ಜೈಪುರ: ರಾಜಸ್ಥಾನ ಕಾಂಗ್ರೆಸ್ ಸರ್ಕಾರ (Rajasthan Government) ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಆರೋಪ ಮಾಡಿದ್ದು, ಸಿಎಂ ಅಶೋಕ್ ಗೆಹ್ಲೋಟ್ರಿಗೆ (CM Ashok Gehlot) ತೀವ್ರ ಮುಜುಗರ ತಂದಿದೆ. ಬಜೆಟ್ ಅಧಿವೇಶನದ (Budget Session) ವೇಳೆ ಮಾತನಾಡಿದ ರಾಜಸ್ಥಾನ ಕಾಂಗ್ರೆಸ್ ಶಾಸಕ ಅಮೀನ್ ಖಾನ್, ರಾಜ್ಯದಲ್ಲಿ ಶೇ.95ರಷ್ಟು ಮುಸ್ಲಿಮರು ಮತದಾನ ಮಾಡುತ್ತಾರೆ ಮತ್ತು ಅದರಲ್ಲಿ ಶೇ.99ರಷ್ಟು ಜನರು ಕಾಂಗ್ರೆಸ್ಗೇ ಮತ ಹಾಕುತ್ತಾರೆ. ಆದರೆ ರಾಜ್ಯದಲ್ಲಿ ಮುಸ್ಲಿಮರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ತನ್ನ ಹಳೇ ಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಇಲ್ಲದೆ ಹೋದರೆ ಕಷ್ಟಪಡಬೇಕಾಗುತ್ತದೆ ಎಂದೂ ಹೇಳಿದ್ದಾರೆ. ಇನ್ನು ತನ್ನ ಕ್ಷೇತ್ರಕ್ಕೆ ಹೊಸ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡದೆ ಇರುವುದಕ್ಕೆ ಮುಖ್ಯಮಂತ್ರಿ ಗೆಹ್ಲೋಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಮಂಡನೆಯಾಗಿರುವ ಬಜೆಟ್ನ್ನು ನಾನು ಅಧ್ಯಯನ ಮಾಡಿದೆ. ನನ್ನ ಏರಿಯಾ ಹೊರತು ಪಡಿಸಿ ಉಳಿದಕಡೆಗಳಲ್ಲಿ ಎಲ್ಲ ಹೊಸ ರಸ್ತೆ ನಿರ್ಮಾಣ ಘೋಷಿಸಲಾಗಿದೆ. ಮೊದಲೆಲ್ಲ ಈ ಬಗ್ಗೆ ಜನರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಜನರಿಗೂ ಅರ್ಥವಾಗುತ್ತದೆ ಎಂದು ಹೇಳಿರುವ ಅಮೀನ್ ಖಾನ್, ನಾನು ನನ್ನ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗಾಗಿ ಎರಡು ವಸತಿ ಶಾಲೆ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿ ಗೆಹ್ಲೋಟ್ರ ಬಳಿ ಮನವಿ ಮಾಡಿದ್ದೆ. ಆದರೆ ಎರಡು ಬಿಡಿ, ಒಂದು ಶಾಲೆ ನಿರ್ಮಾಣಕ್ಕೂ ಅವರು ಅನುಮೋದನೆ ನೀಡಿಲ್ಲ. ರಾಜಸ್ಥಾನ ಸರ್ಕಾರದಲ್ಲಿ ಇಬ್ಬರು ಮುಸ್ಲಿಂ ಸಚಿವರು ಇದ್ದಾರೆ. ಅವರಿಬ್ಬರಿಗೂ ಒಳ್ಳೆಯ ಖಾತೆ ಸಿಗಲಿಲ್ಲ ಎಂದೂ ಆರೋಪ ಮಾಡಿದ್ದಾರೆ.
ಫೆ.23ರಂದು ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಬಜೆಟ್ ಮಂಡನೆ ಬಳಿಕ 200 ಶಾಸಕರಿಗೆ ಐಫೋನ್ ನೀಡಲಾಗಿತ್ತು. ಆದರೆ ಬಿಜೆಪಿ ಶಾಸಕರು ಆ ಐಫೋನ್ನ್ನು ವಾಪಸ್ ನೀಡಿದ್ದಾರೆ. ಇದು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ನಮಗೆ ಐಫೋನ್ ಬೇಡ ಎಂದು ಹೇಳಿದ್ದರು. ಬಿಜೆಪಿ ಶಾಸಕರು ಐಫೋನ್ ಹಿಂದಿರುಗಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಸರ್ಕಾರದ ಉಪ ಮುಖ್ಯ ಸಚೇತಕ ಮಹೇಂದ್ರ ಚೌಧರಿ ಮಾತನಾಡಿ, ಈಗ ಐಫೋನ್ ಹಿಂದಿರುಗಿಸುತ್ತಿರುವ ಬಿಜೆಪಿ ಶಾಸಕರು ಹಿಂದೆ ನಮ್ಮ ಸರ್ಕಾರದಿಂದ ಪಡೆದ ಫ್ಲ್ಯಾಟ್ ಮತ್ತು ಐಪ್ಯಾಡ್ಗಳನ್ನೂ ಹಿಂದಿರುಗಿಸಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಏಣಿಕೆ; ಎರಡು ತಿಂಗಳಲ್ಲಿ 2 ಕೋಟಿ ರೂ. ಹಣ ಸಂಗ್ರಹ
Published On - 9:17 am, Sat, 26 February 22