ಟಿಎಂಸಿ ತೊರೆದ ಒಬ್ಬೊಬ್ಬೊರಿಗೂ ಒಂದೊಂದು ಅಸಮಾಧಾನ; ಬಿಜೆಪಿಯಿಂದ ಮರಳಿ ಮತ್ತೆ ದೀದಿ ಪಕ್ಷ ಸೇರಲು ಇನ್ನೊಬ್ಬ ಮುಖಂಡನ ಪ್ರಯತ್ನ
ಪಶ್ಚಿಮ ಬಂಗಾಳ ಚುನಾವಣೆಯ ನಂತರ ಇದೊಂದು ಪರ್ವ ಶುರುವಾಗಿದೆ. ಚುನಾವಣೆ ಪೂರ್ವ ಟಿಎಂಸಿ ತೊರೆದು ಬಿಜೆಪಿ ಸೇರಿಕೊಂಡಿದ್ದ ಹಲವರು ಅಲ್ಲಿಂದೀಗ ಮರಳುವ ಮಾತನಾಡುತ್ತಿದ್ದರೂ, ಟಿಎಂಸಿ ಪಕ್ಷ ಆ ಬಗ್ಗೆ ಇನ್ನೂ ಗಮನ ಹರಿಸಿಲ್ಲ.
ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಹೋಗಿ ಬಿಜೆಪಿ ಸೇರ್ಪಡೆಯಾದವರೆಲ್ಲ ಈಗ ಮತ್ತೆ ತಮ್ಮ ಮೊದಲಿನ ಪಕ್ಷಕ್ಕೇ ಮರಳಲು ಇಚ್ಛಿಸುತ್ತಿದ್ದಾರೆ. ಮಾಜಿ ಎಂಎಲ್ಎಗಳಾದ ಸೋನಾಲಿ ಗುಹಾ, ದೀಪೇಂದು ಬಿಸ್ವಾ ಈಗಾಗಲೇ ತಾವು ಮತ್ತೆ ಟಿಎಂಸಿಗೆ ಸೇರ್ಪಡೆಯಾಗಲು ಬಯಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಈ ಸಾಲಿಗೆ ಈಗ ಪ್ರಭೀರ್ ಘೋಸಲ್ ಕೂಡ ಸೇರಿದ್ದಾರೆ. ಇವರು ಹೂಗ್ಲಿ ಜಿಲ್ಲೆಯ ಉತ್ತಾರಪಾರಾದ ಮಾಜಿ ಶಾಸಕ. ಟಿಎಂಸಿಯನ್ನು ತೊರೆದು ಬಿಜೆಪಿಗೆ ಸೇರಿಕೊಂಡಿದ್ದರು. ಆದರೀಗ ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಪರೋಕ್ಷವಾಗಿ ವಾಪಸ್ ಟಿಎಂಸಿ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ನನ್ನ ತಾಯಿ ತೀರಿಕೊಂಡಿದ್ದಾರೆ. ಟಿಎಂಸಿ ಸಂಸದರಾದ ಕಲ್ಯಾಣ್ ಬಂಡೋಪಾಧ್ಯಾಯ, ಶಾಸಕರಾದ ಕಾಂಚನ್ ಮಲ್ಲಿಕ್ ನನಗೆ ಕರೆ ಮಾಡಿ ಸಾಂತ್ವನ ಹೇಳಿದರು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ನನಗೆ ಸಾಂತ್ವನದ ಸಂದೇಶ ಕಳಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಕೆಲವು ಸ್ಥಳೀಯ ಮುಖಂಡರಷ್ಟೇ ಸಾಂತ್ವನ ಹೇಳಿದರು. ಕರೆ ಮಾಡಿ ಮಾತನಾಡಿದರು. ಮತ್ಯಾವ ನಾಯಕರೂ ಈ ಬಗ್ಗೆ ಒಂದು ಮಾತೂ ಕೇಳಲಿಲ್ಲ. ಇದರಿಂದಾಗಿ ನನಗೆ ಸ್ವಲ್ಪ ಬೇಸರವಾಗಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯ ನಂತರ ಇದೊಂದು ಪರ್ವ ಶುರುವಾಗಿದೆ. ಚುನಾವಣೆ ಪೂರ್ವ ಟಿಎಂಸಿ ತೊರೆದು ಬಿಜೆಪಿ ಸೇರಿಕೊಂಡಿದ್ದ ಹಲವರು ಅಲ್ಲಿಂದೀಗ ಮರಳುವ ಮಾತನಾಡುತ್ತಿದ್ದರೂ, ಟಿಎಂಸಿ ಪಕ್ಷ ಆ ಬಗ್ಗೆ ಇನ್ನೂ ಗಮನ ಹರಿಸಿಲ್ಲ. ಇದು ಮುಖ್ಯಮಂತ್ರಿ, ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಯವರಿಗೆ ಬಿಟ್ಟ ವಿಚಾರ. ಅವರೇ ನಿರ್ಧಾರ ಮಾಡಬೇಕು ಎಂದು ಟಿಎಂಸಿಯ ಕೆಲವು ಪ್ರಮುಖ ಮುಖಂಡರು ಹೇಳಿಬಿಟ್ಟಿದ್ದಾರೆ.
ಇದು ಮೊದಲು ಶುರುವಾಗಿದ್ದು, ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಪ್ರಮುಖ ನಾಯಕಿ ಸೋನಾಲಿ ಗುಹಾರಿಂದ. ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಭಾವನಾತ್ಮಕ ಪೋಸ್ಟ್ ಕೂಡ ಹಾಕಿದ್ದರು. ಮೀನು ಹೇಗೆ ನೀರಿಲ್ಲದೆ ಬದುಕುವುದಿಲ್ಲವೋ, ನಾನೂ ಕೂಡ ಮಮತಾ ಬ್ಯಾನರ್ಜಿಯವರನ್ನು ಬಿಟ್ಟು ಬದುಕಲಾರೆ ಎಂದು ಬರೆದುಕೊಂಡಿದ್ದರು. ಅಲ್ಲದೆ, ಟಿಎಂಸಿ ತೊರೆದು ಹೋಗಿ, ಬಿಜೆಪಿ ಸೇರ್ಪಡೆಯಾದ ಬಗ್ಗೆ ಪಶ್ಚಾತ್ತಾಪ ಖಂಡಿತ ಇದೆ ಎಂದೂ ಹೇಳಿಕೊಂಡಿದ್ದರು.
ಇದನ್ನೂ ಓದಿ:ರಸ್ತೆ ಅಗಲೀಕರಣದ ನೆಪದಲ್ಲಿ ನೂರಾರು ಮರಗಳ ಹನನ; ಬೀದರ್ ಜಿಲ್ಲೆಯ ರೈತರಿಂದ ಆಕ್ರೋಶ
Ex TMC leader Prabir Ghosal express his unhappiness about BJP In West Bengal