ಸಂವಿಧಾನಕ್ಕೆ ಕಾಂಗ್ರೆಸ್ ಎಷ್ಟು ಬೆಲೆ ಕೊಡುತ್ತೆ ಅಂತ ಗೊತ್ತು; ಅದರದ್ದು ಬರೀ ಬೂಟಾಟಿಕೆ: ಅನುರಾಗ್ ಠಾಕೂರ್ ಟೀಕೆ

Anurag Thakur criticizes Congress on constitution: ಈ ದೇಶದಲ್ಲಿ ಸಂವಿಧಾನಕ್ಕೆ ಯಾರಾದರೂ ಅವಮಾನ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬದವರೇ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ನೆಹರೂ ಕಾಲದಿಂದ ಹಿಡಿದು ಇಂದಿರಾ ಗಾಂಧಿವರೆಗೆ ಮತ್ತು ಮನಮೋಹನ್ ಸಿಂಗ್ ಅವಧಿಯಲ್ಲಿ 80ಕ್ಕೂ ಹೆಚ್ಚು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ ಎಂದು ಠಾಕೂರ್ ತಿಳಿಸಿದ್ದಾರೆ. 1975ರ ಜೂನ್ 25ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ಜೂನ್ 15 ಅನ್ನು ಸಂವಿಧಾನ ಹತ್ಯಾ ದಿನ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ.

ಸಂವಿಧಾನಕ್ಕೆ ಕಾಂಗ್ರೆಸ್ ಎಷ್ಟು ಬೆಲೆ ಕೊಡುತ್ತೆ ಅಂತ ಗೊತ್ತು; ಅದರದ್ದು ಬರೀ ಬೂಟಾಟಿಕೆ: ಅನುರಾಗ್ ಠಾಕೂರ್ ಟೀಕೆ
ಅನುರಾಗ್ ಠಾಕೂರ್

Updated on: Jul 21, 2024 | 6:39 PM

ನವದೆಹಲಿ, ಜುಲೈ 21: ರಾಹುಲ್ ಗಾಂಧಿ ಮತ್ತವರ ಕಾಂಗ್ರೆಸ್ ಪಕ್ಷ ಈ ದೇಶದ ಸಂವಿಧಾನದ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. ಸಂವಿಧಾನವನ್ನು ಯಾರಾದರೂ ಅವಮಾನಿಸಿದ್ದರೆ ಅದು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದವರೇ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಟೀಕಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಸಂವಿಧಾನವನ್ನು ಹತ್ತಿಕ್ಕುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಅನುರಾಗ್ ಠಾಕೂರ್ ಅವರು, ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಬಾರಿ ಬಾರಿ ತಿದ್ದುಪಡಿ ತಂದ ಸಂಗತಿಯನ್ನು ಉಲ್ಲೇಖಿಸಿದ್ದಾರೆ.

‘ಕಾಂಗ್ರೆಸ್ ಪಕ್ಷ ಕಾಲ ಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಕೂಡ ಹೇರಿತ್ತು. ವಿಪಕ್ಷಗಳ ನಾಯಕರು, ಮಾಧ್ಯಮ ವ್ಯಕ್ತಿಗಳನ್ನು ಜೈಲಿಗೆ ಹಾಕಿತ್ತು. ಸಾಮಾನ್ಯ ಪ್ರಜೆಯ ಹಕ್ಕುಗಳನ್ನು ಕಿತ್ತುಕೊಂಡಿತ್ತು. ಸ್ವತಂತ್ರ ಭಾರತದಲ್ಲಿ ಇದು ಅತ್ಯಂತ ಕರಾಳ ದಿನ (ತುರ್ತು ಪರಿಸ್ಥಿತಿ) ಆಗಿದೆ. ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿವರೆಗೂ ಮತ್ತು ಮನಮೋಹನ್ ಸಿಂಗ್ ಅವಧಿಯಲ್ಲಿ ಸಂವಿಧಾನಕ್ಕೆ 80ಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿತ್ತು,’ ಎಂದು ಅನುರಾಗ್ ಠಾಕೂರ್ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ತಿಳಿಸಿದ್ದಾರೆ.

‘ರಾಹುಲ್ ಗಾಂಧಿ ಮತ್ತವರ ಕಾಂಗ್ರೆಸ್ ಪಕ್ಷ ಸಂವಿಧಾನದ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ. ಸಂವಿಧಾನದ ಪ್ರತಿಯನ್ನು ತೋರಿಸಿದರೆ ಮತ್ತು ಸುಳ್ಳು ಪ್ರಮಾಣಗಳನ್ನು ಮಾಡಿದರೆ ಸತ್ಯ ಬದಲಾಗದು. ಈ ದೇಶದ ಸಂವಿಧಾನವನ್ನು ಯಾರಾದರೂ ಅವಮಾನಿಸಿದ್ದರೆ ಅದು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವೇ ಆಗಿದೆ.

ಇದನ್ನೂ ಓದಿ: ಕೇರಳದಲ್ಲಿ ವಿದೇಶಾಂಗ ಕಾರ್ಯದರ್ಶಿಯ ನೇಮಕ; ಪಿಣರಾಯಿ ನಡೆಗೆ ಕಾಂಗ್ರೆಸ್, ಬಿಜೆಪಿ ಟೀಕೆ

‘ರಾಹುಲ್ ಗಾಂಧಿ ಈ ಸಂವಿಧಾನದ ಪ್ರಸ್ತಾವನೆಯನ್ನು ಎಂದಾದರೂ ಓದಿದ್ದಾರಾ? ಕಾಂಗ್ರೆಸ್ ಸರ್ಕಾರದ ಕರಾಳ ಕೃತ್ಯಗಳು ಮತ್ತು ಸಂವಿಧಾನ ವಿರೋಧಿ ಕಾರ್ಯಗಳನ್ನು ಬಣ್ಣಿಸುತ್ತದೆ. ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡರೆ ಆಗಲ್ಲ, ಅದನ್ನು ಓದುವುದು ಮುಖ್ಯ. ಸಂವಿಧಾನದ ಕರಾಳ ಅಧ್ಯಾಯವನ್ನು ಈ ದೇಶದಲ್ಲಿ ತೆರೆದಿದ್ದು ಕಾಂಗ್ರೆಸ್. ನೀವು ಬೂಟಾಟಿಕೆ ಬಿಟ್ಟು ದೇಶದ ಕ್ಷಮೆ ಯಾಚಿಸಬೇಕು,’ ಎಂದು ಅನುರಾಗ್ ಠಾಕೂರ್ ಆಗ್ರಹಿಸಿದ್ದಾರೆ.

1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಅದೇ ಜೂನ್ 25 ಅನ್ನು ಸಂವಿಧಾನ ಹತ್ಯಾ ದಿನ ಎಂದು ಆಚರಿಸಲು ಸರ್ಕಾರ ಪ್ರಸ್ತಾವಿಸಿದೆ. ಈ ಸಂವಿಧಾನದ ವಿಚಾರ ಪರ ವಿರೋಧ ಚರ್ಚೆಗೆ ಆಸ್ಪದವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ