ಕಾಂಗ್ರೆಸ್​ನ ಪವನ್ ಖೇರಾ ಬಳಿ 2 ವೋಟರ್ ಐಡಿ; ಎಷ್ಟು ಬಾರಿ ಮತ ಹಾಕಿದ್ದಾರೆ, ತನಿಖೆಯಾಗಲಿ: ಬಿಜೆಪಿ ಆಗ್ರಹ

BJP IT cell head Amit Malviya alleges that Pawan Khera has 2 active voter IDs: ವೋಟರ್ ಅಧಿಕಾರ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ, ಸದ್ಯದಲ್ಲೇ ಸರ್ಕಾರದ ವಿರುದ್ಧ ಹೈಡ್ರೋಜನ್ ಬಾಂಬ್ ಹಾಕುವುದಾಗಿ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿಯೂ ಕೂಡ ಕಾಂಗ್ರೆಸ್ ವಿರುದ್ಧ ಈ ವಿಚಾರದಲ್ಲಿ ಸೆಟೆದು ನಿಂತಿದೆ. ಹಿರಿಯ ಕಾಂಗ್ರೆಸ್ ಮುಖಂಡ ಪವನ್ ಖೇರಾ ಬಳಿ 2 ವೋಟರ್ ಐಡಿ ಇವೆ ಎಂದು ಬಿಜೆಪಿಯ ಅಮಿತ್ ಮಾಳವೀಯ ಆರೋಪಿಸಿದ್ದಾರೆ.

ಕಾಂಗ್ರೆಸ್​ನ ಪವನ್ ಖೇರಾ ಬಳಿ 2 ವೋಟರ್ ಐಡಿ; ಎಷ್ಟು ಬಾರಿ ಮತ ಹಾಕಿದ್ದಾರೆ, ತನಿಖೆಯಾಗಲಿ: ಬಿಜೆಪಿ ಆಗ್ರಹ
ಕಾಂಗ್ರೆಸ್ ಮುಖಂಡ ಪವನ್ ಖೇರಾ

Updated on: Sep 02, 2025 | 12:20 PM

ನವದೆಹಲಿ, ಸೆಪ್ಟೆಂಬರ್ 2: ಕಾಂಗ್ರೆಸ್ ಆರಂಭಿಸಿರುವ ವೋಟ್ ಚೋರಿ (ಮತ ಕಳ್ಳತನ) ಆರೋಪಗಳಿಗೆ ಪ್ರತಿಯಾಗಿ ಬಿಜೆಪಿಯೂ ಅಸ್ತ್ರ ಬಿಟ್ಟಿದೆ. ಹಿರಿಯ ಕಾಂಗ್ರೆಸ್ ಮುಖಂಡ ಪವನ್ ಖೇರಾ (Pawan Khera) ಬಳಿ ಎರಡು ವೋಟರ್ ಐಡಿಗಳಿವೆ ಎಂದು ಬಿಜೆಪಿ (BJP) ಆರೋಪಿಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ವಿವರ ನೀಡಿದ್ದು, ಪವನ್ ಖೇರಾ ಹಲವು ಬಾರಿ ವೋಟು ಚಲಾಯಿಸಿದ್ದಾರಾ ಎಂಬುದು ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ವಕ್ತಾರರಾಗಿರುವ ಪವನ್ ಖೇರಾ ಅವರು ಜಂಗಪುರ ಮತ್ತು ನ್ಯೂ ಡೆಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ವೋಟರ್ ಐಡಿ ಹೊಂದಿದ್ದಾರೆ ಎಂದು ಹೇಳಿರುವ ಅಮಿತ್ ಮಾಳವೀಯ, ಆ ಎರಡು ವೋಟರ್ ಐಡಿಗಳ ಎಪಿಕ್ ನಂಬರ್, ಪಾರ್ಟ್ ನಂಬರ್ ಇತ್ಯಾದಿ ಮಾಹಿತಿಯನ್ನು ಹಾಕಿದ್ದಾರೆ.

ಇದನ್ನೂ ಓದಿ: ಬಿಹಾರದ SIR ಕುರಿತು ಸೆ. 30ರ ನಂತರ ಸಲ್ಲಿಕೆಯಾದ ಆಕ್ಷೇಪಣೆಗಳನ್ನೂ ಪರಿಗಣಿಸುತ್ತೇವೆ; ಸುಪ್ರೀಂ ಕೋರ್ಟ್​ಗೆ ಚುನಾವಣಾ ಆಯೋಗ ಮಾಹಿತಿ

ಎರಡು ಸಕ್ರಿಯ ಎಪಿಕ್ ನಂಬರ್ ಹೊಂದಿರುವ ಪವನ್ ಖೇರಾ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ್ದಾರಾ ಎಂಬುದನ್ನು ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಅಮಿತ್ ಮಾಳವೀಯ ಒತ್ತಾಯಿಸಿದ್ದಾರೆ.

ಅಮಿತ್ ಮಾಳವೀಯ ಎಕ್ಸ್ ಪೋಸ್ಟ್

ಬಹು ವೋಟರ್ ಐಡಿ ಹೊಂದಿರುವುದು ಮಾತ್ರವಲ್ಲ, ಪವನ್ ಖೇರಾ ಬಿಹಾರದಲ್ಲಿ ದುರುದ್ದೇಶಪೂರ್ವಕವಾದ ಸುದ್ದಿಗೋಷ್ಠಿಗಳನ್ನು ಮಾಡಿ, ಮತದಾರರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: 1991ರಲ್ಲಿಯೇ ಕಾಂಗ್ರೆಸ್ ಮತಕಳ್ಳತನ ಮಾಡಿತ್ತಾ? ತಿರುಗುಬಾಣವಾದ ಸಿದ್ದರಾಮಯ್ಯ ಹೇಳಿಕೆ

‘ಸತ್ಯ ಬಹಳ ಸ್ಪಷ್ಟ ಇದೆ. ಕಾಂಗ್ರೆಸ್ ಪಕ್ಷ ಅಪ್ಪಟ ಮತ ಕಳ್ಳನೆನಿಸಿದೆ. ಅದೇ ಕೆಸರನ್ನು ಎಲ್ಲರಿಗೂ ಮೆತ್ತಲು ಹೊರಟಿದೆ. ಬಹಳ ದೀರ್ಘ ಕಾಲ ಅವರು ನಮ್ಮ ಚುನಾವಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ. ಅಕ್ರಮ ನುಸುಳುಕೋರರು ಮತ್ತು ಭಾರತೀಯರೇತರಿಗೆ ಮಾನ್ಯತೆ ನೀಡಿ ಚುನಾವಣೆ ಗೆದ್ದಿದ್ದಾರೆ. ಚುನಾವಣಾ ಆಯೋಗವು ವಿಶೇಷ ಮತ ಪರಿಷ್ಕರಣೆ ಮಾಡುವುದರಿಂದ ತಮ್ಮ ಕುತಂತ್ರ ಬಯಲಾಗುವ ಭಯ ಕಾಂಗ್ರೆಸ್ಸಿಗರಿಗೆ ಶುರುವಾಗಿದೆ’ ಎಂದು ಕುಟುಕಿದ ಅಮಿತ್ ಮಾಳವೀಯ, ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ರಾಹುಲ್ ಗಾಂಧಿ ಮಾರಕ ಎನ್ನುವ ಸತ್ಯವನ್ನು ದೇಶದ ಜನರು ಅರಿಯುವ ಸಮಯ ಬಂದಿದೆ ಎಂದಿದ್ಧಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ