CWC meeting: 4 ರಾಜ್ಯಗಳ ವಿಧಾನಸಭಾ ಚುನಾವಣೆ, ಅಧ್ಯಕ್ಷಗಿರಿ ಬಗ್ಗೆ ಚರ್ಚೆ
ಪಕ್ಷದ ಹಿರಿಯ ನಾಯಕರು ಸೇರಿದಂತೆ ಹಲವರು ಪಕ್ಷದಲ್ಲಿ ಪ್ರಮುಖ ಬದಲಾವಣೆಗಳನ್ನು ಕೋರಿ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.
ದೆಹಲಿ: ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಇಂದು ಸಭೆ ಸೇರಲಿದೆ. ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಪಕ್ಷದ ಆಂತರಿಕ ಚುನಾವಣೆಗಳನ್ನು ಸಭೆಯಲ್ಲಿ ಚರ್ಚಿಸಬಹುದು ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕರು ಸೇರಿದಂತೆ ಹಲವರು ಪಕ್ಷದಲ್ಲಿ ಪ್ರಮುಖ ಬದಲಾವಣೆಗಳನ್ನು ಕೋರಿ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಹಾಗೂ ಪಕ್ಷದ ಯುವ ನಾಯಕರು, ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಇಂದಿನ ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಗಳಿವೆ.
ಪಕ್ಷದಲ್ಲಿ ಬದಲಾವಣೆ ಬಯಸುವ ನಾಯಕರು ತಾವು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸಭೆ ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದ ನಾಯಕರೊಬ್ಬರು ನಾವು CWC ಸಭೆಯಲ್ಲಿ ಬಿಹಾರ ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಲು ಬಯಸುತ್ತೇವೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಬಹಳ ನಿರಾಶಾದಾಯಕವಾಗಿತ್ತು. ಪಕ್ಷ 70 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 19 ಸ್ಥಾನಗಳನ್ನು ಗೆದ್ದಿದೆ ಹೀಗಾಗಿ ಪಕ್ಷದಲ್ಲಿ ಹಲವು ಬದಲಾವಣೆಗಳು ಬೇಕಾಗಿದೆ ಎಂದರು.
ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಬೇಕು: ಯುವ ನಾಯಕರ ಬೇಡಿಕೆ.. CWC ಮುಂದಿನ ಪಕ್ಷದ ಮುಖ್ಯಸ್ಥರಾಗಿ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಬೇಕೆಂದು ಪಕ್ಷದ ಯುವ ನಾಯಕರು ಮನವಿ ಮಾಡಿದ್ದಾರೆ. ಹೀಗಾಗಿ ಎಐಸಿಸಿ, ನಿಯಮಿತ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೊದಲು ಮಧ್ಯಂತರ ಅಧ್ಯಕ್ಷರನ್ನು ನೇಮಿಸಬಹುದು ಎನ್ನಲಾಗಿದೆ. ಆದರೆ 2019 ರ ಲೋಕಸಭಾ ಚುನಾವಣೆಯ ಕಹಿ ಸೋಲಿನ ನಂತರ ತಾವು ತೊರೆದ ಹುದ್ದೆಗೆ ಮತ್ತೊಮ್ಮೆ ಮರಳಲು ರಾಹುಲ್ ಗಾಂಧಿ ಯಾವುದೇ ಸೂಚನೆ ನೀಡಿಲ್ಲ.
ಕಳೆದ ಕೆಲವು ತಿಂಗಳುಗಳಲ್ಲಿ ನಾವು ರಾಹುಲ್ ಗಾಂಧಿಯವರನ್ನು ಹಲವಾರು ಬಾರಿ ಕೇಳಿದ್ದೇವೆ. ಆದರೆ ಅವರು ಅಧ್ಯಕ್ಷರಾಗುವ ಬಗ್ಗೆ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪಕ್ಷದ ಮುಖ್ಯಸ್ಥರ ಹುದ್ದೆಗೆ ಸಾಂಸ್ಥಿಕ ಚುನಾವಣೆಯ ವಿಷಯವು ಸಭೆಯಲ್ಲಿ ಉದ್ಭವಿಸಿದರೆ, ಎಐಸಿಸಿಯ ಸಮಗ್ರ ಅಧಿವೇಶನವನ್ನು ಕರೆಯಬೇಕೆ ಅಥವಾ ಮತದಾನವನ್ನು ರಾಜ್ಯ ಘಟಕಗಳ ಮಟ್ಟದಲ್ಲಿ ಮಾತ್ರ ನಡೆಸಬಹುದೇ ಎಂದು CWC ಇಂದು ನಿರ್ಧರಿಸಲ್ಲಿದೆ.
ಫೆಬ್ರವರಿಯೊಳಗೆ ಆಂತರಿಕ ಚುನಾವಣೆ ನಡೆಸಿ.. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಫೆಬ್ರವರಿಗೂ ಮೊದಲೇ ಪಕ್ಷವು ಆಂತರಿಕ ಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಹೊಸ ತಂಡವು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಿದ್ಧವಾಗಲು ಸಹಾಯವಾಗುತ್ತದೆ ಎಂಬುದು ಅವರ ಅನಿಸಿಕೆಯಾಗಿದೆ.
Published On - 11:48 am, Fri, 22 January 21