ತಮ್ಮ 9 ದಿನದ ಹಸುಗೂಸಿಗೆ ವಿಷ ಹಾಕಿ ಹತ್ಯೆ ಮಾಡಿ, ಶವವನ್ನು ಹೂತು ಹಾಕಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಶಿಶು ಹತ್ಯೆ ಪ್ರಕರಣದಲ್ಲಿ ತಮಿಳುನಾಡಿನ ವೆಲ್ಲೂರು ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಮೊದಲನೆಯದ್ದು ಹೆಣ್ಣುಮಗುವಿತ್ತು, ಈಗ ಎರಡನೆಯದೂ ಹೆಣ್ಣಾಗಿದೆ ಅದು ತಮಗೆ ಬೇಡ ಎಂದು ಹೇಳಿ ಶಿಶುವಿಗೆ ವಿಷ ಉಣಿಸಿ ಹೆತ್ತವರೇ ಕೊಲೆ ಮಾಡಿದ್ದರು.
ಈಗಾಗಲೇ ಎರಡು ವರ್ಷದ ಮಗಳನ್ನು ಹೊಂದಿರುವ ಸಿ ಜೀವಾ ಮತ್ತು ಜೆ ಡಯಾನಾ ದಂಪತಿಗೆ ಆಗಸ್ಟ್ 27ರಂದು ಎರಡನೇ ಹೆಣ್ಣುಮಗು ಹುಟ್ಟಿತ್ತು. ಡಯಾನಾ ಹೆರಿಗೆಯ ಸಮಯದಲ್ಲಿ ತೊಂದರೆಯಾದ ಕಾರಣ ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಡಿಸ್ಚಾರ್ಜ್ ಆಗಿದ್ದು ಮನೆಗೆ ಮರಳಿದ ನಂತರ, ದಂಪತಿ ತಮ್ಮ ನವಜಾತ ಶಿಶುವಿಗೆ ವಿಷಪೂರಿತ ಹಾಲನ್ನು ಕುಡಿಸಿದ್ದಾರೆ. ಮಗು ಸಾವನ್ನಪ್ಪಿದಾಗ, ಯಾವುದೇ ಸಂಬಂಧಿಕರಿಗೆ ತಿಳಿಸದೆ ಆಕೆಯ ಶವವನ್ನು ತಮ್ಮ ಹಿತ್ತಲಿನಲ್ಲಿಯೇ ಹೂತಿದ್ದರು.
ಮತ್ತಷ್ಟು ಓದಿ: ಬಡಿಗೆಯಿಂದ ಹೊಡೆದು ಪತ್ನಿ ಕೊಲೆ; ಪ್ರಕರಣ ಮುಚ್ಚಿಹಾಕಲು ಶವ ಸುಟ್ಟು ಹಾಕಿದ ಹಂತಕ ಸಿಕ್ಕಿಬಿದ್ದಿದ್ದೇಗೆ?
ಡಯಾನಾ ತನ್ನ ತಂದೆಗೆ ಕರೆ ಮಾಡಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಪಟ್ಟಿದೆ ಎಂದು ಹೇಳಿದ್ದಾಳೆ. ಆಗ ಅವರ ತಂದೆಗೆ ಅನುಮಾನ ಬಂದಿದೆ, ಮಗುವಿನ ಅನುಮಾನಾಸ್ಪದ ಸಾವಿನ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆಗಮಿಸಿ ತನಿಖೆ ನಡೆಸಿದಾಗ ದಂಪತಿ ಮನೆಯಿಂದ ಪರಾರಿಯಾಗಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸೆ.5ರಂದು ಮಗುವಿನ ಮೃತದೇಹವನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ.
ಪೋಷಕರನ್ನು ಪತ್ತೆಹಚ್ಚಲು ವೆಲ್ಲೂರು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದರು ಮತ್ತು ಅಂತಿಮವಾಗಿ ಇಬ್ಬರೂ ಶಂಕಿತರನ್ನು ಬಂಧಿಸಲಾಯಿತು. ತನಿಖೆ ಮುಂದುವರಿದಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ