
ನವದೆಹಲಿ, ನವೆಂಬರ್ 26: ಸಂವಿಧಾನ ದಿನದಂದೇ ದೇಶದ ರಾಜಕೀಯದಲ್ಲಿ ಮೀಸಲಾತಿ ವಿಚಾರ ಮತ್ತೆ ಕಿಡಿ ಹೊತ್ತಿಸಿದೆ. ಒಬಿಸಿ ಸಮುದಾಯಕ್ಕೆ ಸಿಗುತ್ತಿರುವ ಮೀಸಲಾತಿಯಲ್ಲಿ ಕಡಿತ ಮಾಡಿ ಮುಸ್ಲಿಮರಿಗೆ ಕೋಟಾ ನೀಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಇಂತಹ ಮೀಸಲಾತಿ ನೀತಿಯನ್ನು ಸಂವಿಧಾನ ರಚನಾಕಾರರು, ಅದರಲ್ಲೂ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿರೋಧಿಸಿದ್ದರು ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಮುಸ್ಲಿಂ ಮೀಸಲಾತಿ ಕುರಿತು ಮೋದಿ ಪ್ರಸ್ತಾಪಿಸಿರುವ ಅಂಶಗಳೇನು? ಇಲ್ಲಿದೆ ಮಾಹಿತಿ.
ಪ್ರಧಾನಿ ಮೋದಿ ಲೇಖನದ ಪ್ರಮುಖ ಅಂಶಗಳು
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ತಮಗೂ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಸಂವಿಧಾನ ನೀಡಿದೆ ಎಂದು ಮೋದಿ ಹೇಳಿದ್ದಾರೆ. ವ್ಯಕ್ತಿಯ ಜನ್ಮ ಅಥವಾ ಕುಟುಂಬದ ಆರ್ಥಿಕ ಸ್ಥಿತಿ ಅವರ ಭವಿಷ್ಯವನ್ನು ನಿರ್ಧರಿಸಬಾರದು ಎಂಬುದು ಸಂವಿಧಾನದ ಆಶಯ ಎಂದು ತಿಳಿಸಿದ್ದಾರೆ. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್, ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಗೌರವ ಸಲ್ಲಿಸಿದ್ದಾರೆ.
ಸಂವಿಧಾನವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಭರವಸೆ ನೀಡುತ್ತದೆ. ಈ ಭರವಸೆಯನ್ನು ಜನರ ಬದುಕಿನಲ್ಲಿ ಸಾಕಾರಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮೋದಿ ಹೇಳಿದ್ದಾರೆ. ವಿಶ್ವಬ್ಯಾಂಕ್ ವರದಿಯನ್ನು ಉಲ್ಲೇಖಿಸಿ, ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಮುದ್ರಾ ಸಾಲ ಯೋಜನೆ, ಪಿಎಂ ಸ್ವನಿಧಿ ಮತ್ತು ಯುಪಿಐ ವ್ಯವಸ್ಥೆಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: ಹಿಂದೆ ಹಗರಣಗಳದ್ದೇ ಸುದ್ದಿ, ಈಗ ಹೂಡಿಕೆಗಳದ್ದೇ ಚರ್ಚೆ; ಬಿಹಾರದ ಹಿಂದಿನ ಸರ್ಕಾರಗಳಿಗೆ ಮೋದಿ ಟಾಂಗ್
ತಮ್ಮ ಸರ್ಕಾರದ ಅವಧಿಯಲ್ಲಿ ಜಾರಿಯಾದ ಮೂರು ತಿದ್ದುಪಡಿಗಳನ್ನು ಮೋದಿ ಉಲ್ಲೇಖಿಸಿದ್ದಾರೆ.
– 101ನೇ ತಿದ್ದುಪಡಿ: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ (GST) ಜಾರಿಗೆ ಸಂವಿಧಾನಾತ್ಮಕ ವ್ಯವಸ್ಥೆ ಕಲ್ಪಿಸಿತು.
– 102ನೇ ತಿದ್ದುಪಡಿ: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ (NCBC) ಸಾಂವಿಧಾನಿಕ ಸ್ಥಾನಮಾನ ನೀಡಿತು.
– 103ನೇ ತಿದ್ದುಪಡಿ: ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಶೇ.10ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಿತು.
ಸಂವಿಧಾನವು ಮೊದಲ ಬಾರಿಗೆ ಎಂಟನೇ ಅನುಸೂಚಿಯಲ್ಲಿರುವ 22 ಭಾಷೆಗಳಲ್ಲೂ ಲಭ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದರಿಂದ ದೇಶದ ವಿವಿಧ ಭಾಷೆ ಮಾತನಾಡುವ ಜನರು ಸಂವಿಧಾನವನ್ನು ತಮ್ಮ ಭಾಷೆಯಲ್ಲೇ ಓದಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಇದಲ್ಲದೆ, ಬ್ರಿಟಿಷರ ಕಾಲದ ಕಾನೂನು ವ್ಯವಸ್ಥೆಯಲ್ಲಿದ್ದ ಶಿಕ್ಷೆ ಆಧಾರಿತ ದೃಷ್ಟಿಕೋನದಿಂದ ಹೊರಬಂದು, ನಾಗರಿಕರಿಗೆ ನ್ಯಾಯ ಒದಗಿಸುವುದಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನದ ಮೂಲ ಆಶಯಗಳಿಗೆ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಧಕ್ಕೆ ತಂದಿವೆ ಎಂದು ಮೋದಿ ಆರೋಪಿಸಿದ್ದಾರೆ. 1951ರ ಮೊದಲ ತಿದ್ದುಪಡಿ ಮೂಲಕ ಮೂಲಭೂತ ಹಕ್ಕುಗಳ ಮೇಲಿನ ಕೆಲವು ನಿರ್ಬಂಧಗಳನ್ನು ಹೆಚ್ಚಿಸಲಾಯಿತು ಎಂದು ಟೀಕಿಸಿದ್ದಾರೆ.
1976ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಾರಿಗೆ ಬಂದ 42ನೇ ತಿದ್ದುಪಡಿಯು ನ್ಯಾಯಾಂಗದ ಪರಿಶೀಲನಾ ಅಧಿಕಾರವನ್ನು ಮೊಟಕುಗೊಳಿಸಿತು ಎಂದು ಹೇಳಿದ್ದಾರೆ. ಅಧಿಕಾರದ ದುರುಪಯೋಗ ಹೇಗೆ ನಡೆಯಬಹುದು ಎಂಬುದನ್ನು ತಿಳಿಯಲು ಯುವಜನರು 38ನೇ ಮತ್ತು 39ನೇ ತಿದ್ದುಪಡಿಗಳನ್ನು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಅಲ್ಲದೆ, ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು ಸಂವಿಧಾನದ 356ನೇ ವಿಧಿಯನ್ನು ಕಾಂಗ್ರೆಸ್ ಸುಮಾರು 100 ಬಾರಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಈ ಅಂಕಿ ಮತ್ತು ಆರೋಪಗಳು ಪ್ರಧಾನಿ ಲೇಖನದಲ್ಲಿ ಉಲ್ಲೇಖಿಸಿರುವ ಅವರ ವಾದಗಳಾಗಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35A ವಿಧಿಗಳ ಬದಲಾವಣೆಯನ್ನು ಐತಿಹಾಸಿಕ ತಪ್ಪಿನ ತಿದ್ದುಪಡಿ ಎಂದು ಮೋದಿ ಬಣ್ಣಿಸಿದ್ದಾರೆ. ಈ ವಿಧಿಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಸಮುದಾಯಗಳು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಗದೆ ಅನ್ಯಾಯವಾಗಿತ್ತು ಎಂದು ಹೇಳಿದ್ದಾರೆ. ನಕ್ಸಲಿಸಂ ಕಡಿಮೆಯಾಗಿರುವುದರಿಂದ ಬುಡಕಟ್ಟು ಪ್ರದೇಶಗಳ ಬಡ ಜನರು ಭಯವಿಲ್ಲದೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಬಳಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ದೇಶದ ಅಭಿವೃದ್ಧಿಗೆ ಅಡ್ಡಿಯಾಗುವ ಪ್ರಯತ್ನ ಮಾಡುವವರನ್ನು ‘ದಿಮಾಗಿ ನಕ್ಸಲರು’ ಎಂದು ಟೀಕಿಸಿದ್ದಾರೆ. ಈ ಪದಪ್ರಯೋಗವೂ ಅವರ ರಾಜಕೀಯ ಅಭಿಪ್ರಾಯದ ಭಾಗವಾಗಿದೆ.
ವಿರೋಧ ಪಕ್ಷದ ಅತಿದೊಡ್ಡ ಪಕ್ಷವು ಒಬಿಸಿ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಬಯಸುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಸಂವಿಧಾನ ರಚನಾಕಾರರು, ಅದರಲ್ಲೂ ಡಾ. ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲಿನ ಮೀಸಲಾತಿಯನ್ನು ವಿರೋಧಿಸಿದ್ದರು ಎಂದು ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಈ ವಿಚಾರದಲ್ಲಿ ಅವರು ಕಾಂಗ್ರೆಸ್ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಟೀಕೆ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.
ಸಂವಿಧಾನ ರಚನೆಯಲ್ಲಿ ಮಹಿಳೆಯರ ಕೊಡುಗೆಯನ್ನು ಸ್ಮರಿಸಿದ ಮೋದಿ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ಸಿಗಬೇಕು ಎಂದು ಹೇಳಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಪಕ್ಷ ಅಡ್ಡಿಪಡಿಸಿದೆ ಎಂದು ಆರೋಪಿಸಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿದ್ದ ಸಂವಿಧಾನ (131ನೇ ತಿದ್ದುಪಡಿ) ಮಸೂದೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ದೊರೆಯದೆ ಅದು ಅಂಗೀಕಾರವಾಗಿರಲಿಲ್ಲ. ಮಸೂದೆಯ ಪರ 298 ಮತ್ತು ವಿರುದ್ಧ 230 ಮತಗಳು ಬಂದಿದ್ದವು. ಮಹಿಳಾ ಮೀಸಲಾತಿಗೆ ತಾವು ವಿರೋಧಿಗಳಲ್ಲ; ಅದನ್ನು ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಜೋಡಿಸುವ ವಿಧಾನಕ್ಕೆ ವಿರೋಧವಿದೆ ಎಂಬುದು ವಿರೋಧ ಪಕ್ಷಗಳ ಪ್ರಮುಖ ವಾದವಾಗಿತ್ತು. ಮಹಿಳೆಯರಿಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ಯಾವುದೇ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಮಹತ್ವದ ಜವಾಬ್ದಾರಿ ಇದೆ. ಆದರೆ, ಪ್ರಮುಖ ವಿರೋಧ ಪಕ್ಷವು ಸರ್ಕಾರದ ಕೆಲಸಗಳಿಗೆ ಅಡ್ಡಿಪಡಿಸುವ ಪಕ್ಷವಾಗಿ ಬದಲಾಗುತ್ತಿದೆ ಎಂದು ಮೋದಿ ಟೀಕಿಸಿದ್ದಾರೆ. ‘ವಿರೋಧ ಪಕ್ಷ’ ಎಂಬುದಕ್ಕಿಂತ ‘ಅವ್ರೋಧ್ ಪಕ್ಷ’ ಎಂದು ಕರೆಯುವುದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ. ಪ್ರಜಾಪ್ರಭುತ್ವದ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದು ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಿದಂತಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಗುರಿಯನ್ನು ಸಾಧಿಸಲು ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಎರಡು ತತ್ವಗಳನ್ನು ಪಾಲಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಸಂವಿಧಾನವು ಕೇವಲ ಕಾನೂನು ಪುಸ್ತಕವಾಗಿರದೆ, ಪ್ರತಿಯೊಬ್ಬ ಭಾರತೀಯನ ಜೀವನದ ಭಾಗವಾಗಬೇಕು ಎಂದು ಹೇಳಿದ್ದಾರೆ.
ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆ ಅಂಗೀಕರಿಸಿತು. ಆದರೆ ಅದು 1950ರ ಜನವರಿ 26ರಂದು ಜಾರಿಗೆ ಬಂತು. ಈ ದಿನದ ನೆನಪಿಗಾಗಿ 2015ರಿಂದ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನವು ದೇಶದ ಆಡಳಿತ ವ್ಯವಸ್ಥೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳನ್ನು ನೀಡುತ್ತದೆ.
ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವ ಅದರ ಪ್ರಮುಖ ಆಶಯಗಳಾಗಿವೆ. ಸಂವಿಧಾನ ದಿನದಂದು ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಪ್ರಸ್ತಾವನೆಯ ಸಾಮೂಹಿಕ ಓದು, ಚರ್ಚೆ, ಭಾಷಣ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ