Covid Vaccination: ಭಾರತದಲ್ಲಿ ಕೊರೊನಾ ಲಸಿಕೆ ನೀಡಿಕೆಗೆ ಸಿಕ್ಕಿದೆ ವೇಗ; ಮುಂದಿನ ವಾರ ಇನ್ನೂ ಹೆಚ್ಚು ಲಸಿಕೆ ನೀಡಿಕೆ! ಹೇಗೆ?
ಭಾರತದಲ್ಲಿ ಈಗ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ವೇಗ ಸಿಕ್ಕಿದೆ. ಕಳೆದೊಂದು ವಾರದಲ್ಲೇ ಬರೋಬ್ಬರಿ 4 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಒಂದು ವಾರದಲ್ಲೇ 4 ಕೋಟಿ ಡೋಸ್ ಲಸಿಕೆ ನೀಡಿರುವುದು ಈವೆರೆಗಿನ ಭಾರತದ ಗರಿಷ್ಠ ಸಾಧನೆ.
ಭಾರತದಲ್ಲಿ ಈಗ ಕಳೆದೊಂದು ವಾರದಿಂದ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ಬಾರಿ ವೇಗ ಸಿಕ್ಕಿದೆ. ಕೇವಲ ಒಂದೇ ವಾರದಲ್ಲಿ ಬರೋಬ್ಬರಿ ನಾಲ್ಕು ಕೋಟಿ ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ. ಜುಲೈ ತಿಂಗಳಿನಲ್ಲಿ ಪ್ರತಿ ನಿತ್ಯ ಸರಾಸರಿ 1 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಒಂದು ವಾರದಿಂದ ನಿತ್ಯ 50-60 ಲಕ್ಷ ಡೋಸ್ ಲಸಿಕೆ ನೀಡುತ್ತಿರುವುದರಿಂದ ಜುಲೈನಲ್ಲೂ ನಿತ್ಯ 1 ಕೋಟಿ ಡೋಸ್ ಲಸಿಕೆ ನೀಡುವ ವಿಶ್ವಾಸ ಮೂಡಿದೆ.
ಭಾರತದಲ್ಲಿ ಈಗ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ವೇಗ ಸಿಕ್ಕಿದೆ. ಕಳೆದೊಂದು ವಾರದಲ್ಲೇ ಬರೋಬ್ಬರಿ 4 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ. ಒಂದು ವಾರದಲ್ಲೇ 4 ಕೋಟಿ ಡೋಸ್ ಲಸಿಕೆ ನೀಡಿರುವುದು ಈವೆರೆಗಿನ ಭಾರತದ ಗರಿಷ್ಠ ಸಾಧನೆ. ಜೂನ್ 19ರಿಂದ ಜೂನ್ 25ರವರೆಗೆ ಒಂದು ವಾರದ ಅವಧಿಯಲ್ಲಿ 3.99 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ.
ಒಂದೇ ವಾರದಲ್ಲಿ 4 ಕೋಟಿ ಲಸಿಕೆ: ಬ್ರೆಜಿಲ್, ನೆದರ್ಲ್ಯಾಂಡ್ ಜನಸಂಖ್ಯೆಯಷ್ಟು ಲಸಿಕೆ ಭಾರತದಲ್ಲಿ ನೀಡಿಕೆ ಭಾರತದಲ್ಲಿ ಏಪ್ರಿಲ್ 3-9ರ ಅವಧಿಯಲ್ಲಿ 2.47 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿತ್ತು. ಇದಾದ ಬಳಿಕ ಜೂನ್ 12-18ರ ಅವಧಿಯಲ್ಲಿ 2.12 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿತ್ತು. ಈಗ ಅದರ ಎರಡು ಪಟ್ಟು ಲಸಿಕೆಯನ್ನು ಜನರಿಗೆ ನೀಡಿರುವುದು ವಿಶೇಷ. ದೇಶದಲ್ಲಿ ಮೇ 15-21ರ ಅವಧಿಯಲ್ಲಿ 92 ಲಕ್ಷ ಡೋಸ್ ಲಸಿಕೆ ನೀಡಿದ್ದೇ ಕನಿಷ್ಠ ಸಾಧನೆ.
ಭಾರತದಲ್ಲಿ ಕಳೆದ 7 ದಿನಗಳ ಲಸಿಕೆ ನೀಡಿಕೆ ವಿವರ: ಜೂನ್ 19- 38.10 ಲಕ್ಷ ಡೋಸ್ ಜೂನ್ 20- 30.39 ಲಕ್ಷ ಡೋಸ್ ಜೂನ್ 21- 90.86 ಲಕ್ಷ ಡೋಸ್ ಜೂನ್ 22- 54.22 ಲಕ್ಷ ಡೋಸ್ ಜೂನ್ 23- 64.00 ಲಕ್ಷ ಡೋಸ್ ಜೂನ್ 24- 60.73 ಲಕ್ಷ ಡೋಸ್ ಜೂನ್ 25- 61.19 ಲಕ್ಷ ಡೋಸ್ ಒಟ್ಟು- 3.99 ಕೋಟಿ ಡೋಸ್ ನೀಡಿಕೆ
ಭಾರತದ ರಾಷ್ಟ್ರೀಯ ಲಸಿಕಾ ಅಭಿಯಾನದ ತಾಂತ್ರಿಕ ಸಲಹಾ ತಂಡದ ಮುಖ್ಯಸ್ಥ ಡಾಕ್ಟರ್ ನರೇಂದ್ರ ಕುಮಾರ್ ಅರೋರಾ ಹೇಳುವ ಪ್ರಕಾರ, ಜುಲೈ ತಿಂಗಳಲ್ಲಿ ಭಾರತಕ್ಕೆ 20-22 ಕೋಟಿ ಕೊರೊನಾ ಲಸಿಕೆ ಲಭ್ಯವಾಗಲಿದೆ. ಹೀಗಾಗಿ ಜುಲೈ ತಿಂಗಳಿನಲ್ಲಿ ನಿತ್ಯ 1 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದಿದ್ದಾರೆ. ಇನ್ನೂ ಆಗಸ್ಟ್ ತಿಂಗಳಿನಲ್ಲಿ 30 ಕೋಟಿ ಡೋಸ್ ಲಸಿಕೆ ಪೂರೈಕೆಯಾಗುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರ ಇದೆ.
ಕೇಂದ್ರ ಸರ್ಕಾರದ ಪ್ಲ್ಯಾನ್ ಪ್ರಕಾರ, ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ 94 ಕೋಟಿ ಜನರಿಗೂ ಕೊರೊನಾ ಲಸಿಕೆ ನೀಡಲು ಸಾಧ್ಯ. ಎಲ್ಲವೂ ಕೇಂದ್ರ ಸರ್ಕಾರದ ಪ್ಲ್ಯಾನ್ ಪ್ರಕಾರವೇ ನಡೆಯುತ್ತಿದೆ ಎಂಬ ವಿಶ್ವಾಸದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳಿದ್ದಾರೆ. ಕೇಂದ್ರ ಸರ್ಕಾರದ ಪ್ಲ್ಯಾನ್ ಪ್ರಕಾರ, ಜುಲೈ ಅಂತ್ಯಕ್ಕೆ 51.6 ಕೋಟಿ ಡೋಸ್ ಲಸಿಕೆ ನೀಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಜೂನ್ 26ರ ಬೆಳಿಗ್ಗೆಯ ಮಾಹಿತಿಯ ಪ್ರಕಾರ, ದೇಶದಲ್ಲಿ ಇದುವರೆಗೂ 31.5 ಕೋಟಿ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ.
ಈ ತಿಂಗಳ ಬಾಕಿ ಉಳಿದಿರುವ ಇನ್ನೂ ಐದು ದಿನಗಳಲ್ಲಿ ನಿತ್ಯ ಸರಾಸರಿ 50 ಲಕ್ಷ ಡೋಸ್ ಲಸಿಕೆ ನೀಡಿದರೂ, 2.5 ಕೋಟಿ ಡೋಸ್ ಲಸಿಕೆ ನೀಡಲು ಸಾಧ್ಯ. 5 ದಿನಗಳಲ್ಲಿ ನಿತ್ಯ ಸರಾಸರಿ 60 ಲಕ್ಷ ಡೋಸ್ ನಂತೆ ಲಸಿಕೆ ನೀಡಿದರೇ, 3 ಕೋಟಿ ಡೋಸ್ ಲಸಿಕೆ ನೀಡಬಹುದು. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ಕನಿಷ್ಠ 2.5 ಕೋಟಿ ಡೋಸ್ ಲಸಿಕೆ ನೀಡಿದರೂ, ಒಟ್ಟಾರೆ ಕೊರೊನಾ ಲಸಿಕೆ ನೀಡಿಕೆಯು 34 ಕೋಟಿ ಡೋಸ್ ಗೆ ಏರಿಕೆಯಾಗಲಿದೆ. ಜುಲೈ ತಿಂಗಳಲ್ಲಿ ಕನಿಷ್ಠ 17 ಕೋಟಿ ಡೋಸ್ ಲಸಿಕೆ ನೀಡಿದರೂ, 51 ಕೋಟಿ ಡೋಸ್ ಲಸಿಕೆ ನೀಡುವ ಗುರಿ ತಲುಪಲು ಸಾಧ್ಯ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9) ಜುಲೈ ತಿಂಗಳಲ್ಲಿ ವಾರಕ್ಕೆ 5 ಕೋಟಿ ಡೋಸ್ ಲಸಿಕೆ ನೀಡುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಉತ್ತರ ಪ್ರದೇಶ ರಾಜ್ಯ ಸರ್ಕಾರವು ಜುಲೈ ತಿಂಗಳಿನಲ್ಲಿ ನಿತ್ಯ 10 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಂಡಿದೆ. ರಾಜಸ್ಥಾನ ಸರ್ಕಾರವು ನಿತ್ಯ 15 ಲಕ್ಷ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯ ತಮಗೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಹೇಳಿದೆ. ರಾಜಸ್ಥಾನದಲ್ಲಿ ಜೂನ್ 25 ರಂದು 9 ಲಕ್ಷ ಡೋಸ್ ಲಸಿಕೆ ನೀಡಿರುವುದು ಇದುವರೆಗಿನ ಗರಿಷ್ಠ ಸಾಧನೆ.
ಕಳೆದೊಂದು ವಾರದಲ್ಲಿ ಹೆಚ್ಚಿನ ಕೊರೊನಾ ಲಸಿಕೆ ನೀಡಿರುವ ರಾಜ್ಯವೆಂದರೇ, ಉತ್ತರ ಪ್ರದೇಶ. ಒಂದೇ ವಾರದಲ್ಲಿ ಉತ್ತರ ಪ್ರದೇಶ 45 ಲಕ್ಷ ಡೋಸ್ ಲಸಿಕೆಯನ್ನು ಜನರಿಗೆ ನೀಡಿದೆ. ಬಳಿಕ ಮಧ್ಯಪ್ರದೇಶ ರಾಜ್ಯವು 37 ಲಕ್ಷ ಡೋಸ್ ಲಸಿಕೆ ನೀಡಿದೆ. ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 31 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ 30 ಲಕ್ಷ ಡೋಸ್, ರಾಜಸ್ಥಾನದಲ್ಲಿ 28 ಲಕ್ಷ ಡೋಸ್, ಗುಜರಾತ್ ನಲ್ಲಿ 26 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಇನ್ನು ಕಳೆದೊಂದು ವಾರದಲ್ಲಿ ನೀಡಿರುವ ಲಸಿಕೆಯ ಪೈಕಿ ಶೇ.89 ರಷ್ಟು ಲಸಿಕೆಯನ್ನು ಮೊದಲ ಡೋಸ್ ಆಗಿ ನೀಡಲಾಗಿದೆ. ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಈಗ 18-44 ವರ್ಷ ವಯೋಮಾನದ ವರ್ಗದಲ್ಲಿ ಕೊರೊನಾ ಲಸಿಕೆಗೆ ಬಾರಿ ಬೇಡಿಕೆ ಬಂದಿದೆ.
(corona vaccine injection drive gets speed in july more will be vaccinated)
Published On - 3:19 pm, Sat, 26 June 21