ದೆಹಲಿ: ಕೊರೊನಾ ಸೋಂಕು ವಿರುದ್ಧದ ಲಸಿಕೆಗೆ ಕೊರತೆ ಇರುವಾಗ, ಟ್ವಿಟರ್ನಲ್ಲಿ ಬ್ಲೂ ಟಿಕ್ ವಿಚಾರವಾಗಿ ಚರ್ಚೆಯಲ್ಲಿ ತೊಡಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಲಸಿಕೆ ಹಾಗೂ ಟ್ವಿಟರ್ ಬ್ಲೂ ಟಿಕ್ ಬಗ್ಗೆ ವ್ಯಂಗ್ಯವಾಗಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಯಾರಿಗಾದರೂ ಕೊವಿಡ್ ಲಸಿಕೆ ಬೇಕಾದರೆ ಅವರು ಆತ್ಮನಿರ್ಭರರಾಗಿ ಇರಬೇಕಷ್ಟೆ. ಸ್ವಾವಲಂಬಿಯಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ನಲ್ಲಿ ಬ್ಲೂ ಟಿಕ್ಗಾಗಿ ಜಗಳಾಡುವುದರಲ್ಲಿ ತೊಡಗಿದೆ ಎಂದು ಟೀಕಿಸಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಹಾಗೂ ಇನ್ನಿತರ ಕೆಲ ನಾಯಕರ ಟ್ವಿಟರ್ ಖಾತೆಯ ಬ್ಲೂ ಟಿಕ್ನ್ನು ಟ್ವಿಟರ್ ಸಂಸ್ಥೆ ತೆಗೆದಿತ್ತು. ಕೇಂದ್ರ ಸರ್ಕಾರ, ಹೊಸ ನಿಯಮಾವಳಿಗಳನ್ನು ಅನುಮೋದಿಸುವಂತೆ ಟ್ವಿಟರ್ಗೆ ಅಂತಿಮ ಸೂಚನೆ ಕೊಟ್ಟಿತ್ತು. ಆ ಬಳಿಕ ಈ ಘಟನೆಗಳು ನಡೆದಿದ್ದವು.
ब्लू टिक के लिए मोदी सरकार लड़ रही है-
कोविड टीका चाहिए तो आत्मनिर्भर बनो!#Priorities— Rahul Gandhi (@RahulGandhi) June 6, 2021
ಬ್ಲೂ ಟಿಕ್, ಆಯಾ ಟ್ವಿಟರ್ ಖಾತೆ ಅಧಿಕೃತ ಎಂದು ಸೂಚಿಸಲು ಬಳಸುವ ಮಾನದಂಡವಾಗಿದೆ. ಸದ್ಯ ಭಾರತದಲ್ಲಿ ಒಟ್ಟು 23,13,22,417 ಡೋಸ್ ಲಸಿಕೆ ನೀಡಿಕಡಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ವರ್ಷದ ಡಿಸೆಂಬರ್ ಒಳಗಾಗಿ 108 ಕೋಟಿ ಭಾರತೀಯರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಹೇಳಿಕೆ ನೀಡಿದೆ.
ಆರ್ಎಸ್ಎಸ್ನ ನಾಯಕ ಮೋಹನ್ ಭಾಗವತ್, ಸುರೇಶ್ ಜೋಶಿ, ಅರುಣ್ ಕುಮಾರ್, ಕೃಷ್ಣನ್ ಗೋಪಾಲ್ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲೂಟಿಕ್ಗಳು ನಿನ್ನೆ (ಜೂನ್ 5) ಬೆಳಗ್ಗೆ ಮಾಯವಾಗಿತ್ತು. ಈ ಬಗ್ಗೆ ನಾವು ಟ್ವಿಟರ್ಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ರಾಜೀವ್ ತುಳಿ ಎಂಬುವರು ಟ್ವೀಟ್ ಮಾಡಿದ್ದರು. ಟ್ವಿಟರ್ನಲ್ಲಿ ಯಾವುದೇ ಗಣ್ಯರು ಈ ಬ್ಲೂಟಿಕ್ ಪಡೆಯಬೇಕು ಎಂದರೆ ಅವರು ಅದರಲ್ಲಿ ಸಕ್ರಿಯರಾಗಿರಬೇಕು. ಅವರದ್ದೇ ಅಧಿಕೃತ ಖಾತೆ ಎಂದು ದೃಢೀಕರಿಸಬೇಕು. ಆದರೆ ಇತ್ತೀಚೆಗೆ ಟ್ವಿಟರ್ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳು ತುಂಬದಿನಗಳಿಂದ ಬಳಕೆಯಾಗಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅಂಥ ಟ್ವಿಟರ್ ಖಾತೆಗಳ ದೃಢೀಕರಣ ಬ್ಯಾಡ್ಜ್ಗಳನ್ನು ತೆಗೆದುಹಾಕಿದೆ.
ಇನ್ನು ಯಾವುದೇ ಅಕೌಂಟ್ಗೆ ಬ್ಲೂಟಿಕ್ ಕೊಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಯಾಡ್ಜ್ನ್ನು ತೆಗೆದುಹಾಕಲಾಗುವುದು ಎಂದು ಟ್ವಿಟರ್ ತನ್ನ ವೆರಿಫಿಕೇಶನ್ ನಿಯಮದಲ್ಲೇ ಉಲ್ಲೇಖಿಸಿದೆ. ಈಗ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯ ಬ್ಲೂಟಿಕ್ ತೆಗೆದುಹಾಕಿದ್ದ ಟ್ವಿಟರ್, ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಮತ್ತೆ ನೀಡಿತ್ತು.
ಇದನ್ನೂ ಓದಿ: ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ಅರ್ಥಮಾಡಿಕೊಂಡಿಲ್ಲ; ಲಸಿಕಾ ಅಭಿಯಾನ ಸಮರ್ಪಕವಾಗಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ
ಮೋಹನ್ ಭಾಗವತ್ ಸೇರಿ ಆರ್ಎಸ್ಎಸ್ನ ಪ್ರಮುಖ ನಾಯಕರ ಟ್ವಿಟರ್ ಖಾತೆಯ ಬ್ಲ್ಯೂಟಿಕ್ ಕೂಡ ಮಾಯ..!
Published On - 4:43 pm, Sun, 6 June 21