ರಾಹುಲ್ ಗಾಂಧಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ 2 ಕೋಟಿಗೆ ಏರಿಕೆ; ಪತ್ರ ಕೆಲಸ ಮಾಡಿತು ಎಂದ ಕಾಂಗ್ರೆಸ್
ಟ್ವಿಟರ್ ಬಗ್ಗೆ ತುಂಬ ಅಸಮಾಧಾನ ಹೊರಹಾಕಿದ್ದ ರಾಹುಲ್ ಗಾಂಧಿ, ನನ್ನ ಅಕೌಂಟ್ನಲ್ಲಿ ಫಾಲೋವರ್ಸ್ ಸಂಖ್ಯೆ ಸೀಮಿತಗೊಂಡಿದ್ದು ಕಾಕತಾಳೀಯವಲ್ಲ. ಇದು ಕೇಂದ್ರ ಸರ್ಕಾರದ ಪ್ರಭಾವ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟ್ವಿಟರ್ ಅಕೌಂಟ್ (Twitter Account) ಫಾಲೋವರ್ಸ್ ಸಂಖ್ಯೆ 20 ಮಿಲಿಯನ್ (2 ಕೋಟಿ) ತಲುಪಿದೆ. ಈ ಟ್ವಿಟರ್ ಫಾಲೋವರ್ಸ್ ವಿಚಾರಕ್ಕೇ ರಾಹುಲ್ ಗಾಂಧಿ ಅಸಮಾಧಾನಗೊಂಡಿದ್ದರು. ತಮ್ಮ ಟ್ವಿಟರ್ನಲ್ಲಿ ಫಾಲೋವರ್ಸ್ ಸಂಖ್ಯೆ ಇದ್ದಷ್ಟೇ ಇದ್ದು ತುಂಬ ದಿನ ಆಯಿತು. ಈ ಸಂಖ್ಯೆಯಲ್ಲಿ ಏರಿಕೆಯಾಗುತ್ತಿಲ್ಲ. ಯಾವುದೇ ಬಾಹ್ಯ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಟ್ವಿಟರ್ ತಾರತಮ್ಯ ಮಾಡುತ್ತಿದೆ. ಹೀಗಾಗಿ ನನ್ನ ಟ್ವಿಟರ್ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನು ಸೀಮಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ 2021ರ ಡಿಸೆಂಬರ್ನಲ್ಲಿ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಅವರಿಗೇ ಪತ್ರ ಬರೆದಿದ್ದರು.
2021ರ ಡಿಸೆಂಬರ್ 27ರಂದು ಪರಾಗ್ ಅಗರ್ವಾಲ್ಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ, ನನ್ನ ಟ್ವಿಟರ್ ಅಕೌಂಟ್ನಲ್ಲಿ ಫಾಲೋವರ್ಸ್ ಸಂಖ್ಯೆ ಸೀಮಿತಗೊಂಡಿದೆ. ತುಂಬ ಸಮಯಗಳಿಂದ 19.5 ಮಿಲಿಯನ್ ಎಂದೇ ತೋರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತಿತರರ ಟ್ವಿಟರ್ ಖಾತೆಗಳಲ್ಲಿ ಫಾಲೋವರ್ಸ್ ಸಂಖ್ಯೆ ನಿರಂತರವಾಗಿ ಏರುತ್ತಿದೆ. ನನ್ನ ಅಕೌಂಟ್ ಮಾತ್ರ ಇದ್ದಷ್ಟೇ ಇದೆ ಎಂದು ಹೇಳಿದ್ದರು. ಆದರೆ ಈ ಆರೋಪವನ್ನು ಟ್ವಿಟರ್ ನಿರಾಕರಿಸಿತ್ತು. ಟ್ವಿಟರ್ ಸ್ಪಾಮ್ ಮತ್ತು ನಕಲಿ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಉನ್ನತ ತಂತ್ರಜ್ಞಾನದ ಮೂಲಕ ನಿಗಾ ವಹಿಸಲಾಗಿದೆ. ಹೀಗಾಗಿ ಫಾಲೋವರ್ಸ್ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ ಎಂದು ಹೇಳಿತ್ತು.
ಟ್ವಿಟರ್ ಬಗ್ಗೆ ತುಂಬ ಅಸಮಾಧಾನ ಹೊರಹಾಕಿದ್ದ ರಾಹುಲ್ ಗಾಂಧಿ, ನನ್ನ ಅಕೌಂಟ್ನಲ್ಲಿ ಫಾಲೋವರ್ಸ್ ಸಂಖ್ಯೆ ಸೀಮಿತಗೊಂಡಿದ್ದು ಕಾಕತಾಳೀಯವಲ್ಲ. ದೆಹಲಿಯಲ್ಲಿ ನಡೆದ ಅತ್ಯಾಚಾರವೊಂದರ ವಿರೋಧಿಸಿ, ಸಂತ್ರಸ್ತೆಯ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿ ನಾನು ಟ್ವೀಟ್ ಮಾಡಿದ್ದೆ. ಫೋಟೋವೊಂದನ್ನೂ ಶೇರ್ ಮಾಡಿದ್ದೆ. ಹಾಗೇ, ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಪರವಾಗಿ ಪೋಸ್ಟ್ ಹಾಕಿದ್ದೆ. ಅಷ್ಟೇ ಅಲ್ಲ, ಇನ್ನೂ ಕೆಲವು ಮಾನವ ಹಕ್ಕು ವಿಚಾರಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೆ. ಅಷ್ಟೇ ಅಲ್ಲ, ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು ಎಂದು ನಾನು ರೈತರಿಗೆ ಭರವಸೆ ನೀಡಿದ್ದ ವಿಡಿಯೋ ಅತ್ಯಂತ ಹೆಚ್ಚಿನ ಸಂಖ್ಯೆಯ ವೀಕ್ಷಣೆಯನ್ನೂ ಕಂಡಿತ್ತು. ಇದೆಲ್ಲದರ ಕಾರಣಕ್ಕೆ ಕೇಂದ್ರ ಸರ್ಕಾರ ಟ್ವಿಟರ್ ಮೇಲೆ ಪ್ರಭಾವ ಬೀರಿ, ನನ್ನ ಫಾಲೋವರ್ಸ್ ಸಂಖ್ಯೆಯನ್ನು ಸೀಮಿತಗೊಳಿಸುವಂತೆ ಮಾಡಿದೆ ಎಂದೂ ರಾಹುಲ್ ಗಾಂಧಿ ಆರೋಪಿಸಿದ್ದರು.
ಇದೀಗ ರಾಹುಲ್ ಗಾಂಧಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ 2 ಕೋಟಿಗೆ ಏರಿದ್ದರ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ರಾಹುಲ್ ಗಾಂಧಿಯವರು ಟ್ವಿಟರ್ ಸಿಇಒಗೆ ಪತ್ರ ಬರೆದ ಬಳಿಕ ಅವರ ಫಾಲೋವರ್ಸ್ ಸಂಖ್ಯೆ ಏರಿದೆ. ಅಂದರೆ ಅವರ ಟ್ವಿಟರ್ ಅಕೌಂಟ್ನ ಫಾಲೋವರ್ಸ್ ಲೆಕ್ಕಾಚಾರವನ್ನು ಟ್ವಿಟರ್ ಫ್ರೀಜ್ ಮಾಡಿತ್ತು ಎಂಬುದು ಸಾಬೀತಾಯಿತು. ಹೀಗೆ ಮಾಡಲು ಬಾಹ್ಯ ಪ್ರಭಾವವೇ ಕಾರಣ ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ದೂಷಿಸಿದೆ.
ಇದನ್ನೂ ಓದಿ: ಹೃತಿಕ್ ರೋಷನ್ಗೂ ಅಚ್ಚರಿ ಮೂಡಿಸಿತು 67 ವರ್ಷದ ನಟ ಅನುಪಮ್ ಖೇರ್ ಫಿಟ್ನೆಸ್; ಇಲ್ಲಿದೆ ಫೋಟೋ