ರಿಷಬ್ ಪಂತ್ ಅಪಘಾತ, ಕ್ರೈಂ ಸುದ್ದಿಗಳನ್ನು ಅಮಾನವೀಯವಾಗಿ ಪ್ರಸಾರ ಮಾಡಬೇಡಿ; ಟಿವಿ ಚಾನೆಲ್‌ಗಳಿಗೆ ಸರ್ಕಾರ ಖಡಕ್ ಸೂಚನೆ
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಟಿವಿ ಚಾನೆಲ್‌ಗಳಿಗೆ ಕಠಿಣ ಸಂದೇಶ ರವಾನಿಸಿದ್ದು, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯ್ದೆ, 1995ರ ಅಡಿಯಲ್ಲಿ ರೂಪಿಸಲಾದ ಕಾರ್ಯಕ್ರಮ ಸಂಹಿತೆಗೆ ಬದ್ಧವಾಗಿರುವಂತೆ ಸೂಚಿಸಿದೆ.
ನವದೆಹಲಿ: ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಅವರ ಕಾರು ಇತ್ತೀಚೆಗೆ ಡಿವೈಡರ್ಗೆ ಡಿಕ್ಕಿ ಹೊಡೆದು, ಸುಟ್ಟು ಭಸ್ಮವಾಗಿತ್ತು. ಅಚ್ಚರಿಯ ರೀತಿಯಲ್ಲಿ ರಿಷಬ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಅಪಘಾತ (Accident) ಮತ್ತು ಇತರ ಕೆಲವು ಅಪರಾಧ ಪ್ರಕರಣಗಳ ಬಗ್ಗೆ ಟಿವಿ ಚಾನೆಲ್ಗಳು ಬಹಳ ಅಸಹ್ಯಕರ ಮತ್ತು ಅಮಾನವೀಯವಾಗಿ ಸುದ್ದಿ ಬಿತ್ತರಿಸುತ್ತಿವೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಈ ರೀತಿಯ ಅಪರಾಧ ಪ್ರಕರಣಗಳ ಸುದ್ದಿ ಪ್ರಸಾರ ಮಾಡುವಾಗ ಸಂಬಂಧಿತ ಕಾನೂನಿನಡಿಯಲ್ಲಿ ನಿಗದಿಪಡಿಸಿದ ಕಾರ್ಯಕ್ರಮದ ಕೋಡ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚನೆ ನೀಡಿದೆ. ಈ ರೀತಿ ಅಮಾನವೀಯವಾಗಿ ಪ್ರಸಾರ ಮಾಡಲಾದ 12 ಕಾರ್ಯಕ್ರಮಗಳನ್ನು ಸಚಿವಾಲಯ ಪಟ್ಟಿ ಮಾಡಿದೆ. ಅದರಲ್ಲಿ ರಿಷಬ್ ಪಂತ್ ಅಪಘಾತದ ಸುದ್ದಿಯೂ ಸೇರಿದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು (ಸೋಮವಾರ) ಟಿವಿ ಚಾನೆಲ್‌ಗಳಿಗೆ ಕಠಿಣ ಸಂದೇಶವನ್ನು ರವಾನಿಸಿದ್ದು, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯ್ದೆ, 1995ರ ಅಡಿಯಲ್ಲಿ ರೂಪಿಸಲಾದ ಕಾರ್ಯಕ್ರಮ ಸಂಹಿತೆಗೆ ಬದ್ಧವಾಗಿರುವಂತೆ ಸೂಚಿಸಿದೆ. ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಕುರಿತ ಸುದ್ದಿ, ಕೆಲವು ಅಪಘಾತಗಳು, ಸಾವುಗಳು ಮತ್ತು ಹಿಂಸಾಚಾರದ ಘಟನೆಗಳನ್ನು ಟಿವಿ ಚಾನೆಲ್ಗಳು ಅತ್ಯಂತ ವೈಭವೀಕರಿಸಿ ಪ್ರಸಾರ ಮಾಡಿವೆ. ಸುದ್ದಿ ಪ್ರಸಾರ ಮಾಡುವವರಿಗೆ ಜವಾಬ್ದಾರಿ ಮತ್ತು ಶಿಸ್ತಿನ ನಿರ್ದಿಷ್ಟ ಪ್ರಜ್ಞೆ ಇರಬೇಕು. ಹಿಂಸಾತ್ಮಕ ಘಟನೆಗಳನ್ನು ವರದಿ ಮಾಡುವಾಗ ಚಿತ್ರಗಳನ್ನು ಮಸುಕುಗೊಳಿಸುವ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಹಿಂಸಾತ್ಮಕ ಘಟನೆಯನ್ನು ವೈಭವೀಕರಿಸಿ ಪ್ರಸಾರ ಮಾಡುವುದು ಅಸಹ್ಯಕರ, ಹೃದಯ ವಿದ್ರಾವಕ, ದುಃಖಕರ, ಅವಮಾನಕರ, ಸಂವೇದನಾಶೀಲವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.
ಇದನ್ನೂ ಓದಿ: Rishabh Pant Health: ಚೇತರಿಕೆಯ ನಡುವೆಯೂ ರಿಷಬ್ ಪಂತ್ ಡೆಹ್ರಾಡೂನ್ನಿಂದ ಮುಂಬೈಗೆ ಶಿಫ್ಟ್..!
ಇಂತಹ ವರದಿಗಳು ಮಕ್ಕಳ ಮೇಲೆ ಪ್ರತಿಕೂಲ ಮಾನಸಿಕ ಪರಿಣಾಮವನ್ನು ಬೀರುತ್ತವೆ. ಹಿಂಸಾತ್ಮಕ ವಿಡಿಯೋಗಳನ್ನು ಮಾಡ್ಯುಲೇಟ್ ಅಥವಾ ಎಡಿಟ್ ಮಾಡುವ ಪ್ರಯತ್ನವನ್ನು ಮಾಡದೆಯೇ ಸಾಮಾಜಿಕ ಮಾಧ್ಯಮದಿಂದ ವೀಡಿಯೊ ಕ್ಲಿಪ್‌ಗಳನ್ನು ತೆಗೆದುಕೊಂಡು ಯಥಾಪ್ರಕಾರವಾಗಿ ಪ್ರಸಾರ ಮಾಡಲಾಗುತ್ತಿದೆ. ಟಿವಿ ಚಾನೆಲ್‌ಗಳ ಇಂತಹ ಪ್ರಸಾರವು ಗಂಭೀರವಾದ ವಿಷಯವಾಗಿದೆ. ಪ್ರೋಗ್ರಾಂ ಕೋಡ್‌ಗೆ ಅನುಗುಣವಾಗಿ ಸಾವು ಸೇರಿದಂತೆ ಅಪರಾಧ, ಅಪಘಾತಗಳು ಮತ್ತು ಹಿಂಸಾಚಾರದ ಘಟನೆಗಳನ್ನು ವರದಿ ಮಾಡುವ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Mon, 9 January 23