ಕಾಂಗ್ರೆಸ್ ಸಂಸದ ಶಶಿ ತರೂರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರು ಮತ್ತು ತುಸು ಸೆಲ್ಪಿ ಫೋಟೋ ಪ್ರಿಯರು. ಇದೀಗ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸೆಲ್ಪೀ ತೆಗೆದುಕೊಂಡು, ಆ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಲ್ಲದೆ, ಜೈಶಂಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಯಾವುದಾದರೂ ಹೀರೋಯಿನ್ಗಳ ಜತೆ, ಮಾಡೆಲ್ ಜತೆ ಫೋಟೋ ತೆಗೆಸಿಕೊಂಡೋ, ಮಹಿಳೆಯರೊಂದಿಗೆ ಫೋಟೋಕ್ಕೆ ಪೋಸ್ ಕೊಟ್ಟೋ..ಟ್ರೋಲ್ ಆಗುತ್ತಿದ್ದ ಶಶಿ ತರೂರ್ ಈ ಬಾರಿ ವಿಭಿನ್ನವಾಗಿ ಸುದ್ದಿಯಾಗಿದ್ದಾರೆ.
ಯಾಕೆ ಹೊಗಳಿದ್ದಾರೆ ಎಂದು ಹೇಳುವುದಕ್ಕೂ ಮೊದಲು ಒಂದು ಸಣ್ಣ ಹಿನ್ನೆಲೆ ಹೇಳಬೇಕು. ಭಾರತದ ವಿದೇಶಾಂಗ ನೀತಿಯಲ್ಲಿ ಅಲಿಪ್ತ ನೀತಿ ಎಂಬುದು ಒಂದು ಪ್ರಮುಖ ತತ್ವ. ಅಂದು ಎರಡನೇ ವಿಶ್ವ ಯುದ್ಧದ ಬಳಿಕ ವಿಶ್ವ ಎರಡು ಶಕ್ತಿಶಾಲಿ ಬಣಗಳಾದಾಗ (ಅಮೆರಿಕ ಸಂಯುಕ್ತ ಸಂಸ್ಥಾನ ನೇತೃತ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಬಣ ಮತ್ತು ರಷ್ಯಾ ಸೋವಿಯತ್ ಒಕ್ಕೂಟ ನೇತೃತ್ವದ ಕಮ್ಯೂನಿಷ್ಟ್ ಬಣ) ಭಾರತ ಯಾವುದೇ ಬಣಕ್ಕೆ ಸೇರದೆ ಅಲಿಪ್ತವಾಗಿತ್ತು. ಅಂದಿನಿಂದಲೂ ಬಹುತೇಕ ಪ್ರಮುಖ ಹಂತಗಳಲ್ಲೆಲ್ಲ ಭಾರತ ಅಲಿಪ್ತ ನೀತಿಯನ್ನೇ ಅನುಸರಿಸಿತು. ಇದಕ್ಕೆ Non Alignments ಎಂದು ಕರೆಯಲಾಗುತ್ತಿತ್ತು. ಭಾರತದ ವಿದೇಶಾಂಗ ನೀತಿ ಅಲಿಪ್ತ ನೀತಿಯಿಂದ, ಸಮತೋಲಿತ ನೀತಿಯಾಗಿ (Multi -Alignments) ಬದಲಾಗಬೇಕು ಎಂದು ಈಗೊಂದು 15ವರ್ಷಗಳ ಹಿಂದೆ ಶಶಿ ತರೂರ್ ಪ್ರಸ್ತಾಪ ಮಾಡಿದ್ದರು. ಅಂದರೆ 21 ಶತಮಾನದಲ್ಲಿ ಅಲಿಪ್ತ ನೀತಿ ಕೆಲಸ ಮಾಡುವುದಿಲ್ಲ. ಇದು ಮಹತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಭಾರತವೂ ಕೂಡ Non Alignments ನಿಂದ Multi -Alignments ಕಡೆಗೆ ಸಾಗಬೇಕು. ಅಂದರೆ ಅಲಿಪ್ತವಾಗಿರುವುದಕ್ಕಿಂತ ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಂಡು, ಸಮತೋಲಿತ ಸ್ನೇಹ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದರು. ಅಂತೆಯೇ ಈಗೀಗ ಭಾರತ ಅದೇ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ಅಲಿಪ್ತ ನೀತಿಯನ್ನು ಸಂಪೂರ್ಣವಾಗಿ ಬಿಡದೆ ಹೋದರೂ ಮಲ್ಟಿ ಅಲೈನ್ಮೆಂಟ್ ನೀತಿಯನ್ನೂ ಪ್ರದರ್ಶಿಸುತ್ತಿದೆ.
ಈಗ ಇದೇ ವಿಚಾರಕ್ಕೆ ಸಂಬಂಧಪಟ್ಟು ಜೈಶಂಕರ್ ಅವರನ್ನು ಶಶಿ ತರೂರ್ ಹೊಗಳಿದ್ದಾರೆ. ದೆಹಲಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ ರೈಸಿನಾ ಡೈಲಾಗ್ ಕಾನ್ಫರೆನ್ಸ್ನಲ್ಲಿ ಎಸ್.ಜಶಂಕರ್ ಅವರು ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವಾಗ ಮಲ್ಟಿ ಅಲೈನ್ಮೆಂಟ್ ನೀತಿ ಬಗ್ಗೆ ಪ್ರಸ್ತಾಪ ಮಾಡಿದ್ದಲ್ಲದೆ, ಇದನ್ನು ಮೊದಲು ಪ್ರಸ್ತಾಪ ಮಾಡಿದ್ದು ಶಶಿ ತರೂರ್ ಎಂದೂ ಹೇಳಿದ್ದಾರೆ. ಇದರಿಂದಾಗಿ ಫುಲ್ ಖುಷಿಯಾದ ಶಶಿ ತರೂರ್, ಜೈಶಂಕರ್ ಜತೆಗೆ ಸೆಲ್ಫೀ ತೆಗೆದುಕೊಂಡು, ಭಾರತ ವಿದೇಶಾಂಗ ನೀತಿಯಲ್ಲಿ ಸೌಹಾರ್ದ, ಸಮತೋಲನ (Multi-alignment) ಸಂಬಂಧ ಬೆಳೆಸಿಕೊಳ್ಳುವ ಅಂಶಗಳನ್ನು ಸೇರಿಸಿಕೊಳ್ಳಬೇಕು ಎಂಬ ಅಂಶವನ್ನು 15ವರ್ಷಗಳ ಹಿಂದೆ ಪ್ರಸ್ತಾಪಿಸಿದ್ದೆ. ಆಗ ಅದನ್ನು ಹೆಚ್ಚಾಗಿ ಯಾರೂ ಒಪ್ಪಿಕೊಂಡಿರಲಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ನನ್ನ ಕಲ್ಪನೆ ಒಪ್ಪಿದ್ದರು. ಆದರೆ ಇಂದು ಜೈಶಂಕರ್ ಅವರು ಕಾನ್ಫರೆನ್ಸ್ನಲ್ಲಿ ಮಲ್ಟಿ ಅಲೈನ್ಮೆಂಟ್ ಬಗ್ಗೆ ಮಾತನಾಡುವಾಗ ಆ ಪರಿಕಲ್ಪನೆ ನನ್ನದು ಎಂಬುದನ್ನು ಬಹಿರಂಗವಾಗಿ ಹೇಳಿ, ನನಗೆ ಮನ್ನಣೆ ಸಿಗುವಂತೆ ಮಾಡಿದರು. ಇದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.
Thanks @DrSJaishankar for publicly giving me credit for the term “Multi-alignment“ which I floated 15 years ago gwithout many takers)! Stimulating exchange between our EAM & @samirsaran at #RaisinaDialogue2022 on the wider dimensions of our foreign policy pic.twitter.com/C76LgP2ptq
— Shashi Tharoor (@ShashiTharoor) April 26, 2022
ಇದನ್ನೂ ಓದಿ: ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ; ಎತ್ತಿಗೆ ಮುತ್ತಿಟ್ಟ ಸಿಎಂ ಬೊಮ್ಮಾಯಿ