ನವದೆಹಲಿ: ಹರಿಯಾಣದ (Haryana) ಮೂವರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಹಿಂತೆಗೆದುಕೊಂಡ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ (President Rule) ಹೇರಲು ಮತ್ತು ಹೊಸ ಚುನಾವಣೆಗೆ ಕಾಂಗ್ರೆಸ್ ಒತ್ತಾಯಿಸುತ್ತಿರುವುದರಿಂದ ಹರಿಯಾಣ ರಾಜಕೀಯ ಬಿಕ್ಕಟ್ಟಿಗೆ ಹೊಸ ತಿರುವು ಸಿಕ್ಕಿದೆ. ಮೂವರು ಸ್ವತಂತ್ರ ಶಾಸಕರು ಬಿಜೆಪಿ ಸರ್ಕಾರದಿಂದ ಬೆಂಬಲವನ್ನು ಹಿಂಪಡೆದು ಕಾಂಗ್ರೆಸ್ (Congress) ಪಕ್ಷಕ್ಕೆ ಬೆಂಬಲ ಘೋಷಿಸಿದ್ದರಿಂದ ಹರಿಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಮತ್ತು ಹೊಸ ಚುನಾವಣೆಗೆ ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ. ಸಿಎಂ ನಯಾಬ್ ಸಿಂಗ್ ಸೈನಿ (Nayab Singh Saini) ನೇತೃತ್ವದ ಬಿಜೆಪಿ ಸರ್ಕಾರವು ಪ್ರಸ್ತುತ ಅಸೆಂಬ್ಲಿಯಲ್ಲಿ 40 ಶಾಸಕರನ್ನು ಹೊಂದಿದೆ. ಈಗ 88 ಸದಸ್ಯರ ಸದನದಲ್ಲಿ ಬಹುಮತಕ್ಕೆ 45 ಸ್ಥಾನಗಳು ಬೇಕಾಗುತ್ತದೆ. ಇಬ್ಬರು ಸ್ವತಂತ್ರ ಶಾಸಕರ ಬೆಂಬಲವನ್ನು ಹೊರತುಪಡಿಸಿ ಇನ್ನೂ ಮೂವರ ಬೆಂಬಲದ ಅಗತ್ಯವಿದೆ. ಹೀಗಾಗಿ, ಬಹುಮತ ಸಾಬೀತುಪಡಿಸಲು ಸೈನಿ ಸರ್ಕಾರ ಒದ್ದಾಡುವಂತಾಗಿದೆ.
ಮೂವರು ಪಕ್ಷೇತರ ಶಾಸಕರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ನಾವು ರಾಜ್ಯಪಾಲರಿಗೆ ಪತ್ರ ಬರೆಯಲಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಬಹುಮತವಿಲ್ಲ. ಹೀಗಾಗಿ, ಅವರಿಗೆ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ. ಆದ್ದರಿಂದ ಸರ್ಕಾರವನ್ನು ವಜಾಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಹರಿಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಮತ್ತು ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಹೇಳಿದ್ದಾರೆ.
ಇದನ್ನೂ ಓದಿ: ಪೆನ್ಡ್ರೈವ್ ಕೇಸ್ನಲ್ಲಿ ಹಾಸನ ಬಿಜೆಪಿ ಮಾಜಿ ಶಾಸಕನ ಕೈವಾಡವಿದೆ: ಹೊಸ ಬಾಂಬ್ ಸಿಡಿಸಿದ ಕೈ ಶಾಸಕ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ತಮ್ಮ ಸರ್ಕಾರವು ತೊಂದರೆಯಲ್ಲಿಲ್ಲ ಮತ್ತು ಬಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬುಧವಾರ ಹೇಳಿದ್ದಾರೆ. ಮೂವರು ಪಕ್ಷೇತರ ಶಾಸಕರು ಹರಿಯಾಣ ರಾಜ್ಯದಲ್ಲಿ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಬಳಿಕ ಈ ಹೇಳಿಕೆ ನೀಡಿದ್ದಾರೆ.
ಶಾಸಕರಾದ ಸೋಂಬಿರ್ ಸಾಂಗ್ವಾನ್ (ದಾದ್ರಿ), ರಣಧೀರ್ ಸಿಂಗ್ ಗೊಲ್ಲೆನ್ (ಪುಂಡ್ರಿ) ಮತ್ತು ಧರಂಪಾಲ್ ಗೊಂಡರ್ (ನಿಲೋಖೇರಿ) ಮಂಗಳವಾರ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡರು. ಬಳಿಕ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಇದರಿಂದ ರಾಜ್ಯ ವಿಧಾನಸಭೆಯಲ್ಲಿ ಸೈನಿ ಸರ್ಕಾರಕ್ಕೆ ಬಹುಮತ ಇಲ್ಲದಂತಾಗಿದೆ.
ಇದನ್ನೂ ಓದಿ: ಹರಿಯಾಣ ಸರ್ಕಾರಕ್ಕೆ ಕೈ ಕೊಟ್ಟು ಕಾಂಗ್ರೆಸ್‌ಗೆ ಬೆಂಬಲ ನೀಡಿದ ಮೂವರು ಸ್ವತಂತ್ರ ಶಾಸಕರು
ಹರಿಯಾಣದಲ್ಲಿ ಕೆಲವು ತಿಂಗಳ ಹಿಂದೆ ಉಂಟಾದ ರಾಜಕೀಯ ಬಿಕ್ಕಟ್ಟಿನಲ್ಲಿ ಮನೋಹರ್ ಲಾಲ್ ಖಟ್ಟರ್ ಹರಿಯಾಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ನಯಾಬ್ ಸಿಂಗ್ ಸೈನಿ ರಾಜ್ಯದ ಮುಖ್ಯಮಂತ್ರಿಯಾದರು. ಇದೀಗ, ಹರಿಯಾಣ ರಾಜಕೀಯ ಬಿಕ್ಕಟ್ಟಿನಲ್ಲಿ ಹೊಸ ತಿರುವು ಉಂಟಾಗಿದ್ದು, ಮೂವರು ಸ್ವತಂತ್ರ ಶಾಸಕರು ಬಿಜೆಪಿಯಿಂದ ಬೆಂಬಲವನ್ನು ಹಿಂಪಡೆದಿರುವುದರಿಂದ ಸೈನಿಕ ಸರ್ಕಾರವೂ ಅತಂತ್ರವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ