Girija Vyas: ಆರತಿ ಮಾಡುವಾಗ ಹೊತ್ತಿಕೊಂಡ ಬೆಂಕಿ; ಸುಟ್ಟ ಗಾಯದಿಂದ ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ ನಿಧನ

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ ಉದಯಪುರದಲ್ಲಿ ನಿಧನರಾಗಿದ್ದಾರೆ. 2025ರ ಮಾರ್ಚ್ 31ರಂದು ಉದಯಪುರದ ತಮ್ಮ ಮನೆಯಲ್ಲಿ ಆರತಿ ಮಾಡುವಾಗ ಗಿರಿಜಾ ವ್ಯಾಸ್ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. 1991ರಲ್ಲಿ ಗಿರಿಜಾ ವ್ಯಾಸ್ ಅವರು ಉದಯಪುರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಸಂಸತ್ತಿಗೆ ಪ್ರವೇಶಿಸಿದರು. ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.

Girija Vyas: ಆರತಿ ಮಾಡುವಾಗ ಹೊತ್ತಿಕೊಂಡ ಬೆಂಕಿ; ಸುಟ್ಟ ಗಾಯದಿಂದ ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ ನಿಧನ
Girija Vyas

Updated on: May 01, 2025 | 11:15 PM

ನವದೆಹಲಿ, ಮೇ 1: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ (Girija Vyas) ಇಂದು (ಮೇ 1) ರಾಜಸ್ಥಾನದ ಉದಯಪುರದಲ್ಲಿ ಸುಟ್ಟ ಗಾಯಗಳಿಂದ ನಿಧನರಾಗಿದ್ದಾರೆ. ಮಾರ್ಚ್ 31ರಂದು ಉದಯಪುರದ ತಮ್ಮ ಮನೆಯಲ್ಲಿ ದೇವರಿಗೆ ಆರತಿ ಮಾಡುವಾಗ ಅವರಿಗೆ ಸುಟ್ಟ ಗಾಯಗಳಾಗಿತ್ತು. 79 ವರ್ಷದ ಗಿರಿಜಾ ವ್ಯಾಸ್ ಅವರನ್ನು ಉದಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ಗೆ ಕರೆದೊಯ್ಯಲಾಯಿತು. ಗಿರಿಜಾ ವ್ಯಾಸ್ ಆರತಿ ಮಾಡುತ್ತಿದ್ದಾಗ ಅವರ ಸಲ್ವಾರ್​ನ ದುಪಟ್ಟಾಕ್ಕೆ ಕೆಳಗೆ ಉರಿಯುವ ದೀಪದಿಂದ ಬೆಂಕಿ ಹೊತ್ತಿಕೊಂಡಿತ್ತು. ಆ ಬೆಂಕಿ ಅವರ ಮೈಯನ್ನು ಆವರಿಸಿಕೊಂಡಿತ್ತು. ತಕ್ಷಣ ಅವರ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋದರು.

ಸತತ 1 ತಿಂಗಳ ಕಾಲ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಿರಿಜಾ ವ್ಯಾಸ್ ಇಂದು ನಿಧನರಾಗಿದ್ದಾರೆ. ಗಿರಿಜಾ ವ್ಯಾಸ್ ಒಬ್ಬ ಪ್ರಮುಖ ಕಾಂಗ್ರೆಸ್ ನಾಯಕಿ, ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗಿರಿಜಾ ವ್ಯಾಸ್ ಅವರ ನಿಧನಕ್ಕೆ ಕಾಂಗ್ರೆಸ್ ಸಂತಾಪ ಸೂಚಿಸಿದೆ.


ಇದನ್ನೂ ಓದಿ: ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ತನ್ನಿ; ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರಾಹುಲ್ ಗಾಂಧಿ ಪತ್ರ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾಜಿ ಕೇಂದ್ರ ಸಚಿವೆ ಮತ್ತು ಹಿರಿಯ ಕಾಂಗ್ರೆಸ್ ನಾಯಕಿ ಗಿರಿಜಾ ವ್ಯಾಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮಾಜಿ ಕೇಂದ್ರ ಸಚಿವೆ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ. ಗಿರಿಜಾ ವ್ಯಾಸ್ ಅವರ ನಿಧನ ನಮಗೆಲ್ಲರಿಗೂ ತುಂಬಲಾರದ ನಷ್ಟ. ಡಾ. ಗಿರಿಜಾ ವ್ಯಾಸ್ ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಂತಹ ಅಪಘಾತದಲ್ಲಿ ಅವರ ಅಕಾಲಿಕ ನಿಧನ ನಮಗೆಲ್ಲರಿಗೂ ದೊಡ್ಡ ಆಘಾತವಾಗಿದೆ. ಅವರ ಆತ್ಮಕ್ಕೆ ದೇವರ ಪಾದದಲ್ಲಿ ಸ್ಥಾನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.


ಇದನ್ನೂ ಓದಿ: ಜನಗಣತಿಯಲ್ಲಿ ಜಾತಿ ಗಣತಿ ಸೇರ್ಪಡೆ; ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಹೇಳಿದ್ದೇನು?

1991ರಲ್ಲಿ ಗಿರಿಜಾ ವ್ಯಾಸ್ ಅವರು ಉದಯಪುರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಸಂಸತ್ತಿಗೆ ಪ್ರವೇಶಿಸಿದರು. ಪ್ರಧಾನಿಯಾಗಿದ್ದ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಗಿರಿಜಾ ವ್ಯಾಸ್ ರಾಜಸ್ಥಾನದ ಚಿತ್ತೋರ್‌ಗಢ ಕ್ಷೇತ್ರದಿಂದ 15ನೇ ಲೋಕಸಭೆಯ ಸದಸ್ಯರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ