Bilkis Bano case ನಾರಿ ಶಕ್ತಿಯನ್ನು ಹೊಗಳಿದ ಪ್ರಧಾನಿಗೆ ತಮ್ಮ ಮಾತಿನಲ್ಲಿ ನಂಬಿಕೆ ಇದೆಯೇ?: ಕಾಂಗ್ರೆಸ್ ತರಾಟೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 16, 2022 | 8:49 PM

ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ "ನಾರಿ ಶಕ್ತಿ" ಯನ್ನು ಹೊಗಳಿದ್ದು, ಕೆಲವೇ ಗಂಟೆಗಳಲ್ಲಿ ಗುಜರಾತ್ ಗಲಭೆಯ ಅಪರಾಧಿಗಳನ್ನು ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ

Bilkis Bano case ನಾರಿ ಶಕ್ತಿಯನ್ನು ಹೊಗಳಿದ ಪ್ರಧಾನಿಗೆ ತಮ್ಮ ಮಾತಿನಲ್ಲಿ ನಂಬಿಕೆ ಇದೆಯೇ?: ಕಾಂಗ್ರೆಸ್ ತರಾಟೆ
ಪವನ್ ಖೇರಾ
Follow us on

2002 ರ ಗುಜರಾತ್ ಗಲಭೆಯ (Gujarat riots 2002) ಬಿಲ್ಕಿಸ್ ಬಾನು ಪ್ರಕರಣದಲ್ಲಿ(Bilkis Bano case) ಅತ್ಯಾಚಾರ ಮತ್ತು ಕೊಲೆಗೆ ಶಿಕ್ಷೆಗೊಳಗಾದ 11 ಜನರನ್ನು ಬಿಡುಗಡೆ ಮಾಡಿದ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು(Narendra Modi) ತರಾಟೆಗೆ ತೆಗೆದುಕೊಂಡಿದೆ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ “ನಾರಿ ಶಕ್ತಿ” ಯನ್ನು ಹೊಗಳಿದ್ದು, ಕೆಲವೇ ಗಂಟೆಗಳಲ್ಲಿ ಗುಜರಾತ್ ಗಲಭೆಯ ಅಪರಾಧಿಗಳನ್ನು ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ನಿರ್ಧಾರ ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಪ್ರಧಾನಿಯವರ ಹೇಳಿಕೆಗಳಲ್ಲಿ ಏನಾದರೂ ಅರ್ಥವಿದೆಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಮಹಿಳೆಯರ ಸುರಕ್ಷತೆ, ಗೌರವ ಮತ್ತು ಸಬಲೀಕರಣದ ಬಗ್ಗೆ ಮಾತನಾಡುವ ಮೋದಿ ಅವರ ಮಾತಿನಲ್ಲಿ ನಂಬಿಕೆ ಇದೆಯೇ ಎಂದು ದೇಶಕ್ಕೆ ತಿಳಿಸಬೇಕು ಎಂದು ಹೇಳಿದರು. ಗುಜರಾತ್‌ನ ಬಿಜೆಪಿ ಸರ್ಕಾರವು ಬಿಲ್ಕಿಸ್ ಬಾನು  ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದೆ. ಈ ನಿರ್ಧಾರವು ಬಿಜೆಪಿ ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ ಖೇರಾ.

ಕಥುವಾ ಮತ್ತು ಉನ್ನಾವೊ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ರಾಷ್ಟ್ರೀಯ ರಾಜಕೀಯ ಪಕ್ಷದ ಪದಾಧಿಕಾರಿಗಳು ಮತ್ತು ಬೆಂಬಲಿಗರು ಬೀದಿಗಳಲ್ಲಿ ಅತ್ಯಾಚಾರಿಗಳ ಪರವಾಗಿ ರ್ಯಾಲಿಯನ್ನು ನಡೆಸುತ್ತಿರುವುದನ್ನು ನೋಡಿದರೆ ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಮುಜುಗರವಾಗುತ್ತದೆ ಎಂದು ಹೇಳಿದರು.

“ನಿನ್ನೆ ಕೆಂಪು ಕೋಟೆಯ ಆವರಣದಿಂದ ಪ್ರಧಾನಿ ಮಹಿಳಾ ಸುರಕ್ಷತೆ, ಮಹಿಳಾ ಶಕ್ತಿ, ಮಹಿಳಾ ಗೌರವದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಕೆಲವು ಗಂಟೆಗಳ ನಂತರ ಗುಜರಾತ್ ಸರ್ಕಾರವು ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆ ಮಾಡಿದೆ. ಅತ್ಯಾಚಾರದ ಅಪರಾಧಿಗಳು ಬಿಡುಗಡೆಯಾದಾಗ ಅವರನ್ನು ಸನ್ಮಾನಿಸುತ್ತಿರುವುದನ್ನು ನಾವು ನೋಡಿದ್ದೇನೆ. ಇದೇನಾ ಅಮೃತ ಮಹೋತ್ಸವ? ಎಂದು ಖೇರಾ ಗುಡುಗಿದ್ದಾರೆ.
ಕೆಂಪುಕೋಟೆಯಿಂದ ಅವರು ಹೇಳಿದ್ದು ಕೇವಲ ಮಾತುಗಳು ಎಂದು ದೇಶಕ್ಕೆ ಹೇಳುವಂತೆ ಕಾಂಗ್ರೆಸ್ ಪ್ರಧಾನಿಯನ್ನು ಒತ್ತಾಯಿಸಿದ ಕಾಂಗ್ರೆಸ್ ಮೋದಿ ಹೇಳಿದ ಮಾತಿನಲ್ಲಿ ಅವರಿಗೇ ನಂಬಿಕೆ ಇಲ್ಲ ಎಂದಿದೆ

“ನಿಜವಾದ ನರೇಂದ್ರ ಮೋದಿ ಯಾರು? ಕೆಂಪು ಕೋಟೆಯಿಂದ ಸುಳ್ಳು ಹೇಳುವವರು ಅಥವಾ ಅತ್ಯಾಚಾರದ ಹಿಂದಿರುವವರನ್ನು ಬಿಡುಗಡೆ ಮಾಡಲು ಗುಜರಾತ್ ಸರ್ಕಾರರಕ್ಕೆ ಹೇಳುವವರು. ಈ ಕಾಂಗ್ರೆಸ್ ಪಕ್ಷ ಮತ್ತು ದೇಶವು ತಿಳಿದುಕೊಳ್ಳಲು ಬಯಸುತ್ತದೆ,” ಎಂದು ಕಾಂಗ್ರೆಸ್ ನಾಯಕ ಕೇಳಿದರು.

2002 ಗೋಧ್ರಾ ಗಲಭೆ ವೇಳೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಹನ್ನೊಂದು ಅಪರಾಧಿಗಳನ್ನು ಸೋಮವಾರ ಗೋಧ್ರಾ ಸಬ್  ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದ ಸಮಿತಿಯು ಶಿಕ್ಷೆಯ ವಿನಾಯತಿಗಾಗಿ ಸಲ್ಲಿಸಿದ ಅರ್ಜಿಯನ್ನು ಅನುಮೋದಿಸಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನಲ್ಲಿ 14 ವರ್ಷಗಳು ಪೂರ್ಣಗೊಂಡಿದೆ. ವಯಸ್ಸು, ಅಪರಾಧದ ಸ್ವರೂಪ, ಜೈಲಿನಲ್ಲಿನ ನಡವಳಿಕೆ ಮತ್ತು ಮುಂತಾದ ಇತರ ಅಂಶಗಳ ಕಾರಣದಿಂದಾಗಿ ಕ್ಷಮಾಪಣೆಗಾಗಿ ಅರ್ಜಿಯನ್ನು ಪರಿಗಣಿಸಲಾಗಿದೆ ಎಂದು ಗುಜರಾತ್ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ. ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲ್ಲೂಕಿನಲ್ಲಿ 2002 ಮಾರ್ಚ್ 3ರಂದು ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, 14 ಮಂದಿಯನ್ನು ಜನರ ಗುಂಪೊಂದು ಹೊಡೆದು ಕೊಂದಿತ್ತು. ಸಾವಿಗೀಡಾದವರಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಲೇಹಾ ಕೂಡಾ ಇದ್ದಾಳೆ. ಈ ಪ್ರಕರಣ ನಡೆದಾಗ ಬಿಲ್ಕಿಸ್ ಗರ್ಭಿಣಿ ಆಗಿದ್ದರು. ತನ್ನ ಮೇಲೆ ನಡೆದ ದೌರ್ಜನ್ಯ ಬಗ್ಗೆ ಬಿಲ್ಕಿಸ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಮೀಪಿಸಿದಾಗ ಈ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಬಿಲ್ಕಿಸ್ ಅವರಿಗೆ ಆರೋಪಿಯಿಂದ ಜೀವ ಬೆದರಿಕೆ ಬಂದಿದೆ ಎಂಬ ದೂರಿನನ್ವಯ 2004 ಆಗಸ್ಟ್ ತಿಂಗಲ್ಲಿ ಸುಪ್ರೀಂಕೋರ್ಟ್ ಪ್ರಸ್ತುತ ಪ್ರಕರಣವನ್ನು ಗುಜರಾತಿನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿತ್ತು.  2008 ಜನವರಿ 21ರಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಯುಡಿ ಸಾಲ್ವಿ ಅವರು 13 ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು, ಮುಂಬೈನಲ್ಲಿ ನಡೆದ ಇನ್ ಕ್ಯಾಮೆರಾ ವಿಚಾರಣೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. 2017 ಮೇ ತಿಂಗಳಲ್ಲಿ ಬಾಂಬೈ ಹೈಕೋರ್ಟ್ ಈ ನಿರ್ಧಾರವನ್ನು ಎತ್ತಿ ಹಿಡಿದಿತ್ತು.

2019ರಲ್ಲಿ ಸುಪ್ರೀಂಕೋರ್ಟ್ ಬಿಲ್ಕಿಸ್ ಅವರಿಗೆ 50 ಲಕ್ಷ ಪರಿಹಾರ ನೀಡಿತ್ತು. 2002 ರ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇದು ಮೊದಲ ಆದೇಶವಾಗಿತ್ತು. ಆಗಬಾರದ್ದು ಸಂಭವಿಸಿದ್ದು, ರಾಜ್ಯವು ಪರಿಹಾರ ನೀಡಬೇಕು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರ ಸುಪ್ರೀಂ ಕೋರ್ಟ್ ಪೀಠ ಹೇಳಿತ್ತು.