ಲಸಿಕೆ ಪಡೆಯುವ ಮೊದಲೇ ಲಸಿಕಾ ಪ್ರಮಾಣಪತ್ರ ಲಭ್ಯವಾದ ಬಗ್ಗೆ ಹಲವು ಬಳಕೆದಾರರು ದೂರು ನೀಡಿದ ಬಳಿಕ ಕೊವಿನ್ ಪೋರ್ಟಲ್‌ಗೆ ಹೊಸ ಆಯ್ಕೆಯೊಂದನ್ನು ಸೇರಿಸಲಾಗಿದೆ. ಅದರಂತೆ, ಈಗ ಕೊವಿನ್ ಪೋರ್ಟಲ್‌ನಲ್ಲಿ ಯಾರೆಲ್ಲಾ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೋ ಹಾಗೂ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಿದ್ದಾರೋ ಅವರು ತಾವು ಲಸಿಕೆ ಪಡೆಯುವ ವೇಳೆಯಲ್ಲಿ 4 ಸಂಖ್ಯೆಯ ಸೆಕ್ಯುರಿಟಿ ಕೋಡ್‌ನ್ನು ಲಸಿಕಾ ಕೇಂದ್ರದಲ್ಲಿ ದಾಖಲಿಸಬೇಕಾಗಿದೆ. ಆ ಮೂಲಕ, ಲಸಿಕೆ ಪಡೆಯುತ್ತಿರುವುದು ತಾವೇ ಎಂದು ದಾಖಲಿಸಿಕೊಳ್ಳಬೇಕಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಹೇಳಿಕೆಯಂತೆ, ಕೆಲವೊಂದು ಪ್ರಕರಣಗಳಲ್ಲಿ ಜನರು ಲಸಿಕೆ ಪಡೆಯಲು ಹೋಗದಿದ್ದರೂ ಅವರಿಗೆ ಲಸಿಕೆ ಪಡೆದ ಬಗ್ಗೆ ಸಂದೇಶ ಬಂದಿದೆ. ಕೊವಿನ್ ಪೋರ್ಟಲ್ ಮೂಲಕ ನಿಗದಿಪಡಿಸಿದ ದಿನಾಂಕದಂದು ಲಸಿಕೆ ಪಡೆಯಲಾಗದವರಿಗೂ, ಲಸಿಕೆ ಪಡೆದ ಬಗ್ಗೆ ಎಸ್‌ಎಂಎಸ್ ಬಂದಿದೆ. ಈ ದೋಷ ಸರಿಪಡಿಸಲು ಹೊಸ ಆಯ್ಕೆಯೊಂದನ್ನು ಕೊವಿನ್ ಪೋರ್ಟಲ್‌ನಲ್ಲಿ ನೀಡಲಾಗಿದೆ.
ಈಗ ನಾವೇನು ಮಾಡಬೇಕು?
ಶನಿವಾರದ ಬಳಿಕ, ಪೋರ್ಟಲ್‌ನಲ್ಲಿ ಹೊಸ ಆಯ್ಕೆಇರಲಿದೆ. ಅದರಂತೆ, ಲಸಿಕೆ ಪಡೆಯುವ ಸ್ಥಳದಲ್ಲಿ, ಲಸಿಕೆ ಪಡೆಯುವವರಿಗೆ 4 ಸಂಖ್ಯೆಯ ಸೆಕ್ಯುರಿಟಿ ಕೋಡ್‌ನ್ನು ನೀಡಲಾಗುತ್ತದೆ. ಆ 4 ಸಂಖ್ಯೆಯ ಸೆಕ್ಯುರಿಟಿ ಕೋಡ್ ಅನ್ನು ಲಸಿಕಾ ಕೇಂದ್ರದಲ್ಲಿ ನಾವು ನೀಡಬೇಕಾಗುತ್ತದೆ. ಬಳಿಕ, ಈ ಕೋಡ್‌ನ್ನು ಕೊವಿನ್ ಪೋರ್ಟಲ್‌ನಲ್ಲಿ ದಾಖಲಿಸಿ ಲಸಿಕೆ ಪಡೆದ ಬಗ್ಗೆ ಖಚಿತಪಡಿಸಿಕೊಳ್ಳಬಹುದಾಗಿದೆ.
ಇದರಿಂದಾಗಿ ಬೇರೆಯದೇ ವ್ಯಕ್ತಿಗೆ ಲಸಿಕೆ ವಿತರಣೆಯಾಗುವುದು ಕಡಿಮೆಯಾಗಲಿದೆ. ಯಾರು ಅಪಾಯಿಂಟ್‌ಮೆಂಟ್ ಪಡೆದಿರುತ್ತಾರೋ ಅಂಥವರಿಗೆ ಸೂಕ್ತ ರೀತಿಯಲ್ಲಿ ಲಸಿಕೆ ಸಿಗಲಿದೆ.
ಈ ಸೌಲಭ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಿ
ಇಂತಹ ರಕ್ಷಣಾ ಸೌಲಭ್ಯಗಳನ್ನು ಹಲವು ಅಪ್ಲಿಕೇಶನ್‌ಗಳು ಬಳಸುತ್ತಿವೆ. ಸೇವೆ ಸರಿಯಾದ ರೀತಿಯಲ್ಲಿ ಒದಗುವಂತೆ ಈ ಕ್ರಮ ರೂಪಿಸಲಾಗುತ್ತದೆ. ಉದಾಹರಣೆಗೆ ಓಲಾ ಅಥವಾ ಊಬರ್‌ನಲ್ಲಿ ನಾಲ್ಕು ಸಂಖ್ಯೆಯ ಪಾಸ್‌ವರ್ಡ್‌ನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಈ ಪಾಸ್‌ವರ್ಡ್ ಟ್ಯಾಕ್ಸಿ ಡ್ರೈವರ್‌ಗೆ ತಿಳಿದಿರುವುದಿಲ್ಲ. ಚಾಲಕ ನಿಮ್ಮ ಬಳಿ ಬಂದಾಗ ನೀವು ಅವರಿಗೆ ಈ ನಾಲ್ಕು ಡಿಜಿಡ್ ಸಂಖ್ಯೆಯನ್ನು ತಿಳಿಸಬೇಕಾಗುತ್ತದೆ.
ಅದೇ ರೀತಿ, ಇ ಕಾಮರ್ಸ್ ಹಾಗೂ ಮತ್ತಿತರ ಸಂಸ್ಥೆಗಳು ಒನ್ ಟೈಮ್ ಪಾಸ್‌ವರ್ಡ್‌ಗಳನ್ನು ಗ್ರಾಹಕರಿಗೆ ನೀಡುತ್ತದೆ. ಕೊವಿನ್ ಪೋರ್ಟಲ್ ಕೂಡ ಲಸಿಕೆ ವಿತರಣೆ ವಿಚಾರದಲ್ಲಿ ಹೀಗೆ ಕಾರ್ಯನಿರ್ವಹಿಸಲಿದೆ. ಸರಿಯಾದ ವ್ಯಕ್ತಿಗೆ ಲಸಿಕೆ ಲಭ್ಯವಾಗಿದೆ ಎಂದು ದೃಢೀಕರಿಸಲು ಈ ಮಾರ್ಗ ಬಳಕೆಯಾಗಲಿದೆ.
ತಾವು ಲಸಿಕೆ ಪಡೆಯಲು ಅರ್ಹರಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಬಾಕಿ ಇದ್ದರೆ ಆದಷ್ಟು ಬೇಗ ಕೊವಿನ್ ಪೋರ್ಟಲ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಿ. ತಂತ್ರಜ್ಞಾನ ಬಳಸಲು ಕಷ್ಟವಾಗುವವರಿಗೆ ನೆರವಾಗಿ.
ಇದನ್ನೂ ಓದಿ: Explainer: ಲಸಿಕೆಗೆ ಬೇಡಿಕೆ ಹೆಚ್ಚು, ಪೂರೈಕೆಗೆ ಹಲವು ಸಮಸ್ಯೆ; ಉತ್ಪಾದನೆ ಹೆಚ್ಚಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು?
Explainer: ಭಾರತದಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಏಕಿಷ್ಟು ಪರದಾಟ? ಪರಿಹಾರವೇನು?
(CoWIN Portal gets new security code feature after getting complaints here are details)
Published On - 5:29 pm, Fri, 7 May 21