ದೆಹಲಿ: ದೇಶದಲ್ಲಿ ಮುಂದಿನ ಸೆಪ್ಟೆಂಬರ್-ಅಕ್ಟೋಬರ್ ವೇಳೆಯಲ್ಲಿ ಕೊರೊನಾ ಸೋಂಕಿನ 3ನೇ ಅಲೆ ವ್ಯಾಪಿಸಬಹುದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ (Indian Institute of Technology – IIT) ಕಾನ್ಪುರ ಘಟಕದ ಪ್ರಾಧ್ಯಾಪಕ ರಾಜೇಶ್ ರಂಜನ್ ಮತ್ತು ಮಹೇಂದ್ರ ವರ್ಮಾ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ 3ನೇ ಅಲೆ ಯಾವಾಗ ಕಾಣಿಸಿಕೊಳ್ಳಬಹುದು ಎಂಬ ಬಗ್ಗೆ ಸರ್ಕಾರದ ಉನ್ನತ ಸ್ಥಾನಗಳಲ್ಲಿರುವವರು, ನೀತಿ ನಿರೂಪಕರು ಮತ್ತು ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
‘ದತ್ತಾಂಶಗಳನ್ನು ವಿಶ್ಲೇಷಿಸಿದಾಗ ನಮಗೆ 3ನೇ ಅಲೆಯ ಬಗ್ಗೆ ಮೂರು ಸಂಭಾವ್ಯತೆಗಳು ಗೋಚರಿಸಿದವು. 2ನೇ ಅಲೆ ವ್ಯಾಪಿಸಿದ ರೀತಿಯನ್ನು ನಮ್ಮ ವಿಶ್ಲೇಷಣೆಗೆ ಆಧಾರವಾಗಿ ಬಳಸಿದ್ದೆವು. ಭಾರತವು ಜುಲೈ 15ರ ಹೊತ್ತಿಗೆ ಸಂಪೂರ್ಣ ಅನ್ಲಾಕ್ ಆಗುತ್ತೆ ಎಂದು ಭಾವಿಸಿಯೇ 3ನೇ ಅಲೆ ಎಂದಿನಿಂದ ಕಾಣಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಮಾಡಿದ್ದೇವೆ’ ಎಂದು ತಜ್ಞರು ಹೇಳಿದ್ದಾರೆ.
‘ಮೊದಲ ಸಂಭಾವ್ಯತೆಯ ಪ್ರಕಾರ ಅಕ್ಟೋಬರ್ನಲ್ಲಿ 3ನೇ ಅಲೆ ಕಾಣಿಸಿಕೊಳ್ಳಬಹುದು. ಇದು 2ನೇ ಅಲೆಯ ಉತ್ತುಂಗ ಸ್ಥಿತಿಯಲ್ಲಿದ್ದ ಪ್ರಮಾಣಕ್ಕಿಂತಲೂ ಕಡಿಮೆ ತೀವ್ರತೆಯಲ್ಲಿರುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಎರಡನೇ ಸಂಭಾವ್ಯತೆಯ ಪ್ರಕಾರ ಹಲವು ರೂಪಾಂತರಗಳೊಂದಿಗೆ ಕೊರೊನಾ ವ್ಯಾಪಿಸುತ್ತದೆ. ಇದು ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾಣಿಸಿಕೊಳ್ಳಬಹುದು. ಇದರ ತೀವ್ರತೆ 2ನೇ ಅಲೆಗಿಂತಲೂ ಹೆಚ್ಚಾಗಿರುತ್ತದೆ. ಮೂರನೇ ಸಂಭಾವ್ಯತೆಯ ಪ್ರಕಾರ ಅಕ್ಟೋಬರ್ ಕೊನೆಯ ವಾರದಲ್ಲಿ 2ನೇ ಅಲೆಗಿಂತಲೂ ಕಡಿಮೆ ತೀವ್ರತೆಯಲ್ಲಿ ಸೋಂಕು ವ್ಯಾಪಿಸುತ್ತದೆ. ಜನರು ಸಾಮಾಜಿಕ ಅಂತರ ಮತ್ತು ಇತರ ಕೊವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಈ ಸಂಭಾವ್ಯತೆ ಸಾಧ್ಯ’ ಎಂದು ಹೇಳಿದ್ದಾರೆ.
ಕಾನ್ಪುರ ಐಐಟಿಯ ಪ್ರಾಧ್ಯಾಪಕ ರಂಜನ್ ಮತ್ತು ವರ್ಮಾ ತಮ್ಮ ತಂಡದ ಸಹಕಾರದೊಂದಿಗೆ ಭಾರತದ ಕೊವಿಡ್-19 ಮುನ್ಸೂಚನೆಗಳನ್ನು ಪ್ರತಿದಿನ ನೀಡುತ್ತಿದ್ದಾರೆ. ಈಶಾನ್ಯ ಭಾರತದ ಮಿಝೋರಾಂ, ಮಣಿಪುರ, ಸಿಕ್ಕಿಂ ಮತ್ತಿತರ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿಯೂ ಕೊರೊನಾ 2ನೇ ಅಲೆ ದೊಡ್ಡಮಟ್ಟದ ಆಘಾತವನ್ನೇ ಕೊಟ್ಟಿದೆ. ಕೇರಳ, ಗೋವಾ, ಸಿಕ್ಕಿಂ, ಮೇಘಾಲಯಗಳಲ್ಲಿ ಇಂದಿಗೂ ಪಾಸಿಟಿವಿಟಿ ಪ್ರಮಾಣ ಶೇ 10ಕ್ಕಿಂತ ಹೆಚ್ಚು ಇದೆ. ಉಳಿದ ಎಲ್ಲ ರಾಜ್ಯಗಳಲ್ಲಿಯೂ ಪಾಸಿಟಿವಿಟಿ ಪ್ರಮಾಣ ಶೇ 10ಕ್ಕೂ ಕಡಿಮೆಯಿದೆ.
ಭಾರತದ ಸರಾಸರಿ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಜೂನ್ 19ರಂದು ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 63,000ಕ್ಕೆ ಇಳಿದಿತ್ತು. 2ನೇ ಅಲೆಯ ಉತ್ತುಂಗದಲ್ಲಿ 4 ಲಕ್ಷ ಸೋಂಕು ಪ್ರಕರಣ ವರದಿಯಾಗಿತ್ತು ಎಂಬುದನ್ನು ಗಮನಿಸಿದರೆ ಪರಿಸ್ಥಿತಿ ಸುಧಾರಿಸಿರುವುದು ಅರಿವಿಗೆ ಬರುತ್ತದೆ.
ಈ ಅಧ್ಯಯನವು ಲಸಿಕೆ ಪರಿಣಾಮಗಳನ್ನು ಪರಿಗಣಿಸಿಲ್ಲ. ಲಸಿಕೆ ಅಭಿಯಾನಕ್ಕೆ ಹೊಸ ವೇಗ ಸಿಕ್ಕರೆ ಸಹಜವಾಗಿಯೇ ಪಾಸಿಟಿವ್ ಪ್ರಮಾಣ ಕಡಿಮೆಯಾಗುತ್ತದೆ. ಈ ವಾರದ ಕೊನೆಯಲ್ಲಿ ಕೊರೊನಾ 3ನೇ ಅಲೆಯ ಬಗ್ಗೆ ಐಐಟಿ-ಕಾನ್ಪುರದ ಮತ್ತೊಂದು ಅಧ್ಯಯನ ವರದಿ ಪ್ರಕಟವಾಗಲಿದೆ.
(Coronavirus third wave peak in September October says IIT Kanpur Study)
ಇದನ್ನೂ ಓದಿ: ಕೊರೊನಾ 3ನೇ ಅಲೆ; ಮಕ್ಕಳಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ
ಇದನ್ನೂ ಓದಿ: Coronavirus 3rd Wave: ಭಾರತದಲ್ಲಿ ಅಕ್ಟೋಬರ್ಗೆ ಕೊವಿಡ್ 3ನೇ ಅಲೆ: ವೈದ್ಯಕೀಯ ಕ್ಷೇತ್ರದ ತಜ್ಞರ ವಿಶ್ಲೇಷಣೆ