಗಿ ಸಿಲಿಂಡರ್ ಪೂರೈಸಿದ್ದೇವೆ. ಸಹಾಯಕ್ಕಾಗಿ ರಾಯಭಾರ ಕಚೇರಿಯಿಂದ ಕರೆ ಬಂದಿದೆ. ಹೀಗಾಗಿ ಹೋದೆವು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ ಎಂದು ಯುವ ಕಾಂಗ್ರೆಸ್ ತಂಡ ವಿಷಾದ ಹೊರಹಾಕಿದೆ.
ತಕ್ಷಣ ಶ್ರೀನಿವಾಸ್ ಟ್ವೀಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಹೆಚ್ಚಿನ ವಿವರಗಳನ್ನು ತಿಳಿಸುವಂತೆ ಸೂಚಿಸಿದ್ದಾರೆ. ಯುವ ಕಾಂಗ್ರೆಸ್ ಸ್ವಯಂಸೇವಕರು ಆಕ್ಸಿಜನ್ ಸಿಲಿಂಡರ್ನೊಂದಿಗೆ ರಾಯಭಾರಿ ಕಚೇರಿ ತಲುಪಿದಾಗ ಮತ್ತೊಂದು ಟ್ವೀಟ್ ಮಾಡಿದ್ದು, ನಾವು ರಾಯಭಾರ ಕಚೇರಿ ತಲುಪಿದ್ದೇವೆ. ಆದಷ್ಟು ಬೇಗ ಬಂದು ಗೇಟ್ ತೆಗೆಯಿರಿ ಮತ್ತು ಒಂದು ಜೀವ ಉಳಿಸಿ ಎಂದು ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.
ಈ ನಡುವೆ ನ್ಯೂಜಿಲ್ಯಾಂಡ್ ರಾಯಭಾರ ಕಚೇರಿ ತನ್ನ ಮೊದಲ ಟ್ವೀಟ್ ಅಳಿಸಿ ಇನ್ನೊಂದು ಟ್ವೀಟ್ ಮಾಡಿದೆ. ನಾವು ಆಕ್ಸಿಜನ್ ಸಿಲಿಂಡರ್ಗಳನ್ನು ವ್ಯವಸ್ಥೆ ಮಾಡಲು ಎಲ್ಲಾ ಮೂಲಗಳಿಂದ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ದುರದೃಷ್ಟವಶಾತ್ ನಮ್ಮ ಮನವಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.
ನಂತರ ಶ್ರೀನಿವಾಸ್ ಅವರು, ಯುವ ಕಾಂಗ್ರೇಸ್ ಕಾರ್ಯಕರ್ತರು ಆಕ್ಸಿಜಿನ್ ಸಿಲಿಂಡರ್ ಜೊತೆಗೆ ನ್ಯೂಜಿಲ್ಯಾಂಡ್ ರಾಯಭಾರ ಕಚೇರಿ ಒಳಗೆ ಪ್ರವೇಶಿಸುತ್ತಿರುವ ವಿಡಿಯೋದೊಂದಿಗೆ, ಸಿಲಿಂಡರ್ ಸ್ವೀಕರಿಸಿದ್ದಾರೆ ಹಾಗೂ ನಮ್ಮ ತಂಡದ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.
ಇದು ರಾಜಕೀಯ ಮಾಡುವ ಸಮಯವಲ್ಲ. ನಮಲ್ಲಿ ಯಾರಾದರೂ ಮನವಿ ಮಾಡಿದರೆ ಅಂತಹವರಿಗೆ ಸಹಾಯ ಮಾಡುತ್ತೇವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ:
Pascal Saldhana: ಹೆಂಡತಿ ಆಭರಣ ಮಾರಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಷಿಜನ್ ನೀಡುತ್ತಿದ್ದಾರೆ ಪ್ಯಾಸ್ಕಲ್…
Published On - 10:54 pm, Sun, 2 May 21