2006ರಲ್ಲಿ ನಡೆದಿದ್ದ ಆ ದುರಂತದ ಬಗ್ಗೆ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದಕ್ಕೆ ಪತ್ರಕರ್ತನ ವಿರುದ್ಧ ಎಫ್ಐಆರ್..
ಸಜೀದ್ ರೈನಾ ಶ್ರೀನಗರ ಮೂಲದ ಸುದ್ದಿ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸ್ಟೇಟಸ್ ಹಾಕಿದ ಬಳಿಕ ಅವರಿಗೆ ಪೊಲೀಸರು ಕರೆಮಾಡಿದ್ದರು. ಪೊಲೀಸರು ಕರೆ ಮಾಡುತ್ತಿದ್ದಂತೆ ತಮ್ಮ ಸ್ಟೇಟಸ್ನ್ನು ಡಿಲೀಟ್ ಮಾಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ 23 ವರ್ಷದ ಪತ್ರಕರ್ತನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಎಫ್ಐಆರ್ ದಾಖಲಿಸಿದ್ದಾರೆ. ಆತ 2006ರಲ್ಲಿ ನಡೆದಿದ್ದ ಘಟನೆಯೊಂದರ ಬಗ್ಗೆ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದೇ ಇದಕ್ಕೆ ಕಾರಣ. 15ವರ್ಷಗಳ ವಾಲೂರು ಸರೋವರದಲ್ಲಿ ನಡೆದ ದೋಣಿ ದುರಂತದಲ್ಲಿ 22 ಮಕ್ಕಳು ಮೃತಪಟ್ಟಿದ್ದರು. ಅದರ ಫೋಟೋ ಹಾಕಿದ್ದ ಬಂಡೀಪೋರಾದ ಪತ್ರಕರ್ತ, ವಾಲೂರು ಲೇಕ್ ಹುತಾತ್ಮರು ಎಂದು ಹಾಕಿದ್ದರು. ಅದೇ ಈಗ ಅವರ ವಿರುದ್ಧ ಕೇಸ್ ದಾಖಲಾಗಲೂ ಕಾರಣ.
ಈ ಪತ್ರಕರ್ತನ ಹೆಸರು ಸಜೀದ್ ರೈನಾ. ಇವರು ಮೇ 30ರಂದು ವಾಲೂರು ದೋಣಿ ದುರಂತಕ್ಕೆ ಸಂಬಂಧಪಟ್ಟ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದರು. ಈಗ್ಯಾಕೆ ಮತ್ತೆ ಆ ದುರಂತದ ಫೋಟೋ ಹಾಕಿದ್ದಾರೆ ಎಂಬುದು ತನಿಖಾರ್ಹವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ. ಹಾಗಾಗಿ ವಿಚಾರಣೆ ಅಗತ್ಯವಿದೆ ಎಂದು ಬಂಡಿಪೋರಾ ಠಾಣೆ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಸಜೀದ್ ರೈನಾ ಶ್ರೀನಗರ ಮೂಲದ ಸುದ್ದಿ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸ್ಟೇಟಸ್ ಹಾಕಿದ ಬಳಿಕ ಅವರಿಗೆ ಪೊಲೀಸರು ಕರೆಮಾಡಿದ್ದರು. ಪೊಲೀಸರು ಕರೆ ಮಾಡುತ್ತಿದ್ದಂತೆ ತಮ್ಮ ಸ್ಟೇಟಸ್ನ್ನು ಡಿಲೀಟ್ ಮಾಡಿದ್ದಾರೆ. ವಾಲೂರು ದೋಣಿ ದುರಂತಕ್ಕೆ ಮೇ 30ರಂದು ಸರಿಯಾಗಿ 15 ವರ್ಷ ತುಂಬಿತ್ತು. ಹಾಗಾಗಿ ಅದರಲ್ಲಿ ಮೃತಪಟ್ಟ ಮಕ್ಕಳ ಫೋಟೋವನ್ನು ವಾಟ್ಸ್ಆ್ಯಪ್ ಸ್ಟೇಟಸ್ಗೆ ಹಾಕಿದ್ದೆ. ಸಂಜೆ ಹೊತ್ತಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿದರು. ನಾನು ಸ್ಟೇಟಸ್ ಹಾಕಿದ್ದರ ಹಿಂದೆ ಯಾವುದೇ ಬೇರೆ ಉದ್ದೇಶವಿಲ್ಲ ಎಂದು ಕ್ಷಮೆ ಕೇಳಿದೆ. ಕೇವಲ 20 ಜನರಷ್ಟೇ ನೋಡಿದ್ದಾಗ ನಾನು ಅದನ್ನು ಡಿಲೀಟ್ ಮಾಡಿದ್ದೆ ಎಂದು ಪತ್ರಕರ್ತ ತಿಳಿಸಿದ್ದಾರೆ. ನಾನಂದುಕೊಂಡೆ ಆ ವಿಷಯ ಅಲ್ಲಿಗೇ ಮುಗಿಯಿತೆಂದು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂಬುದು ಎರಡು ದಿನಗಳ ಬಳಿಕವಷ್ಟೇ ಗೊತ್ತಾಯಿತು ಎಂದು ಹೇಳಿಕೊಂಡಿದ್ದಾರೆ.
ಏನಾಗಿತ್ತು 2006ರಲ್ಲಿ? 2006ರ ಮೇ 30ರಂದು ಹಂದ್ವಾರಾದಲ್ಲಿರುವ ಬರ್ನಿಂಗ್ ಕ್ಯಾಂಡಲ್ ಸ್ಕೂಲ್ನ ಮಕ್ಕಳು ವಾಲೂರು ನದಿ ದಡಕ್ಕೆ ಪಿಕ್ನಿಕ್ಗೆ ಹೋಗಿದ್ದರು. ಅದರಲ್ಲಿ ಒಂದು ಗುಂಪು ಸರೋವರದಲ್ಲಿ ಬೋಟಿಂಗ್ಗೆ ಹೋದಾಗ ದೋಣಿ ಮಗುಚಿ 22 ಮಕ್ಕಳು ಮೃತಪಟ್ಟಿದ್ದರು. ಅವತ್ತು ಬೋಟಿಂಗ್ಗೆ ಕರೆದುಕೊಂಡು ಹೋಗಿದ್ದು ನೌಕಾಪಡೆಯ ಮಾರ್ಕೋಸ್ ಬೋಟ್ ಆಗಿತ್ತು. ಅಂದು ಮೃತಪಟ್ಟವರೆಲ್ಲ 10 ವರ್ಷದ ಒಳಗಿನ ಮಕ್ಕಳೇ ಆಗಿದ್ದರು. ಹೀಗೆ ಮೃತಪಟ್ಟವರ ನೆನಪಲ್ಲಿ ನೌಕಾದಳ, ಹಂದ್ವಾರಾದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಿಭಾಗವನ್ನು ಸ್ಥಾಪಿಸಿದೆ.
ಇದನ್ನೂ ಓದಿ: ಲಾಕ್ಡೌನ್ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ
Published On - 5:14 pm, Sun, 6 June 21