ಲಾಕ್ಡೌನ್ನಿಂದ ಬೆಳೆದ ಬೆಳೆಗೆ ಬೆಲೆ ಇಲ್ಲ; ಹೊಲದಲ್ಲಿಯೇ ಬದನೆಕಾಯಿಯನ್ನು ನಾಶ ಮಾಡಿದ ಬೆಳಗಾವಿ ರೈತ
ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ಕಠಿಣ ಲಾಕ್ಡೌನ್ ಮಾಡಿರುವ ಕಾರಣಕ್ಕೆ ಮೂರು ದಿನಗಳಲ್ಲಿ ಸಾಕಷ್ಟು ತರಕಾರಿ ಬೆಳೆಗಳು ಜಮೀನಿನಲ್ಲೆ ಕೊಳೆಯುವ ಪರಿಸ್ಥಿತಿ ಇದೆ. ಉಳಿದ ನಾಲ್ಕು ದಿನಗಳಲ್ಲಿ ಮಾರುಕಟ್ಟೆಗೆ ಬೆಳೆ ಸಾಗಿಸಿ ಅಲ್ಲಿ ದಲ್ಲಾಳಿಗಳಿಗೆ ಹಣ ಕೊಟ್ಟು ಬೆಳೆ ಮಾರಾಟ ಮಾಡಿದರೆ ಎರಡು, ಮೂರು ರೂಪಾಯಿ ಕೆಜಿಗೆ ಬದನೆಕಾಯಿ ಮಾರಾಟವಾಗುತ್ತದೆ ಎಂದು ಬೆಳೆ ನಾಶ ಮಾಡಿದ ರೈತ ಬಸವರಾಜ್ ರಾಮನ್ನವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಕೊರೊನಾ ಎರಡನೇ ಅಲೆಯ ಹೆಚ್ಚಳವನ್ನು ತಡೆಯಲು ಲಾಕ್ಡೌನ್ ಘೋಷಿಸಲಾಗಿದೆ. ಈ ಲಾಕ್ಡೌನ್ನಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ. ಆದರೆ ರೈತರು, ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ಇದರಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆ ಸಾಗಿಸಲು ಆಗದೆ, ಹೇಗೋ ಮಾರುಕಟ್ಟೆಗೆ ಕೊಂಡೋಯ್ದರು ಕೊಳ್ಳುವವರು ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಇಂತಹದ್ದೇ ಪರಿಸ್ಥಿತಿ ಸದ್ಯ ಬೆಳಗಾವಿ ಜಿಲ್ಲೆಯ ರೈತರದ್ದಾಗಿದ್ದು, ಸಾಕಷ್ಟು ಖರ್ಚು ಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದಾರೆ.
ಬೆಳಗಾವಿ ತಾಲೂಕಿನ ಕೆ.ಕೆ ಕೊಪ್ಪ ಗ್ರಾಮದಲ್ಲಿ ತರಕಾರಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಅದರಲ್ಲೂ ಬದನೆಕಾಯಿಯನ್ನೇ ಹೆಚ್ಚಾಗಿ ರೈತರು ಬೆಳೆಯುತ್ತಾರೆ. ಈ ಗ್ರಾಮದಲ್ಲೇ ಸುಮಾರು ಇನ್ನೂರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬದನೆಕಾಯಿಯನ್ನು ಬೇರೆ ಬೇರೆ ರೈತರು ಬೆಳೆದಿದ್ದರು. ಯಾವಾಗ ಮಾರುಕಟ್ಟೆಯಲ್ಲಿ ಬದನೆಗೆ ದರ ಬಿದ್ದು ಹೋಯ್ತೋ ಆಗಲೇ ಸಾಕಷ್ಟು ರೈತರು ತಮ್ಮ ಜಮೀನಿನಲ್ಲಿದ್ದ ಬದನೆಕಾಯಿ ಬೆಳೆಯನ್ನು ನಾಶ ಪಡಿಸಿ ಬೇರೆ ಬೆಳೆ ಬೆಳೆಯಲು ತಯಾರಿ ಮಾಡಿಕೊಂಡರು. ಇನ್ನೂ ಇದೇ ಗ್ರಾಮದ ರೈತ ಬಸವರಾಜ್ ರಾಮನ್ನವರ್ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬದನೆಕಾಯಿಯನ್ನು ಇಂದು ರಂಟೆ ಹೊಡೆಸುವುದರ ಮೂಲಕ ನಾಶ ಮಾಡಿದ್ದಾರೆ. ಕಿತ್ತ ಬದನೆ ಗಿಡವನ್ನು ಜಮೀನಿನ ಬದುವಿನ ಮೇಲೆ ಹಾಕಿ ಮುಂದಿನ ಬೆಳೆ ಬೆಳೆಯಲು ತಯಾರಿ ಮಾಡಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ಕಠಿಣ ಲಾಕ್ಡೌನ್ ಮಾಡಿರುವ ಕಾರಣಕ್ಕೆ ಮೂರು ದಿನಗಳಲ್ಲಿ ಸಾಕಷ್ಟು ತರಕಾರಿ ಬೆಳೆಗಳು ಜಮೀನಿನಲ್ಲೆ ಕೊಳೆಯುವ ಪರಿಸ್ಥಿತಿ ಇದೆ. ಉಳಿದ ನಾಲ್ಕು ದಿನಗಳಲ್ಲಿ ಮಾರುಕಟ್ಟೆಗೆ ಬೆಳೆ ಸಾಗಿಸಿ ಅಲ್ಲಿ ದಲ್ಲಾಳಿಗಳಿಗೆ ಹಣ ಕೊಟ್ಟು ಬೆಳೆ ಮಾರಾಟ ಮಾಡಿದರೆ ಎರಡು, ಮೂರು ರೂಪಾಯಿ ಕೆಜಿಗೆ ಬದನೆಕಾಯಿ ಮಾರಾಟವಾಗುತ್ತದೆ ಎಂದು ಬೆಳೆ ನಾಶ ಮಾಡಿದ ರೈತ ಬಸವರಾಜ್ ರಾಮನ್ನವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಬದನೆಕಾಯಿ ಬೆಳೆಯಲು ಒಂದು ಎಕರೆಗೆ ಇಪ್ಪತ್ತು ಸಾವಿರದ ವರೆಗೆ ಖರ್ಚು ಮಾಡಿರುತ್ತಾರೆ. ಇತ್ತ ಬೆಳೆ ಕಟಾವು ಮಾಡಲು, ಸಾಗಿಸುವ ವೆಚ್ಚ ಸೇರಿದಂತೆ, ರೈತರಿಗೆ ಮತ್ತೆ ಹಾನಿಯಾಗುತ್ತಿದೆ. ಹೊರತು ಒಂದು ರೂಪಾಯಿ ಕೂಡ ಲಾಭ ಬರುತ್ತಿಲ್ಲ. ಲಾಕ್ಡೌನ್ಗೂ ಮುನ್ನ ಕೆ.ಜಿಗೆ ಹದಿನೈದರಿಂದ ಇಪ್ಪತ್ತು ರೂಪಾಯಿವರೆಗೆ ಸಿಗುತ್ತಿತ್ತು. ಈಗ ನೋಡಿದರೆ ಅದರ ಅರ್ಧದಷ್ಟು ಹಣ ಕೂಡ ಸಿಗುತ್ತಿಲ್ಲ. ಇನ್ನೂ ತರಕಾರಿ ಬೆಳೆಗೆ ಒಂದು ಹೆಕ್ಟೇರ್ ಹತ್ತು ಸಾವಿರ ಪರಿಹಾರ ಕೊಡುತ್ತೇವೆ ಎಂದು ಸರ್ಕಾರ ತಿಳಿಸಿದೆ. ಆದರೆ ಇದರ ಸರ್ವೆಗೆ ಬಂದ ಅಧಿಕಾರಿಗಳು ರಸ್ತೆ ಮೇಲೆ ನಿಂತು ಸರ್ವೆ ಮಾಡಿಕೊಂಡು ಹೋಗುತ್ತಿದ್ದು, ಆ ಪರಿಹಾರ ಕೂಡ ನಮಗೆ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಮತ್ತು ಅಧಿಕಾರಿಗಳ ವಿರುದ್ಧ ರೈತ ಮುಖಂಡ ರಮೇಶ್ ವಾಲಿ ಆಕ್ರೋಶ ಹೊರ ಹಾಕಿದ್ದಾರೆ.
ಒಂದು ಕಡೆ ಪೆಟ್ರೋಲ್, ಡಿಸೇಲ್ ದರ ಕೂಡ ಹೆಚ್ಚಾಗಿ ರೈತ ಜಮೀನಿನಿಂದ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲು ದುಪ್ಪಟ್ಟು ಹಣ ಖರ್ಚಾಗುತ್ತಿದೆ. ಇತ್ತ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ದರ್ಬಾರ್ಗೆ ಸಿಗುವ ಬೆಲೆ ಕೂಡ ಸಿಗುತ್ತಿಲ್ಲ. ಈ ಕಾರಣಕ್ಕೆ ಕಂಗೆಟ್ಟ ರೈತರು ಇದೀಗ ತಮ್ಮ ಜಮೀನಿನಲ್ಲೇ ಬೆಳೆದ ಬೆಳೆಯನ್ನ ನಾಶ ಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಸರಿಯಾದ ಕ್ರಮ ವಹಿಸಿ ಇಂತಹ ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಲಿ ಎನ್ನುವುದು ನಮ್ಮ ಆಶಯ.
ಇದನ್ನೂ ಓದಿ:
ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು
ಲಾಕ್ಡೌನ್ನಿಂದ ಬಾಡುತ್ತಿದೆ ರೈತರ ಬದುಕು; 80 ಸಾವಿರ ಖರ್ಚು ಮಾಡಿ ಬೆಳೆದ ಬೀಟ್ರೂಟ್ನಿಂದ 80 ರೂ. ಲಾಭವಿಲ್ಲ