ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ತಂಡ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಯ ಅನುಮೋದನೆಗೆ ಹೆಚ್ಚುವರಿ ದಾಖಲೆಗಳನ್ನು ಕೋರಿದೆ. ಕೋವಾಕ್ಸಿನ್ ಅಭಿವೃದ್ಧಿಪಡಿಸಿದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಲಸಿಕೆಯ ತುರ್ತು ಬಳಕೆಯ ಅನುಮತಿಗಾಗಿ ಏಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ EOI ಸಲ್ಲಿಸಿತ್ತು.
ಭಾರತ ಮೂಲದ ಕೊವಿಡ್ ಲಸಿಕೆಗಳ ತುರ್ತು ಬಳಕೆಯ ಪಟ್ಟಿಗಾಗಿ ಕೋವ್ಯಾಕ್ಸಿನ್ನಲ್ಲಿನ ಡೇಟಾವನ್ನು ಪರಿಶೀಲಿಸಲು ತಾಂತ್ರಿಕ ಸಲಹಾ ತಂಡ ಮಂಗಳವಾರ ಸಭೆ ಸೇರಿತ್ತು. ಈ ಲಸಿಕೆಯ ಜಾಗತಿಕ ಬಳಕೆಗಾಗಿ ಅಂತಿಮ ಮೌಲ್ಯಮಾಪನವನ್ನು ನಡೆಸಲು ತಯಾರಕರಿಂದ ಹೆಚ್ಚುವರಿ ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಸಭೆಯ ಬಳಿಕ ತಿಳಿಸಿದೆ.
ಕೊವಿಡ್ ಸೋಂಕಿನ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಶೇ. 77.8ರಷ್ಟು ಪರಿಣಾಮಕಾರಿಯಾಗಿದೆ. ಹಾಗೇ ಹೊಸ ಡೆಲ್ಟಾ ರೂಪಾಂತರಿ ವೈರಸ್ ವಿರುದ್ಧ ಶೇ. 65.2ರಷ್ಟು ರಕ್ಷಣೆಯನ್ನು ಪ್ರದರ್ಶಿಸಿದೆ. ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಫೈಜರ್-ಬಯೋಎನ್ಟೆಕ್, ಆಸ್ಟ್ರಾಜೆನೆಕಾ, ಎಸ್ಕೆ ಬಯೋ/ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಜಾನ್ಸನ್ ಆ್ಯಂಡ್ ಜಾನ್ಸನ್-ಜಾನ್ಸ್ಸೆನ್, ಮಾಡರ್ನಾ ಮತ್ತು ಸಿನೋಫಾರ್ಮ್ ಕೊವಿಡ್-19 ಲಸಿಕೆಗಳ ತುರ್ತು ಬಳಕೆಗಾಗಿ ಅನುಮೋದನೆ ನೀಡಿದೆ.
ಜಾಗತಿಕ ಮಟ್ಟದಲ್ಲಿ ತುರ್ತು ಬಳಕೆ ಪಟ್ಟಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಭಾರತ್ ಬಯೋಟೆಕ್ನಿಂದ ಮತ್ತಷ್ಟು ಸ್ಪಷ್ಟನೆಗಳನ್ನು ಕೇಳಿದೆ. ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮುನ್ನ ಅಂತಿಮ ಹಂತದ ಅಪಾಯ-ಪ್ರಯೋಜನ ಮೌಲ್ಯಮಾಪನವನ್ನು ನಡೆಸುವುದಕ್ಕೆ ಈ ಹೆಚ್ಚುವರಿ ಸ್ಪಷ್ಟನೆಗಳನ್ನು ಕೇಳಲಾಗಿದೆ. ನಿರೀಕ್ಷಿತ ಸಮಯದಲ್ಲಿ ಡೇಟಾ ಲಭ್ಯವಾದಲ್ಲಿ ನವೆಂಬರ್ 3ಕ್ಕೆ ಅಂತಿಮ ಮೌಲ್ಯಮಾಪನ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ ಮತ್ತೊಮ್ಮೆ ಸಭೆ ಸೇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಈ ವಾರಾಂತ್ಯದಲ್ಲಿ ಹೆಚ್ಚುವರಿ ಮಾಹಿತಿಗಳನ್ನು ಡಬ್ಲ್ಯುಎಚ್‌ಒಗೆ ಭಾರತ್ ಬಯೋಟೆಕ್ ಪೂರೈಸುವ ಸಾಧ್ಯತೆಯಿದ್ದು, ನ. 3ರಂದು ಮತ್ತೆ ಸಭೆ ನಡೆಸಲಿರುವ WHO ಅಂದು ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವುದಾಗಿ ಘೋಷಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: Covaxin: ನವೆಂಬರ್ನಲ್ಲಿ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಲಭ್ಯ ಸಾಧ್ಯತೆ; ಆರೋಗ್ಯ ಸಮಸ್ಯೆ ಇರುವವರಿಗೆ ಆದ್ಯತೆ
Covaxin for Children: 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ